ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿ ಸಹಿತ ಸಿಬ್ಬಂದಿ ಭರ್ತಿಗೆ ಕ್ರಮ – ದಿನೇಶ್ ಗುಂಡೂರಾವ್
ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಬೇಡಿಕೆ ಬಗ್ಗೆ ಪೂರ್ಣ ಮಾಹಿತಿಯಿಲ್ಲ. ಆದ್ಯತೆಯ ಮೇರೆಗೆ ಕೆಲ ಜಿಲ್ಲೆಗಳಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜುಗಳಿದ್ದು, ಅವಿಭಜಿತ ಕರಾವಳಿ ಜಿಲ್ಲೆಗಳಲ್ಲಿ ಸಾಕಷ್ಟು ಖಾಸಗಿ ಮೆಡಿಕಲ್ ಕಾಲೇಜುಗಳಿವೆ. ಈಗ ಇರುವಂತಹ ಮೆಡಿಕಲ್ ಕಾಲೇಜುಗಳನ್ನು ಸಮರ್ಪಕವಾಗಿ ನಡೆಸಲು ಪ್ರಥಮ ಪ್ರಾಶಸ್ತ್ಯ ಕೊಟ್ಟು ಆ ಬಳಿಕ ಹೊಸ ಮೆಡಿಕಲ್ ಕಾಲೇಜುಗಳ ಸ್ಥಾಪನೆ ಮಾಡುವ ಪ್ರಯತ್ನ ಮಾಡಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಭರವಸೆ ನೀಡಿದರು.
ಶನಿವಾರ ಕುಂದಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರ ಅವರು, ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿ ಸಹಿತ ಸಿಬ್ಬಂದಿ ಭರ್ತಿಗೆ ಕ್ರಮಕೈಗೊಳ್ಳಲಾಗುತ್ತಿದೆ. ಎಂಬಿಬಿಎಸ್ ಆದ ವೈದ್ಯರ ನೇಮಕ ಮಾಡಿಕೊಳ್ಳಲಾಗುತ್ತಿದೆ. ಗುತ್ತಿಗೆ ಆಧಾರದಲ್ಲಿಯೂ ಭರ್ತಿಗೆ ಸೂಚನೆ ನೀಡಲಾಗಿದೆ. 800 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಕೊಲ್ಲೂರು ಸೇರಿದಂತೆ ಕೆಲ ಪಿಎಚ್ಸಿಗಳಲ್ಲಿ 24 ಗಂಟೆ ಸೇವೆಗೆ ಎಲ್ಲ ಅಗತ್ಯ ಸೌಕರ್ಯ ಒದಗಿಸಲು ಮುಂದಿನ ದಿನಗಳಲ್ಲಿ ಪ್ರಯತ್ನಿಸಲಾಗುವುದು. ಆರೋಗ್ಯ ಇಲಾಖೆ ಭ್ರಷ್ಟಾಚಾರ ಆರೋಪದ ಕುರಿತಂತೆ ನ್ಯಾ| ಮೈಕಲ್ ಡಿಕುನ್ಹಾ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ವರದಿ ಬಳಿಕ ಕ್ರಮಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಕರಾವಳಿ, ಮಲೆನಾಡು ಭಾಗಗಳಲ್ಲಿ ಮಂಗನ ಕಾಯಿಲೆ ಈ ಸಮಯದಲ್ಲಿ ಹೆಚ್ಚಳ ಆಗುವುದು ಸಾಮಾನ್ಯ. ಅದಕ್ಕೆ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು, ಶೀಘ್ರ ಚಿಕಿತ್ಸೆ ಹೇಗೆ ಅನ್ನುವುದನ್ನು ಈಗಗಾಲೇ ಇಲಾಖೆಯ ಸಭೆಯಲ್ಲಿ ಚರ್ಚಿಸಿ, ಕ್ರಮಕ್ಕೆ ಸೂಚಿಸಲಾಗಿದೆ. ಹಿಂದೆ ಇದ್ದ ಔಷಧ ನಿಷ್ಪ್ರಯೋಜಕವಾಗಿದ್ದು, ಐಸಿಎಂಆರ್ ಹಾಗೂ ಹೈದರಾಬಾದಿನ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿ, ಹೊಸ ಔಷಧ ತಯಾರಿಗೆ ಸೂಚಿಸಲಾಗಿದ್ದು, ಅದಕ್ಕೆ 7-8 ತಿಂಗಳು ಬೇಕಿದೆ ಎಂದರು.
25 ವರ್ಷಗಳ ಹಿಂದೆ ಆದ ತಾಲೂಕುಗಳ ಆಸ್ಪತ್ರೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗಿದೆ. ಆ ಬಳಿಕ ಬೈಂದೂರು, ಬ್ರಹ್ಮಾವರದಂತಹ ಹೊಸ ತಾಲೂಕುಗಳ ಸಮುದಾಯ ಆಸ್ಪತ್ರೆಗಳ ಮೇಲ್ದರ್ಜೆಗೇರಿಸುವ ಪ್ರಯತ್ನ ಮಾಡಲಾಗುವುದು. ಕಾರ್ಕಳ ಹೆರಿಗೆ ತಜ್ಞರಿಲ್ಲದ ಬಗ್ಗೆ ಮಾಹಿತಿಯಿದ್ದು, ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.