Home Mangalorean News Kannada News ಗ್ರಾಮ ಲೆಕ್ಕಿಗರನ್ನು ಇತರೆ ಕಾರ್ಯಕ್ಕೆ ಬಳಸಬೇಡಿ- ಜಿಪಂ ಅಧ್ಯಕ್ಷ ದಿನಕರ ಬಾಬು

ಗ್ರಾಮ ಲೆಕ್ಕಿಗರನ್ನು ಇತರೆ ಕಾರ್ಯಕ್ಕೆ ಬಳಸಬೇಡಿ- ಜಿಪಂ ಅಧ್ಯಕ್ಷ ದಿನಕರ ಬಾಬು

Spread the love

ಗ್ರಾಮ ಲೆಕ್ಕಿಗರನ್ನು ಇತರೆ ಕಾರ್ಯಕ್ಕೆ ಬಳಸಬೇಡಿ- ಜಿಪಂ ಅಧ್ಯಕ್ಷ ದಿನಕರ ಬಾಬು

ಉಡುಪಿ : ಜಿಲ್ಲೆಯಲ್ಲಿ ಗ್ರಾಮ ಲೆಕ್ಕಿಗರಾಗಿ ಆಯ್ಕೆಯಾದ ನೌಕರರನ್ನು ಕಚೇರಿಯ ಇತರೆ ಕಾರ್ಯಗಳಿಗೆ ನಿಯೋಜಿಸಬೇಡಿ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.

ಅವರು ಸೋಮವಾರ ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ನವೆಂಬರ್ ತಿಂಗಳ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಗೆ ಹೊಸದಾಗಿ ನೇಮಕಗೊಂಡಿರುವ ಗ್ರಾಮ ಲೆಕ್ಕಿಗರನ್ನು ಅವರಿಗೆ ನಿಯೋಜಿಸಿದ ಗ್ರಾಮಗಳಿಗೆ ನೇಮಕ ಮಾಡದೆ ಕಚೇರಿಯ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳುತ್ತಿರುವುದರಿಂದ ಗ್ರಾಮಾಂತರ ಪ್ರದೇಶದಲ್ಲಿ ಹಲವು ಕೆಲಸಗಳಿಗೆ ಸಮಸ್ಯೆಗಳಾಗುತ್ತಿವೆ ಅಲ್ಲದೇ ಕೆಲವು ಗ್ರಾಮ ಲೆಕ್ಕಿಗರನ್ನು 2 ಕ್ಕಿಂತ ಹೆಚ್ಚು ಗ್ರಾಮಗಳಿಗೆ ನಿಯೋಜಿಸುತ್ತಿರುವುದರಿಂದ ಗ್ರಾಮಗಳ ಜನತೆಗೆ ಸರಿಯಾದ ಸೇವೆ ದೊರೆಯುತ್ತಿಲ್ಲ ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವಂತೆ ಅಧಿಕಾರಿಗಳಿಗೆ ದಿನಕರ ಬಾಬು ಸೂಚಿಸಿದರು.

ಜಿಲ್ಲೆಯಲ್ಲಿ 14 ನೇ ಹಣಕಾಸು ಯೋಜನೆಯಡಿ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಂದು ಅಂಗನವಾಡಿ ಕೇಂದ್ರವನ್ನು ಮಾದರಿ ಅಂಗನವಾಡಿಯನ್ನಾಗಿ ಮಾಡಲು ಅನುದಾನ ನಿಗಧಿಪಡಿಸಿದ್ದು, ಇದಕ್ಕಾಗಿ 158 ಅಂಗನವಾಡಿಗಳನ್ನು ಗುರುತಿಸಿದ್ದು, ಈ ಅಂಗನವಾಡಿಗಳಿಗೆ ಬೇಕಾದ ಸೌಕರ್ಯಗಳ ಕುರಿತು ಕ್ರಿಯಾಯೋಜನೆ ತಯಾರಿಸಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗೆ ಅಧ್ಯಕ್ಷರು ಸೂಚಿಸಿದರು.

zp-president-kep

ಮುಳ್ಳಿಕಟ್ಟೆ ಮೂಲಕ ಆಲೂರು ನಾಡ ಗುಡ್ಡೆಅಂಗಡಿಗೆ ನೀಡಿದ ಬಸ್ ಪರ್ಮೀಟ್ ಪಟ್ಟಿಯ ಮಾಹಿತಿ ಕುರಿತಂತೆ, ಸದ್ರಿ ಬಸ್ ಗಳು ಈ ಮಾರ್ಗದಲ್ಲಿ ಸಂಚರಿಸುತ್ತಿರುವ ಕುರಿತಂತೆ ಪರಿಶೀಲಿಸಿ ವರದಿ ನೀಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಸೂಚಿಸಿದರು.

ಉಚ್ಚಿಲ ಪಡುಬಿದ್ರೆ ರಸ್ತೆ ಪೂರ್ಣಗೊಳ್ಳದೇ ಹಲವು ಅಪಘಾತಗಳು ಸಂಭವಿಸುತ್ತಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ ಪಡುಬಿದ್ರೆ ತಿಳಿಸಿದರು, ಈ ಬಗ್ಗೆ ಉತ್ತರಿಸಿದ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಈ ಪ್ರದೇಶದಲ್ಲಿ ಅಗತ್ಯ ಸೂಚನಾ ಫಲಕಗಳನ್ನು ಹಾಗೂ ಬ್ಯಾರಿಕೇಡ್ ಗಳನ್ನು ಅಳವಡಿಸುವುದಾಗಿ ತಿಳಿಸಿದರು.

ಸಿದ್ದಾಪುರ ವ್ಯಾಪ್ತಿಯ ಸೋಣಿ ಎಂಬಲ್ಲಿ ಅಲ್ಲಿನ ಬುಡಕಟ್ಟು ಜನಾಂಗದವರು ಮತ್ತು ಶಾಲಾ ಮಕ್ಕಳು ಅಪಾಯಕಾರಿ ಕಾಂಕ್ರೀಟ್ ಸ್ಲ್ಯಾಬ್ ಮೇಲೆ ಸಂಚರಿಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಇಓ ಪ್ರಿಯಾಂಕ ಮೇರಿ ಫ್ರಾನ್ಸಿಸ್ , ವಾರಾಹಿ ಯೋಜನೆಯ ಅಧಿಕಾರಿಗೆ ಸೂಚಿಸಿದರು, ಇಲ್ಲಿ 5 ಲಕ್ಷ ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಕ್ರಿಯಾ ಯೋಜನೆ ಸಿದ್ದಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದರು, ಸದ್ರಿ ಸೇತುವೆ ನಿರ್ಮಾಣವಾಗುವ ವರೆಗೆ ಪ್ರಸ್ತುತ ಇರುವ ಸೇತುವೆಯಲ್ಲಿ ಓಡಾಟಕ್ಕೆ ಸಾಧ್ಯವಿಲ್ಲವಾದರೆ ಬಂದ್ ಮಾಡುವಂತೆ ಸಿಇಓ ಸೂಚಿಸಿದರು.

ಕೆಡಿಪಿ ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟೀಸ್ ನೀಡುವಂತೆ ಸೂಚಿಸಿದ ಅಧ್ಯಕ್ಷ ದಿನಕರ ಬಾಬು, ಸಭೆಗೆ ಹಾಜರಾಗಲು ಅಸಾಧ್ಯವಾದ ಸಂದರ್ಭದಲ್ಲಿ ಸಿಇಓ ಅವರಿಗೆ ಅಥವಾ ತಮಗೆ ಮಾಹಿತಿ ನೀಡಿ, ಅನುಮತಿ ಪಡೆಯುವಂತೆ ತಿಳಿಸಿದರು.

ಜನವರಿ 2017 ರಿಂದ ಉದ್ಯೋಗ ಖಾತರಿ ಯೋಜನೆಗಳ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮೆ ಆಗುವುದರಿಂದ ಡಿಸೆಂಬರ್ ಅಂತ್ಯದ ವೇಳೆಗೆ ಎಲ್ಲಾ ಗ್ರಾಮ ಪಂಚಾಯತ್ ಗಳ ತಮ್ಮ ವ್ಯಾಪ್ತಿಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯನ್ನು ಹಾಗೂ ಜಾಬ್ ಕಾರ್ಡ್ ವಿತರಣೆಯನ್ನು ಪೂರ್ಣಗೊಳಿಸುವಂತೆ ಎಲ್ಲಾ ತಾಲೂಕು ಪಂಚಾಯತ್ ಇಓ ಗಳಿಗೆ ಸಿಇಓ ಸೂಚಿಸಿದರು.

ಗ್ರಾಮ ಪಂಚಾಯತ್ ಗಳಲ್ಲಿ ರಾಜೀವ್ ಗಾಂಧೀ ಚೈತನ್ಯ ಯೋಜನೆಯಲ್ಲಿ ನಿರುದ್ಯೋಗಿಗಳಿಗೆ ತರಬೇತಿ ನೀಡುವ ಕುರಿತು ಹಾಗೂ ಜೈವಿಕ ಅನಿಲ ಸ್ಥಾವರಗಳ ಸ್ಥಾಪನೆ ಮಾಡುವ ಕುರಿತ ಯೋಜನೆಯ ವಿವರಗಳನ್ನು ಎಲ್ಲಾ ಗ್ರಾಮ ಪಂಚಾಯತ್ ಗಳಿಗೆ ನೀಡುವಂತೆ ತಾಲೂಕು ಪಂಚಾಯತ್ ಇಓ ಗಳಿಗೆ ಸಿಇಓ ಸೂಚಿಸಿದರು.

ಕೃಷಿ ಇಲಾಖೆಯಲ್ಲಿ ನವೆಂಬರ್ ಅಂತ್ಯದ ವೇಳೆಗೆ 3011 ಕ್ವಿಂ. ಭಿತ್ತನೆ ಬೀಜ ವಿತರಿಸಿದ್ದು, 3225 ಕೆ.ಜಿ ರಾಸಾಯನಿಕಗಳ ವಿತರಣೆ, 48993 ಹೆಕ್ಟೇರ್ ನಲ್ಲಿ ಅಂದಾಜು 189285 ಟನ್ ಆಹಾರ ಧಾನ್ಯಗಳ ಉತ್ಪಾದನೆ ಆಗಿದೆ, ರೈತರು ಈ ತಿಂಗಳ ಅಂತ್ಯದ ವರೆಗೆ ಬೆಳೆ ವಿಮೆಗೆ ನೊಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಮಾಹಿತಿ ನೀಡಿದರು.

ಸಹಕಾರ ಇಲಾಖೆಯಿಂದ ನವೆಂಬರ್ ಅಂತ್ಯದ ವೇಳೆಗೆ 154 ಲಕ್ಷ ಅಲ್ಪಾವಧಿ ಸಾಲ, 600 ಲಕ್ಷ ಮಧ್ಯಮಾವಧಿ ಹಾಗೂ 366.69 ಲಕ್ಷ ದೀರ್ಘಾವಧಿ ಸಾಲ ವಿತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲೆಯ ಹಲವು ಪಂಚಾಯತ್ ಗಳಲ್ಲಿ ಕಸ ವಿಲೇವಾರಿ ಸಮಸ್ಯೆ ಇದ್ದು, ಈ ಸಮಸ್ಯೆಯ ನಿವಾರಣೆಗೆ ಜಿಲ್ಲೆಯ ಹೆದ್ದಾರಿ ಪಕ್ಕದ 54 ಗ್ರಾಮ ಪಂಚಾಯತ್ ಗಳಲ್ಲಿ ಸಮರ್ಪಕ ಕಸ ವಿಲೇವಾರಿ ನಿರ್ವಹಣೆ ಮಾಡಲು, ಪ್ರಥಮ ಹಂತದಲ್ಲಿ ಡಿಸೆಂಬರ್ 22 ರಿಂದ 28 ರ ವರೆಗೆ 5 ದಿನಗಳ ಕಾಲ ಪ್ರಾಯೋಗಿಕವಾಗಿ ಪ್ರತಿ 2 ಗ್ರಾಮ ಪಂಚಾಯತ್ ಗಳಿಗೆ ಒಬ್ಬ ನೋಡೆಲ್ ಅಧಿಕಾರಿಯನ್ನು ನೇಮಿಸಲಾಗುತ್ತಿದೆ, ಈ ಅಧಿಕಾರಿಗಳು ಸಂಬಂದಪಟ್ಟ ಗ್ರಾಮದ ವಸತಿ ಸಮುಚ್ಛಯಗಳ ನಾಗರೀಕರು ಮತ್ತು ಪೇಟೆಯ ವ್ಯಾಪಾರಿಗಳೊಂದಿಗೆ ಸಭೆ ನಡೆಸಿ , ಪಂಚಾಯತ್ ಸಹಕಾರದೊಂದಿಗೆ ಇವರಿಂದ ಪ್ರತಿದಿನ ಕಸ ಸಂಗ್ರಹಿಸಿ, ಅದನ್ನು ಮೂಲದಲ್ಲೇ ವಿಂಗಡಣೆ ಮಾಡಿ, ಹಸಿ ಕಸವನ್ನು ಮಣ್ಣಿನಲ್ಲಿ ನಿರ್ದಿಷ್ಟ ಅಳತೆಯ ಹೊಂಡ ತೆಗೆದು ವಿಲೇವಾರಿ ಮಾಡುವಂತೆ ಹಾಗೂ ಒಣ ಕಸವನ್ನು ವಿಂಗಡಿಸಿ ಹರಾಜು ಮಾಡುವ ಕುರಿತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಹಸಿ ಕಸ ವಿಲೇವಾರಿಗೆ ಸರಕಾರಿ ಜಾಗ ಇಲ್ಲವಾದಲ್ಲಿ ಖಾಸಗಿ ವ್ಯಕ್ತಿಗಳ ಭೂಮಿಯನ್ನು ಪಡೆದು ಅಲ್ಲಿ ವಿಲೇವಾರಿ ಮಾಡಿ, ಅಲ್ಲಿ ದೊರೆಯುವ ಗೊಬ್ಬರವನ್ನು ಅ ಜಾಗದ ಮಾಲೀಕರಿಗೆ ನೀಡುವಂತೆ ಹಾಗೂ ಒಣ ಕಸದಲ್ಲಿ ವಿಂಗಡಿಸುವ ವಸ್ತುಗಳನ್ನು ಖರೀದಿಸಲು ಗುಜರಿ ವ್ಯಾಪಾರಿಗಳು ಸಿದ್ದವಿದ್ದು , ಇದನ್ನು ಹರಾಜು ಮಾಡಿ, ದೊರೆಯುವ ಮೊತ್ತವನ್ನು ಪಂಚಾಯತ್ ಗೆ ಜಮೆ ಮಾಡುವಂತೆ ಸೂಚಿಸಿದರು.

ಈ ಕಾರ್ಯಕ್ರಮ ಈಗಾಗಲೇ ಕಾಪು ಪುರಸಭೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಸಿಇಓ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾಶೆಟ್ಟಿ, ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.


Spread the love

Exit mobile version