‘ಚಾಪ್ಟರ್’ ತುಳು ಸಿನಿಮಾದ ಧ್ವನಿ ಸುರುಳಿ ಬಿಡುಗಡೆ

Spread the love

‘ಚಾಪ್ಟರ್’ ತುಳು ಸಿನಿಮಾದ ಧ್ವನಿ ಸುರುಳಿ ಬಿಡುಗಡೆ
ಮಂಗಳೂರು: ರಾಜ್ಯದಲ್ಲಿನ ಕನ್ನಡ ಸಿನಿಮಾಗಳ ಜೊತೆಗೆ ಕರಾವಳಿಯ ತುಳು ಸಿನಿಮಾಗಳು ಅಭಿವೃಧ್ಧಿಯಾಗಲಿ ಎಂದು ಶಾಸಕ ಮೋಯ್ದಿನ್ ಬಾವಾ ಹೇಳಿದರು. ಅವರು ಪಾಂಡೇಶ್ವರದ ಫೋರಂ ಪಿಜ್ಜಾ ಮಾಲ್‍ನಲ್ಲಿ ನಡೆದ ಎಲ್.ವಿ ಪ್ರೊಡಕ್ಷನ್ ಲಾಂಛನದಲ್ಲಿ ಮೋಹನ್ ಭಟ್ಕಳ್ ನಿರ್ದೇಶನದ ಚಾಪ್ಟರ್ ತುಳು ಸಿನಿಮಾದ ಧ್ವನಿ ಸುರುಳಿ ಬಿಡುಗಡೆ ಸಂದರ್ಭದಲ್ಲಿ ಮಾತಾನಾಡಿದರು.

ಕರಾವಳಿ ಎಲ್ಲಾ ರೀತಿಯಲ್ಲಿಯೂ ಅಭಿವೃದ್ಧಿ ಆಗುತ್ತಿದೆ, ಇದೇ ರೀತಿ ಕನ್ನಡದ ಸಿನಿಮಾಗಳ ಜೊತೆ ಕರಾವಳಿ ತುಳು ಭಾಷೆಯ, ತುಳು ಸಿನಿಮಾಗಳು ಅಭಿವೃದ್ಧಿ ಆಗಬೇಕು ಎಂದರು. ನಿರ್ದೇಶಕ ಮೋಹನ್ ಭಟ್ಕಳ್ ಅವರು ಏಪ್ರಿಲ್ ಮೊದಲ ವಾರದಲ್ಲಿ ಚಾಪ್ಟರ್ ತುಳು ಸಿನಿಮಾ ಬಿಡುಗಡೆಗೊಳಿಲು ಸಿದ್ಧತೆ ನಡೆದಿದೆ, ಜನರ ಪ್ರೋತ್ಸಾಹ ಚಾಪ್ಟರ್ ಸಿನಿಮಾಕ್ಕೆ ಅಗತ್ಯವಿದೆ, ತುಳುನಾಡಿನ ಜನತೆ ಈ ತುಳು ಸಿನಿಮಾವನ್ನು ಯಶಸ್ವಿ ಮಾಡಿಕೊಡುತ್ತಾರೆ ಎಂಬ ನಂಬಿಕೆ ಇದೆ. ಚಾಪ್ಟರ್ ಸಿನಿಮಾದಲ್ಲಿ ತುಳುನಾಡಿನ ಕಲೆ, ಸಂಪ್ರಾದಾಯ, ಆರಾಧನೆಗಳ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು. ಚಾಪ್ಟರ್ ಸಿನಿಮಾದ ನಾಯಕ ಅಸ್ತಿಕ್ ಶೆಟ್ಟಿ ಮಾತಾನಾಡಿ ಕರಾವಳಿಯ ಜನರ ಪ್ರೋತ್ಸಾಹ ಈ ಮೊದಲು ಕೂಡ ಸಿಕ್ಕಿದೆ, ಇದೇ ರೀತಿ ಚಾಪ್ಟರ್ ಸಿನಿಮಾವನ್ನು ತುಳುನಾಡಿನ ಜನರು ಯಶಸ್ವಿ ಮಾಡಿ ಕೊಡಬೇಕು ಎಂದು ಮನವಿ ಮಾಡಿದರು.

ಚಾಪ್ಟರ್ ಸಿನಿಮಾದ ಮೂಲಕ ಮೊದಲ ಭಾರಿಗೆ ನಿರ್ದೇಶಕರಾಗುತ್ತಿರುವ ಮೋಹನ್ ಭಟ್ಕಳ್ ಅವರು ಈ ಹಿಂದೆ ಕನ್ನಡದ ಹಿಟ್ ಸಿನಿಮಾಗಳಾದ ಗಜ, ರಾಮ್, ಬೃಂದಾವನ, ಹುಡುಗರು, ಪವರ್, ಕರಿಚಿರತೆ ಸಿನಿಮಾಗಳಿಗೆ ಸಹ ನಿರ್ದೇಶಕರಾಗಿದ್ದರು, ಇವರು ಕನ್ನಡ ಸಿನಿಮಾವನ್ನು ಬಿಟ್ಟು, ಇದೀಗ ತುಳುನಾಡಿನ ತುಳು ಭಾಷೆಯ ಮೇಲೆ ಪ್ರೀತಿ ಇಟ್ಟು ತುಳು ಸಿನಿಮಾವನ್ನು ಬೆಳೆಸುವ ಇವರ ಪ್ರಯತ್ನವನ್ನು ತುಳುನಾಡಿನ ಜನರು ಪ್ರೋತ್ಸಾಹಿಸಬೇಕು ಎಂದರು. ಕನ್ನಡದ ಹಲವಾರು ಚಿತ್ರಗಳಿಗೆ ಅಂದರೆ “ಏನೆಂದು ಹೆಸರಿಡಲಿ”, “ಕಿನಾರೆ” ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ ಯುವ ಪ್ರತಿಭೆಯಾದಂತಹ ಸುರೇಂದ್ರನಾಥ್ ಅವರು ಮೊದಲ ಬಾರಿಗೆ ತುಳು ಸಿನಿಮಾ “ಚಾಪ್ಟರ್”ಗೆ ಸಂಗೀತವನ್ನು ನಿರ್ದೇಶಿಸಿದ್ದಾರೆ. ಹಾಗೇ ಸದಾ ಹಾಸ್ಯ ಪಾತ್ರಗಳಲ್ಲಿ ಮಿಂಚುತ್ತಿದ್ದ ಉಮೇಶ್ ಮೀಜಾರ್ ಅವರು ಮೊತ್ತ ಮೊದಲ ಬಾರಿಗೆ ಐಟಂ ಸಾಂಗ್ ಒಂದನ್ನು ಬರೆದಿದ್ದು ಈ ಮೂಲಕ ಸಾಹಿತಿಯಾಗಿಯೂ ಹಿರಿತೆರೆಯಲ್ಲಿ ಗುರುತಿಸಿ ಕೊಂಡಿದ್ದಾರೆ. ಮೊದಲ ಬಾರಿಗೆ ಅರವಿಂದ್ ಬೋಳಾರ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ತಿಮ್ಮಪ್ಪ ಕುಲಾಲ್ ಅವರು ಪ್ರಮುಖ ಖಳ ನಾಯಕನ ಪಾತ್ರದಲ್ಲಿ ಮೊದಲ ಬಾರಿಗೆ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಚಿತ್ರಕ್ಕೆ ಮಣಿ ಎಜೆ ಕಾರ್ತಿಕೇಯನ್, ಕಿಶೋರ್ ಮೂಡಬಿದ್ರೆ ಮತ್ತು ಉಮೇಶ್ ಮಿಜಾರ್ ಅವರು ಸಂಭಾಷಣೆಯ ಹೊಣೆ ಹೊತ್ತಿದ್ದಾರೆ, ವೈ.ಎಸ್.ಶ್ರೀಧರ್ ಅವರ ಸಂಕಲನವಿದೆ. ಸುಮಾರು 31 ದಿನಗಳ ಕಾಲ ಚಿತ್ರೀಕರಣವನ್ನು ಮಂಗಳೂರು, ಉಡುಪಿ, ಆಗುಂಬೆ, ಮರವಂತೆ, ಚಿಕ್ಕಮಂಗಳೂರು ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚಾಪ್ಟರ್ ಸಿನಿಮಾದ ನಾಯಕಿ ಐಶ್ವರ್ಯ ಹೆಗ್ಡೆ, ತುಳು ಸಿನಿಮಾಗಳ ನಿರ್ಮಾಪಕರಾದ ಪ್ರಕಾಶ್ ಪಾಂಡೇಶ್ವರ, ಕಾಂಗ್ರೇಸ್ ಯುವ ನಾಯಕ ಮಿಥುನ್ ರೈ, ಮೇಯರ್ ಹರಿನಾಥ್, ಎಸ್.ಡಿ.ಎಂ. ಕಾಲೇಜು ಪ್ರಾಂಶುಪಾಲರಾದ ಡಾ.ದೇವರಾಜ್, ಬಿಜೆಪಿ ಮುಖಂಡ ರವೀಂದ್ರ ಶೆಟ್ಟಿ, ಹಾಗೂ ಉಮೇಶ್ ಮಿಜಾರ್, ಅರವಿಂದ್ ಬೊಳಾರ್, ಹಾಗೂ ಅನೇಕ ನಿರ್ದೇಶಕರು, ಕಲಾವಿದರು ಉಪಸ್ಥಿತರಿದ್ದರು.


Spread the love