ಚಿಕ್ಕಮಗಳೂರು: ವಕೀಲನ ಮೇಲೆ ಹಲ್ಲೆ ಪ್ರಕರಣದ ತನಿಖೆ ಸಿಐಡಿ ಗೆ ಒಪ್ಪಿಸಿದ ರಾಜ್ಯ ಸರ್ಕಾರ
ಚಿಕ್ಕಮಗಳೂರು: ನಗರ ಪೊಲೀಸ್ ಠಾಣೆಯಲ್ಲಿ ವಕೀಲನ ಮೇಲೆ ಹಲ್ಲೆ ನಡೆಸಿದ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರಕರಣ ಸಂಬಂಧ ಡಿವೈಎಸ್ಪಿ ಶೈಲೇಂದ್ರ ನೇತೃತ್ವದಲ್ಲಿ ತನಿಖೆ ನಡೆಯುತ್ತಿತ್ತು. ಇಂದು ಪ್ರಕರಣದ ತನಿಖೆ ಸಿಐಡಿಗೆ ಒಪ್ಪಿಸಿಲಾಗಿದೆ. ಈ ಬಗ್ಗೆ ಪಶ್ಚಿಮ ವಲಯದ ಐಜಿಪಿ ಚಂದ್ರಗುಪ್ತ ಸ್ಪಷ್ಟಪಡಿಸಿದ್ದಾರೆ.
ಏನಿದು ಪ್ರಕರಣ?
ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ನ.30 ರಂದು ಹೆಲ್ಮಟ್ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲ ಪ್ರೀತಮ್ ಎಂಬುವವರ ಮೇಲೆ ಪೊಲೀಸ್ ಇನ್ಸ್ ಪೆಕ್ಟರ್ , ಒಬ್ಬ ಎಎಸ್ಐ, ಒಬ್ಬ ಹೆಡ್ ಕಾಸ್ಸ್ಟೇಬಲ್ ಹಾಗೂ ಮೂವರು ಪೊಲೀಸ್ ಪಿಸಿ ಗಳು ಸೇರಿ ಗಂಭೀರ ಸ್ವರೂಪದ ಹಲ್ಲೆ ನಡೆಸಿದ್ದರು. ಈ ಹಿನ್ನೆಲೆ ಠಾಣೆ ಮುಂದೆ ವಕೀಲರು ಜಮಾಯಿಸಿ ಆಕ್ರೋಶ ಹೊರಹಾಕಿದ್ದರು. ಸ್ಥಳಕ್ಕೆ ಆಗಮಿಸಿದ ಎಸ್ಪಿ ವಿಕ್ರಂ, ವಿಚಾರಣೆ ನಡೆಸಿ ಪಿಎಸ್ಐ ಸೇರಿದಂತೆ ಆರು ಸಿಬ್ಬಂದಿಯನ್ನು ಅಮಾನತು ಮಾಡಿದ್ದರು. ಜೊತೆಗೆ ಹಲ್ಲೆ ಮಾಡಿದ ಪೊಲೀಸರ ವಿರುದ್ದ ಐಪಿಸಿ ಸೆಕ್ಷನ್ 307, 324, 506, 504ರ ಅಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ತಲೆಮರೆಸಿಕೊಂಡಿದ್ದು, ಇವರ ಬಂಧನಕ್ಕೆ ಚಿಕ್ಕಮಗಳೂರು DYSP ಶೈಲೇಂದ್ರ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ. ಈ ನಡುವೆ, ವಕೀಲರು ಠಾಣೆಯಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಲ್ಲೆ ಖಂಡಿಸಿ ಶನಿವಾರ ಮಧ್ಯರಾತ್ರಿವರೆಗೂ ನಗರದ ಹನುಮಂತಪ್ಪ ಸರ್ಕಲ್ನಲ್ಲಿ ಪೊಲೀಸರು ಮತ್ತು ಅವರ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಚಿಕ್ಕಮಗಳೂರು ಜಿಲ್ಲಾ ಬಾರ್ ಅಸೋಸಿಯೇಷನ್ ಅಧ್ಯಕ್ಷ ಸುಧಾಕರ್, ವಕೀಲ ಪ್ರೀತಮ್ ಸೇರಿದಂತೆ 15 ವಕೀಲರ ವಿರುದ್ಧ ಸೆಕ್ಷನ್ 503, 406, 353, 149 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.