Home Mangalorean News Kannada News ಚಾರ್ಮಾಡಿ ಗುಡ್ಡ ಕುಸಿತ; ಬರಿಗಾಲಿನಲ್ಲಿ ಬಸ್ಸು ತಳ್ಳಲು ನೆರವಾದ ಎಸ್ಪಿ ಅಣ್ಣಾಮಲೈ

ಚಾರ್ಮಾಡಿ ಗುಡ್ಡ ಕುಸಿತ; ಬರಿಗಾಲಿನಲ್ಲಿ ಬಸ್ಸು ತಳ್ಳಲು ನೆರವಾದ ಎಸ್ಪಿ ಅಣ್ಣಾಮಲೈ

Spread the love

ಚಾರ್ಮಾಡಿಯಲ್ಲಿ ಗುಡ್ಡ ಕುಸಿತ ಪ್ರಯಾಣಿಕರ ನೆರವಿಗೆ ನಿಂತ ಎಸ್ಪಿ ಅಣ್ಣಾಮಲೈ ಮತ್ತು ಶಾಸಕ ಹರೀಶ್ ಪೂಂಜಾ

ಮಂಗಳೂರು: ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡವಾಗಿ ಗುಡ್ಡ ಕುಸಿದ ಪರಿಣಾಂ ಸಂಚಾರಕ್ಕೆ ಧಕ್ಕೆಯಾಗಿ ಸಂಕಷ್ಟದಲ್ಲಿದ್ದ ಪ್ರಯಾಣಿಕರ ನೆರವಿಗೆ ನಿಂತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ, ಹಾಗೂ ಬೆಳ್ತಂಗಡಿ ಇನ್ಸ್ ಪೆಕ್ಟರ್ ಸಂದೇಶ್ ಅವರಿಗೆ ಸಾರ್ವಜನಿಕ ವಲಯದಿಂದ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟಿಯ 2ನೇ ತಿರುವಿನಲ್ಲಿ ಭೂಕುಸಿತ ಆಗಿದ್ದರಿಂದ ಎರಡೂ ಕಡೆಯಿಂದ ವಾಹನ ಸಂಚಾರ ಬಂದ್ ಆಗಿತ್ತು. ಈ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಎಲ್ಲಾ ವಾಹನಗಳು ಸುಮಾರು ಮೂರು ಕಿಮೀ ಉದ್ದಕ್ಕೆ ಸಾಲುಗಟ್ಟಿ ನಿಂತಲ್ಲಿಯೇ ಸಿಲುಕಿಕೊಂಡಿದ್ದವು.

ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಉಭಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಣ್ಣು ತೆರವು ಕಾರ್ಯಾಚರಣೆ ನಡೆಯಿತು. ಅಗ್ನಿ ಶಾಮಕ ಸಿಬ್ಬಂದಿ, ಹೆದ್ದಾರಿ ಪ್ರಾಧಿಕಾರ, ಪೊಲೀಸರು, ಸ್ವಯಂಸೇವಕರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ನಸುಕಿನಿಂದಲೇ ಹರಸಾಹಸಪಟ್ಟು ಮಧ್ಯಾಹ್ನ 2 ಗಂಟೆ ಹೊತ್ತಿಗೆ ಮಣ್ಣಿನ ರಾಶಿ, ಮರಗಳನ್ನು ತೆರವುಗೊಳಿಸಿದರು. ಭಾರಿ ಮಳೆಯ ನಡುವೆ, ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಸುಮಾರು 25 ಅಡಿಯಷ್ಟು ಎತ್ತರದ ಮಣ್ಣಿನ ರಾಶಿಯನ್ನು ಜೆಸಿಬಿ ಯಂತ್ರಗಳಿಂದ ತೆರವುಗೊಳಿಸಲಾಯಿತು.

ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಅವರು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಸ್ಥಳದಲ್ಲಿ ಮೊಕ್ಕಾಂ ಹೂಡಿ ಕಾರ್ಯಾಚರಣೆಯ ನಿಗಾ ವಹಿಸಿದರು. ನೀರಿನಲ್ಲಿ ಬೂಟು ಕಳಚಿ ಬಿದ್ದರೂ ಅದನ್ನು ಲೆಕ್ಕಿಸದೆ ಬರಿಗಾಲಿನಲ್ಲಿಯೇ ಸಂಚರಿಸಿದರು. ಬಸ್ಸೊಂದನ್ನು ತಳ್ಳಲು ಸ್ವತಃ ಕೈಚಾಚಿ ನೆರವಾದರು.

ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ, ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್‌ ಪೂಂಜ, ಚಾರ್ಮಾಡಿಯ ಸಮಾಜ ಸೇವಕ ಚಾರ್ಮಾಡಿ ಹಸನಬ್ಬ, ಹಾಗೂ ಅನೇಕ ಸ್ಥಳೀಯರು ಪ್ರಯಾಣಿಕರಿಗೆ ಹಾಲು, ಬಾಳೆಹಣ್ಣು, ಪಾನೀಯ, ಬಿಸ್ಕಿಟ್, ಊಟ, ಕುಡಿಯುವ ನೀರು ನೀಡಿ ಮಾನವೀಯತೆ ಮೆರೆದರು.

ಅಗತ್ಯ ಇದ್ದವರಿಗೆ ಔಷಧ ಒದಗಿಸಲಾಯಿತು. ಅಸ್ವಸ್ಥಗೊಂಡಿದ್ದ ಇಬ್ಬರನ್ನು ಬೆಳ್ತಂಗಡಿ ಆಸ್ಪತ್ರೆಗೆ ಅಂಬುಲೆನ್ಸ್‌ನಲ್ಲಿ ಒಯ್ಯಲಾಯಿತು. ದಕ್ಷಿಣ ಕನ್ನಡದ ಸಂಸದ ನಳಿನ್‌ಕುಮಾರ್‌ ಕಟೀಲ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

‘ಚಾರ್ಮಾಡಿ ಘಾಟ್‌ನಲ್ಲಿ 13 ಕಡೆ ಗುಡ್ಡ ಕುಸಿತದಿಂದ ರಸ್ತೆ ಮಾರ್ಗ ಬಂದ್‌ ಆಗಿದೆ. ಹಾಗಾಗಿ ಗುರುವಾರ ಬೆಳಿಗ್ಗೆ 6 ಗಂಟೆಯವರೆಗೂ ಈ ಮಾರ್ಗದಲ್ಲಿ ಸಂಚಾರ ನಿರ್ಬಂಧಿಸಲಾಗಿದೆ’ ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ(ಎಸ್‌ಪಿ) ಅಣ್ಣಾಮಲೈ ತಿಳಿಸಿದ್ದಾರೆ.

ಮಳೆಯಿಂದ ಮತ್ತಷ್ಟು ಮರ, ಗುಡ್ಡಗಳು ಕುಸಿದು ಬೀಳುವ ಸ್ಥಿತಿಯಲ್ಲಿವೆ. ಈ ಹಿನ್ನೆಲೆಯಲ್ಲಿ ನಮಗೆ 48 ಗಂಟೆಗೆ ಸಮಯ ಕೊಡಿ. ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲಾಡಳಿತದ ನೆರವಿಂದ ಎಲ್ಲವನ್ನೂ ತೆರವುಗೊಳಿಸ್ತೇವೆ ಎಂದು ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ ಹೇಳಿದ್ದಾರೆ.

ಕುಸಿದಿರುವ ಮಣ್ಣನ್ನು ತೆರವುಗೊಳಿಸಲು ಲೋಕೋಪಯೋಗಿ ಇಲಾಖೆ ಮತ್ತು ಹೆದ್ದಾರಿ ಪ್ರಾಧಿಕಾರದ ಕಾರ್ಮಿಕರು ಶ್ರಮಿಸುತ್ತಿದ್ದಾರೆ.

ರಸ್ತೆಯಲ್ಲಿ ನಿಂತಿರುವ ವಾಹನಗಳನ್ನು ಘಾಟ್‌ನಿಂದ ಹೊರತರುವ ಕಾರ್ಯ ನಡೆಯುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳು, ಸ್ವಯಂಸೇವಕರು ಪ್ರಯಾಣಿಕರಿಗೆ ಆಹಾರ ಪೊಟ್ಟಣಗಳನ್ನು ವಿತರಿಸುತ್ತಿದ್ದಾರೆ. ಈ ಮಾರ್ಗದ ಬದಲಾಗಿ ಕುದುರೆಮುಖ ಮತ್ತು ಕಾರ್ಕಳ ಮಾರ್ಗ ಬಳಸಲು ಎಸ್‌ಪಿ ಅವರು ಸೂಚಿಸಿದ್ದಾರೆ.


Spread the love

Exit mobile version