ಗ್ರಾಮೀಣ ಕ್ರೀಡೆಗಳೊಂದಿಗೆ ‘ಕೆಸರ್ಡ್ ಒಂಜಿ ದಿನ’ ಸಂಭ್ರಮಿಸಿದ ಅಲೆವೂರಿನ ನಾಗರಿಕರು
ಉಡುಪಿ: ಮಳೆಗಾಲ ಆರಂಭವಾದ್ರೆ ಕರಾವಳಿಯಲ್ಲಿ ಅಲ್ಲೊ ಇಲ್ಲೋ ಉಳಿದುಕೊಂಡಿರುವ ಕೃಷಿ ಚಟುವಟಿಕೆ ಆರಂಭವಾಗುತ್ತೆ. ಕೃಷಿ, ಗದ್ದೆ, ಕೆಸರು ಮಣ್ಣಿನಲ್ಲಿ ಬೆರೆಯುವ ಮಜವನ್ನು ಯುವಜನತೆಗೆ ಪರಿಚಯಿಸುವುದಕ್ಕಾಗಿಯೇ ಕೆಸರಿನಲ್ಲಿ ಒಂದು ದಿನ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ. ನಗರದ ಜನ ಒಂದು ದಿನ ಬಿಡುವು ಮಾಡಿ ಕೆಸರಿನಲ್ಲಿ ಆಟವಾಡಿ ಮೈಮರೆಯುವುದಕ್ಕೆ ಕೆಸರಿಗಿಳಿಯುತ್ತಾರೆ. ಈ ಕೆಸರು ಗದ್ದೆಯ ಕ್ರೀಡೆಗೆ ವಿಶೇಷ ನಂಬಿಕೆ ಕೂಡಾ ಜನರಲ್ಲಿದೆ. ವರ್ಷಕ್ಕೊಮ್ಮೆ ಕೆಸರುಗದ್ದೆಯಲ್ಲಿ ಕುಣಿದು ಕುಪ್ಪಳಿಸುವುದರಿಂದ ಮಣ್ಣಿನಲ್ಲಿರುವ ಔಷಧೀಯ ಗುಣಗಳು ದೇಹಕ್ಕೆ ಸ್ಪರ್ಶಿಸುತ್ತದೆ. ಇದರಿಂದ ಚರ್ಮ ವ್ಯಾಧಿಗಳು ಗುಣವಾಗುತ್ತದೆ ಎಂಬ ನಂಬಿಕೆ ಈ ಕ್ರೀಡೆಗೆ ಇನ್ನಷ್ಟು ಮಹತ್ವ ನೀಡಿದೆ.
ಪಾರಂಪರಿಕವಾಗಿ ಬೆಳೆದು ಬಂದ ಹಳ್ಳಿ ಜನಪದ ಕ್ರೀಡೆಗಳು ಇಂದಿನ ಕಂಪ್ಯೂಟರ್ ಯುಗದಲ್ಲಿ ಮೂಲೆ ಗುಂಪಾಗುತ್ತಿವೆ. ಈ ನಿಟ್ಟಿನಲ್ಲಿ ಕೆಸರುಗದ್ದೆ ಜನಪದ ಕ್ರೀಡೆಯನ್ನು ಉಳಿಸುವ ಉದ್ದೇಶದಿಂದ ಅಲೆವೂರುನಲ್ಲಿ ಭಾನುವಾರ ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಲಾಗಿತ್ತು.
ಯುವಕರು ಪರಸ್ಪರ ಕೆಸರೆರೆಚಿಕೊಂಡು ಸಂಭ್ರಮಿಸುತ್ತಿದುದು ಕಂಡುಬಂದಿತು. ಅವರ ಸಂಭ್ರಮಕ್ಕೆ ತುಂತುರು ಮಳೆಯೂ ಜೊತೆಗೂಡಿತ್ತು, ಕೆಸರು ಗದ್ದೆ ಓಟದಲ್ಲಿ ಆಯತಪ್ಪಿ ಕೆಸರಿನಲ್ಲಿ ಬೀಳುತ್ತಿದ್ದದು, ಮಾನವ ಪಿರಮಿಡ್ ರಚಿಸಿ ತೆಂಗಿನ ಮರಕ್ಕೆ ಕಟ್ಟಿದ್ದ ಮಡಕೆ ಒಡೆಯಲು ಪ್ರಯತ್ನಿಸುವಾಗ ಆಯ ತಪ್ಪಿ ಬೀಳುತ್ತಿದ್ದದು ನೋಡುಗರಿಗೆ ತಾವೂ ಕೂಡ ಕೆಸರಿಗೆ ಇಳಿಯಬೇಕೆನ್ನುವಂತೆ ಮಾಡಿತ್ತು.
ಕ್ಷೇತ್ರದ ಶಾಸಕರಾದ ವಿನಯ್ ಕುಮಾರ್ ಸೊರಕೆ ಕ್ರೀಡೋತ್ಸವವನ್ನು ಉದ್ಘಾಟಿಸಿ, ತುಳುನಾಡಿನ ಪ್ರಸಿದ್ದ ಕ್ರೀಡೆ ಕಂಬಳದ ಪ್ರಾಮುಖ್ಯತೆ ಬಗ್ಗೆ ತಿಳಿಸಿ ರಾಷ್ಟ್ರಪತಿಯವರಿಂದ ಕ್ರೀಡೆಗೆ ಸುಗ್ರವಾಜ್ಞೆ ಹೊರಡಿಸುವಲ್ಲಿ ಕರಾವಳಿಯ ಜನಪ್ರತಿನಿಧಿಗಳ ಹಾಗೂ ಕಂಬಳ ಹೋರಾಟಗಾರರ ಪ್ರಯತ್ನವನ್ನು ಶ್ಲಾಘಿಸಿದರು.ಈ ಸಂದರ್ಭದಲ್ಲಿ ವನಮಹೋತ್ಸವ ಆಚರಣೆಯ ಬಗ್ಗೆಯೂ ಒತ್ತಿ ಹೇಳಿದರು. ತತ್ಸಂಬಂಧ ಸಮಿತಿಯು ಏರ್ಪಡಿಸಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹನ್ನೆರಡನೇ ವರ್ಷದ ಕ್ರೀಡಾಕೂಟದಲ್ಲಿ ಹಗ್ಗಜಗ್ಗಾಟ, ಕೆಸರುಗದ್ದೆ ಓಟ, ಹಿಮ್ಮುಖ ಓಟ, ಪಿರಮಿಡ್ ರಚನೆ, ಮೂಟೆ ಓಟ, ವಿಶೇಷವಾಗಿ ಮಾನವ ನಿರ್ಮಿತ ಕಂಬಳದ ಸ್ಫರ್ಧೆಗಳು ನಡೆದವು.
ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಯುವಜನ ಸೇವೆ , ಸಬಲೀಕರಣ ಮತ್ತು ಕ್ರೀಡಾ ಇಲಾಖಾ ಸಚಿವರಾದ ಪ್ರಮೋದ್ ಮಧ್ವರಾಜ್ ಕೃಷಿ ಪ್ರಧಾನ ದೇಶದಲ್ಲಿ ಗದ್ದೆಗಳಿಂದ ದೂರ ಸರಿಯುತ್ತಿರುವ ಯುವಕ ಯುವತಿಯರನ್ನು ಸ್ಪರ್ಧೆಯ ನೆಪದಲ್ಲಾದರೂ ಮತ್ತೆ ಗದ್ದೆಗೆ ಇಳಿಸಿ ಅವರಿಗೆ ಮಣ್ಣಿನ ಫಲವತ್ತತೆಯನ್ನು ತಿಳಿಯಪಡಿಸಿ, ಗ್ರಾಮೀಣ ಕ್ರೀಡೆಯ ಸೊಗಡನ್ನು ಎಲ್ಲೆಡೆಗೆ ಪಸರಿಸುವ ಸಮಿತಿಯ ಉದ್ದೇಶವನ್ನು ಶ್ಲಾಘಿಸಿದರು.ಪ್ರಕೃತಿ ಚಿಕಿತ್ಸಾ ವಿಧಾನದಲ್ಲಿ ಕೆಸರು ಲೇಪನ ಮಾಡುವುದನ್ನು ಕೂಡಾ ಈ ಸಂದರ್ಭದಲ್ಲಿ ಒತ್ತಿ ಹೇಳಿದರು. ಅಲ್ಲದೆ ಸಮಿತಿಗೆ ಕ್ರೀಡಾ ಇಲಾಖಾ ವತಿಯಿಂದ ವಿಶೇಷ ಅನುದಾನವನ್ನು ಕೂಡಾ ಘೋಷಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ್ (ಬಾಬು), ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್ ಇವರು ಕೂಡಾ ಕ್ರೀಡಾಕೂಟದ ಯಶಸ್ವಿಗೆ ಶುಭ ಹಾರೈಸಿದರು.
ಯುವಜನ ಸೇವೆ , ಸಬಲೀಕರಣ ಮತ್ತು ಕ್ರೀಡಾ ಇಲಾಖೆ ,ಉಡುಪಿ ಜಿಲ್ಲೆ ಇದರ ಸಹಾಯಕ ನಿರ್ದೇಶಕರಾದ ಡಾ| ರೋಶನ್ ಕುಮಾರ್ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೇಸ್ ಧುರೀಣರಾದ ಎ.ಹರೀಶ್ ಕಿಣಿ, ರಾಜ್ಯ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಪ್ರೇಮ್ ಪ್ರಸಾದ್ ಶೆಟ್ಟಿ , ಪೂನಂ ಶೆಟ್ಟಿ , ಕೊರಂಗ್ರಪಾಡಿ ವ್ಯವಸಾಯಿಕ ಬ್ಯಾಂಕ್ ಅಧ್ಯಕ್ಷ ಅಲೆವೂರು ದೊಡ್ಡಮನೆ ಶ್ರೀಧರ ಶೆಟ್ಟಿ , ತೆಂಕುಮನೆ ಹರೀಶ್ ಕೆ.ಶೆಟ್ಟಿ ,ಕ್ರೀಡಾ ಕಾರ್ಯದರ್ಶಿ ರಾಜೇಶ್ ಶೆಟ್ಟಿ(ಮುನ್ನ), ಜಲೇಶ್ ಶೆಟ್ಟಿ , ಕಾರ್ತಿಕ್ ಶೆಟ್ಟಿ, ಯತೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಸಮಿತಿಯ ಪ್ರಚಾರ ಕಾರ್ಯದರ್ಶಿ ರಾಜೇಶ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು. ಸುಖೇಶ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.