ಚಿಕ್ಕಮಗಳೂರು: ಏಳು ವರ್ಷದ ಗಂಡು ಚಿರತೆಯೊಂದ ನಗರದ ವಿದ್ಯಾರ್ಥಿನಿಯರ ಕಾಲೇಜಿನ ಆವರಣಕ್ಕೆ ನುಗ್ಗಿದ್ದು, ಈ ಚಿರತೆಯನ್ನು ಬಂಧಿಸಲು ಅರಣ್ಯ ಇಲಾಖೆಯವರು ಹರಸಾಹಸ ಪಡುತ್ತಿದ್ದಾರೆ.
ಒಂದೇ ಸ್ಥಳದಲ್ಲಿರುವ ಕೋರ್ಟ್, ಡಿಸಿ ಹಾಗೂ ಎಸ್ಪಿ ಆಫೀಸ್, ಅರಣ್ಯ ಇಲಾಖೆಯ ಪಕ್ಕದಲ್ಲೇ ಇರುವ ಟಿಎಂಎಸ್ ವಿದ್ಯಾರ್ಥಿನಿಯರ ಕಾಲೇಜಿನ ಆವರಣಕ್ಕೆ ಮಧ್ಯಾಹ್ನ ಬಂದು ಪಟ್ಟಾಭಿರಾಮ್ ಎಂಬುವರ ಮೇಲೆ ದಾಳಿ ಮಾಡಿದೆ. ಅಲ್ಲದೇ ಕಿಟಕಿಯಿಂದ ಚಿರತೆಯನ್ನು ವೀಕ್ಷಿಸಲು ಮುಂದಾಗಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ ಗಣೇಶ್ ಎಂಬುವರ ದಾಳಿ ಮಾಡಿದ ಚಿರತೆ ಅವರ ಬಲಗೈನಲ್ಲಿರುವ 3 ಬೆರಳುಗಳನ್ನು ತಿಂದು ಹಾಕಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಗಣೇಶ್ ಅವರನ್ನು ಬೆಂಗಳೂರಿಗೆ ಕಳುಹಿಸಲಾಗಿದೆ.
ನಗರದ ಟಿಎಂಎಸ್ ಕಾಲೇಜು ಆವರಣಕ್ಕೆ ಮಧ್ಯಾಹ್ನ 12.30ಕ್ಕೆ ಬಂದ ಚಿರತೆ ಪಟ್ಟಾಭಿರಾಮ್ ಎಂಬವರ ಮೇಲೆ ದಾಳಿ ಮಾಡಿ ಜೆರಾಕ್ಸ್ ಅಂಗಡಿಯೊಳಗೆ ನುಗ್ಗಿದೆ. ಜೆರಾಕ್ಸ್ ಅಂಗಡಿಗೆ ನುಗ್ಗಿದ ಕೂಡಲೇ ಅಂಗಡಿಯ ಮಾಲೀಕ ಹೊರಗಡೆ ಬಂದು ಬಾಗಿಲು ಹಾಕಿದ್ದು ಈಗ ಅಂಗಡಿಯ ಒಳಗೆ ಚಿರತೆ ಇದೆ. ಜೆರಾಕ್ಸ್ ರೂಂನಲ್ಲಿ ಚಿರತೆಯನ್ನು ಸೆರೆ ಹಿಡಿಯುವುದಕ್ಕೆ ಅರವಳಿಕೆ ಮದ್ದು ಚಿಕ್ಕಮಗಳೂರಿನಲ್ಲಿ ಇಲ್ಲ. ಹೀಗಾಗಿ ಬನ್ನೇರುಘಟ್ಟದ ಅಭಯಾರಣ್ಯದಿಂದ ಅರವಳಿಕೆ ತಜ್ಞರು ಬಂದ ಮೇಲೆ ಸಂಜೆ ಐದು ಘಂಟೆಯ ನಂತರ ಚಿರತೆಯನ್ನು ಸೆರೆಹಿಡಿಯುವುದಾಗಿ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಕಾಲೇಜಿನ ಆವರಣಕ್ಕೆ ನುಗ್ಗಿದ ಚಿರತೆ ನೇರವಾಗಿ ತರಗತಿಗೆ ನುಗ್ಗಿದ್ದರೆ ವಿದ್ಯಾರ್ಥಿನಿಯರ ಮೇಲೆ ದಾಳಿ ಮಾಡುವ ಸಾಧ್ಯತೆ ಇತ್ತು. ಆದರೆ ಜೆರಾಕ್ಸ್ ಅಂಗಡಿಗೆ ನುಗ್ಗಿದ ಕಾರಣ ಸಂಭವಿಸಬಹುದಾಗಿದ್ದ ದೊಡ್ಡ ದಾಳಿ ತಪ್ಪಿದೆ.