ಚುನಾವಣಾ ಆಯೋಗದಿಂದ ಸಾಸ್ತಾನ ಇಂಟಕ್ ಕಚೇರಿಯಿಂದ ಕಾಂಗ್ರೆಸ್ ಪ್ರಚಾರದ ಕರಪತ್ರಗಳ ಜಪ್ತಿ
ಉಡುಪಿ: ಕಾಂಗ್ರೆಸ್ ಪಕ್ಷದ ಇಂಟಕ್ ಘಟಕದ ವತಿಯಂದ ಯಾವುದೇ ಪರವಾನಿಗೆ ಇಲ್ಲದೆ ವಿತರಿಸುತ್ತಿದ್ದ ಕಾಂಗ್ರೆಸ್ ಪ್ರಚಾರದ ಕರಪತ್ರಗಳನ್ನು ಚುನಾವಣಾ ಆಯೋಗ ಕೋಟ ಬಳಿಯ ಸಾಸ್ತಾನದಲ್ಲಿ ಧಾಳಿ ನಡೆಸಿ ವಶಕ್ಕೆ ಪಡೆದಿದೆ.
ಸಾಸ್ತಾನದ ಟೋಲ್ ಗೇಟ್ ಬಳಿ ಕಾಂಗ್ರೆಸ್ ಪಕ್ಷದ ಇಂಟಕ್ ವತಿಯಿಂದ ಯಾವುದೇ ಪರವಾನಿಗೆ ಇಲ್ಲದೆ ಮುದ್ರಿಸಿ ವಿತರಿಸಲಾಗುತ್ತಿದ್ದ ಕಾಂಗ್ರೆಸ್ ಪ್ರಚಾರದ ಸುಮಾರು ಒಂದು ಸಾವಿರ ಕರಪತ್ರಗಳನ್ನು ಚುನಾವಣಾ ಆಯೋಗ ಶುಕ್ರವಾರ ಜಫ್ತಿ ಮಾಡಿದೆ. ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಅವರು ಸಾಸ್ತಾನ ಬಳಿಯಲ್ಲಿ ಇಂಟಕ್ ಸೇವಾ ಕೇಂದ್ರ ತೆರೆದಿದ್ದು, ಕೋಟ ಠಾಣೆಗೆ ಬಂದ ಮಾಹಿತಿಯಂತೆ ಆಯೋಗ ಹಾಗೂ ಪೋಲಿಸರು ಧಾಳಿ ಮಾಡಿದಾಗ ಈ ಕರಪತ್ರಗಳು ಪತ್ತೆಯಾಗಿವೆ. ಕರಪತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸಂತೋಷ್ ಲಾಡ್ ಮತ್ತು ಕುಂದಾಪುರದಲ್ಲಿ ಕಾಂಗ್ರೆಸ್ ಸ್ಪರ್ಧಾಕಾಂಕ್ಷಿ ರಾಕೇಶ್ ಮಲ್ಲಿ ಅವರ ಭಾವಚಿತ್ರ ಮತ್ತು ಪಕ್ಷದ ಹಸ್ತ ಚಿಹ್ನೆಗಳನ್ನು ಮುದ್ರಿಸಲಾಗಿತ್ತು
ಈ ಕರಪತ್ರಗಳನ್ನು ಪರವಾನಿಗೆ ಇಲ್ಲದೆ ಮುದ್ರಿಸಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ಬಗ್ಗೆ ಜಿಲ್ಲಾ ಚುನಾವಣಾ ಆಯೋಗ ಪ್ರಕರಣ ದಾಖಲಿಸಿಕೊಂಡಿದೆ ಅಲ್ಲದೆ ಇದೇ ಕಚೇರಿಯಲ್ಲಿ ಇಂಟಕ್ ವತಿಯಿಂದ ಪಕ್ಷದ ಚಿಹ್ನೆಯನ್ನು ಮುದ್ರಿಸಿರುವ ವಿಮಾ ಅರ್ಜಿಗಳು ಕೂಡ ಪತ್ತೆಯಾಗಿದ್ದು ಅವುಗಳನ್ನು ಜಫ್ತಿ ಮಾಡಿ, ಇನ್ನೊಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.