Home Mangalorean News Kannada News ಚಿನ್ನದ ಒಡವೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ನಿರ್ವಾಹಕ

ಚಿನ್ನದ ಒಡವೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ನಿರ್ವಾಹಕ

Spread the love

ಚಿನ್ನದ ಒಡವೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ನಿರ್ವಾಹಕ

ಪಿರಿಯಾಪಟ್ಟಣ: ಸಾರಿಗೆ ಬಸ್ ನಲ್ಲಿ ಸಿಕ್ಕ 75 ಗ್ರಾಂ ಚಿನ್ನದ ಒಡವೆಗಳನ್ನು ವಾರಸುದಾರರನ್ನು ಹುಡುಕಿ ಹಿಂದಿರುಗಿಸುವ ಮೂಲಕ ಪಿರಿಯಾಪಟ್ಟಣ ಸಾರಿಗೆ ಘಟಕ ನಿರ್ವಾಹಕ ಎಸ್.ಆನಂದ್ ಪ್ರಾಮಾಣಿಕತೆ ಮೆರೆದಿದ್ದಾರೆ.

ಚಾಲಕ ಕಂ ನಿರ್ವಾಹಕರಾಗಿರುವ ಎಸ್.ಆನಂದ್ ಅವರು ವಾಹನ ಸಂಖ್ಯೆ ಕೆಎ-09 ಎಫ್-310ರಲ್ಲಿ ಚಾಲಕ ವಸಂತ್ ಅವರೊಂದಿಗೆ ರಾವಂದೂರು ಪಿರಿಯಾಪಟ್ಟಣ ಮಾರ್ಗವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಪ್ರಯಾಣಿಕರೊಬ್ಬರ ಪರ್ಸ್ ಸಿಕ್ಕಿದೆ ಅದನ್ನು ತೆರೆದು ನೋಡಿದಾಗ ಮಹಿಳೆಯೊಬ್ಬರ ವೋಟರ್ ಐಡಿ, 40ಗ್ರಾಂ ಚಿನ್ನದ ಮಾಂಗಲ್ಯ ಸರ, 20ಗ್ರಾಂ ಚಿನ್ನದ ಚೈನ್, 15ಗ್ರಾಂ ಚಿನ್ನದ ಓಲೆ ಮತ್ತು ಜುಮಕಿ ಹಾಗೂ 1 ಸಾವಿರ ಹಣ ಕಂಡು ಬಂದಿದೆ.

ಪರ್ಸ್ ನಲ್ಲಿ ದೊರೆತಿದ್ದ ವೋಟರ್ ಐಡಿ ಮುಖಾಂತರ ಪರ್ಸ್ ಕಳೆದುಕೊಂಡಿದ್ದವರು ಪಿರಿಯಾಪಟ್ಟಣ ತಾಲೂಕಿನ ಕಂದೇಗಾಲ ಗ್ರಾಮದ ಮಣಿ ಎಂಬಾಕೆ ಎಂದು ಕಂಡುಹಿಡಿದ ನಿರ್ವಾಹಕ ಎಸ್.ಆನಂದ್ ಅವರು ಪಿರಿಯಾಪಟ್ಟಣ ಬಸ್ ನಿಲ್ದಾಣದಲ್ಲಿನ ಸಂಚಾರ ನಿಯಂತ್ರಣಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಿ ಗೊತ್ತಿರುವವರು ಮುಖಾಂತರ ಪರ್ಸ್ ಕಳೆದುಕೊಂಡಿದ್ದ ಮಹಿಳೆಯ ಮೊಬೈಲ್ ನಂಬರ್ ಪಡೆದುಕೊಂಡು ಕಳೆದು ಹೋದ ವಸ್ತುಗಳ ಬಗ್ಗೆ ವಿಚಾರಿಸಿದ್ದಾರೆ, ಮಹಿಳೆ ಕಳೆದುಕೊಂಡಿದ್ದ ವಸ್ತುಗಳ ಬಗ್ಗೆ ನಿಖರ ಮಾಹಿತಿ ನೀಡಿದಾಗ ಮತ್ತು ವೋಟರ್ ಐಡಿಯಲ್ಲಿನ ವಿಳಾಸ ಖಚಿತಪಡಿಸಿಕೊಂಡು ಸಂಚಾರ ನಿಯಂತ್ರಕರಾದ ಶ್ರೀಧರ್ ಹಾಗೂ ಸುರೇಶ್ ಅವರ ಮುಖಾಂತರ ಮಹಿಳೆಗೆ ಪರ್ಸ್ ಹಿಂದಿರುಗಿಸಿದ ನಿರ್ವಾಹಕ ಎಸ್.ಆನಂದ್ ಅವರು ಮಾನವೀಯತೆ ಜೊತೆಗೆ ಪ್ರಾಮಾಣಿಕತೆ ಮೆರೆದಿದ್ದಾರೆ.

ಕಳೆದು ಹೋಗಿದ್ದ ಪರ್ಸ್ ಸಿಕ್ಕ ಖುಷಿಯಲ್ಲಿ ಮಣಿ ಅವರು ನಿರ್ವಾಹಕ ಎಸ್.ಆನಂದ್ ಸೇರಿದಂತೆ ಚಾಲಕ ವಸಂತ್ ಮತ್ತು ಸಂಚಾರ ನಿಯಂತ್ರಕರಿಗೆ ಧನ್ಯವಾದ ಹೇಳಿದ್ದಾರೆ. ಅಂದಾಜು 4.5 ಲಕ್ಷ ಬೆಲೆಬಾಳುವ ಚಿನ್ನದ ಒಡವೆಗಳನ್ನು ವಾರಸುದಾರರನ್ನು ಕಂಡುಹಿಡಿದು ಹಿಂದಿರುಗಿಸಿದ ಸಾರಿಗೆ ಸಂಸ್ಥೆಯ ಸಿಬ್ಬಂದಿ ಎಸ್.ಆನಂದ್ ಕಾರ್ಯಕ್ಕೆ ಪಿರಿಯಾಪಟ್ಟಣ ಸಾರಿಗೆ ಘಟಕ ವ್ಯವಸ್ಥಾಪಕ ದರ್ಶನ್ ರಾಮಚಂದ್, ಸಂಚಾರ ನಿಯಂತ್ರಕರಾದ ಶಿವಕುಮಾರ್, ರಘು, ಚಾಲಕ ನಿರ್ವಾಹಕ ತಾಂತ್ರಿಕ ಹಾಗೂ ಕಚೇರಿ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Spread the love

Exit mobile version