ಗ್ರೀನ್ ವ್ಯಾಲಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಖಾದರ್ ಬಾಶು ನಿಧನ
ಮಂಗಳೂರು: ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ, ಶಿರೂರು ಗ್ರೀನ್ ವ್ಯಾಲಿ ನ್ಯಾಷನಲ್ ಸ್ಕೂಲ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾಗಿದ್ದ ಸೈಯ್ಯದ್ ಅಬ್ದುಲ್ ಖಾದರ್ ಬಾಶು ಅವರು ಹೃದಯಾಘಾತದಿಂದ ಮಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು.
ದುಬೈನ ಖ್ಯಾತ ಉದ್ಯಮಿಯಾಗಿದ್ದ ಬಾಶು ಅವರು ತಮ್ಮ ಹುಟ್ಟುರಾದ ಶಿರೂರಿನಲ್ಲಿ ಪ್ರತಿಷ್ಠಿತ ಗ್ರೀನ್ ವ್ಯಾಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದರು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ತಾರೆಗಳು ಇವರ ಶಾಲೆಗೆ ಭೇಟಿ ನೀಡಿದ್ದರು. ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಬಾಶು ಅವರು ದುಬೈ ಹಾಗೂ ಕರಾವಳಿ ಕರ್ನಾಟಕದಲ್ಲಿ ಹಲವಾರು ಸಮಾಜ ಸೇವಾ ಕಾರ್ಯಕ್ರಮಗಳನ್ನು ಮಾಡಿದ್ದರು.
ಮಂಗಳೂರಿನಲ್ಲಿ ಇತ್ತೀಚೆಗಷ್ಟೇ ಅದ್ದೂರಿಯಾಗಿ ತಮ್ಮ ಮಗಳ ವಿವಾಹವನ್ನು ನೆರವೇರಿಸಿದ್ದ ಬಾಶು ಸೋಮವಾರ ರಾತ್ರಿ ಮಂಗಳೂರಿನ ಖಾಸಗಿ ಹೋಟೆಲಿನಲ್ಲಿ ತಂಗಿದ್ದ ವೇಳೆಯಲ್ಲಿ ಅವರಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.