ಚುನಾವಣಾ ಕರ್ತವ್ಯ: ಶಿಕ್ಷಕರಿಗೆ ಅಗತ್ಯ ಸೌಲಭ್ಯ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಕಾರ್ಣಿಕ್ ಮನವಿ
ಚುನಾವಣಾ ಸಂದರ್ಭದಲ್ಲಿ ಶಿಕ್ಷಕರು ಚುನಾವಣಾ ಕಾರ್ಯವನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸುವ ಮೂಲಕ ಚುನಾವಣೆಗಳು ಯಶಸ್ವಿಯಾಗಿ ನಡೆಯುವಂತಾಗಲು ಹಿಂದಿನಿಂದಲೂ ಪೂರ್ಣ ಸಹಕಾರವನ್ನು ನೀಡಿರುತ್ತಾರೆ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ನಡೆದ ಚುನಾವಣೆಗಳಲ್ಲಿ ಶಿಕ್ಷಕರು ಅನುಭವಿಸಿದ ತೊಂದರೆಗಳನ್ನು ಪ್ರಸ್ತಾಪಿಸಿ, ಮುಂಬರುವ ವಿಧಾನಸಭಾ ಚುನಾವಣಾ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜಿಸುವಾಗ ಈ ಕೆಳಗಿನ ವಿಷಯಗಳ ಕುರಿತು ಅಗತ್ಯ ಗಮನ ಹರಿಸಬೇಕೆಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ನೈರುತ್ಯ ಶಿಕ್ಷಕ ಕ್ಷೇತ್ರದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಚುನಾವಣೆಗೆ ಶಿಕ್ಷಕರನ್ನು ನಿಯೋಜಿಸುವಾಗ ಹೊರ ತಾಲೂಕುಗಳಿಗೆ ನಿಯೋಜಿಸುತ್ತಿದ್ದು, ಶಿಕ್ಷಕರನ್ನು ಅವರು ಕರ್ತವ್ಯ ನಿರ್ವಹಿಸುತ್ತಿರುವ ತಾಲೂಕಿನ ವ್ಯಾಪ್ತಿಯೊಳಗೆ ನಿಯೋಜಿಸುವುದು ಹಾಗೂ ಮಹಿಳಾ ಶಿಕ್ಷಕಿಯರನ್ನು ಅವರು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆ ಹೊರತುಪಡಿಸಿ ಸಮೀಪದ ಮತಗಟ್ಟೆಯ ವ್ಯಾಪ್ತಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸುವುದು.
ಶಿಕ್ಷಕಿಯರನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸುವಾಗ ಒಂದು ತಾಲೂಕಿನಲ್ಲಿ ಮನೆಯಿದ್ದು, ಇನ್ನೊಂದು ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಕರಣಗಳಲ್ಲಿ ಅವರು ಪ್ರಸ್ತುತ ವಾಸಿಸುತ್ತಿರುವ ಸುತ್ತಮುತ್ತಲಿನ ಪ್ರದೇಶಕ್ಕೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವುದು.
ಅಂಗವಿಕಲ/ವಿಶೇಷ ಸಾಮರ್ಥ್ಯದ ಮಕ್ಕಳನ್ನು ಹೊಂದಿರುವ ಶಿಕ್ಷಕಿಯರಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡುವುದು.
ಕರ್ತವ್ಯಕ್ಕೆ ನಿಯೋಜಿಸಲಾದ ಶಿಕ್ಷಕರಿಗೆ ತಂಗಲು ಮೂಲಭೂತ ಸೌಕರ್ಯಗಳೊಂದಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು.
ಮತಗಟ್ಟೆಗಳಲ್ಲಿ ತಂಗುವಾಗ ಮುಖ್ಯವಾಗಿ ಶಿಕ್ಷಕಿಯರು ಶೌಚಾಲಯ ಸಮಸ್ಯೆ ಹಾಗೂ ಭದ್ರತಾ ತೊಂದರೆಯನ್ನು ಅನುಭವಿಸುತ್ತಿದ್ದು, ಅವರ ಸುರಕ್ಷೆಗೆ ಬೇಕಾದ ಸೂಕ್ತ ವ್ಯವಸ್ಥೆ ಮಾಡುವಂತೆ ಕ್ರಮಕೈಗೊಳ್ಳುವುದು.
ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಶಿಕ್ಷಕರನ್ನು ಚುನಾವಣಾ ಕರ್ತವ್ಯ ಮುಗಿಯುವ ವೇಳೆಗೆ ರಾತ್ರಿಯಾಗುತ್ತಿದ್ದು, ದೂರದ ಊರಿನಿಂದ ನಿಯೋಜನೆಗೊಂಡ ಶಿಕ್ಷಕಿಯರನ್ನು ನಡುರಾತ್ರಿಯ ಸಮಯದಲ್ಲಿ ನಡುರಸ್ತೆಯಲ್ಲಿ ಬಸ್ಸಿನ ಸಿಬ್ಬಂದಿಗಳು ಬಿಟ್ಟುಹೋಗಿರುವ ಅನೇಕ ಪ್ರಕರಣಗಳಿದ್ದು, ಮಹಿಳಾ ಶಿಕ್ಷಕಿಯರನ್ನು ಸುರಕ್ಷತೆಯ ದೃಷ್ಠಿಯಿಂದ ಅವರ ಮನೆಗಳಿಗೆ ತಲುಪಿಸಲು ಸೂಕ್ತ ವಾಹನ ವ್ಯವಸ್ಥೆ ಮಾಡಬೇಕು ಹಾಗೂ ವಾಹನ ವ್ಯವಸ್ಥೆಯ ಜವಾಬ್ದಾರಿಗಾಗಿ ಪ್ರತಿ ಡಿಮಸ್ಟರಿಂಗ್ ಕೇಂದ್ರಕ್ಕೆ ಪ್ರತ್ಯೇಕ ಅಧಿಕಾರಿಯೊಬ್ಬರನ್ನು ಮೇಲ್ವಿಚಾರಣೆಗೆ ನೇಮಿಸಿ ಅವರ ಮೊಬೈಲ್ ಸಂಖ್ಯೆಯನ್ನು ಪ್ರದರ್ಶಿಸಬೇಕು.
55 ವಯಸ್ಸು ದಾಟಿದ ಶಿಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಬಾರದು ಎಂಬ ಸುತ್ತೋಲೆ ಇದ್ದರೂ ಸಹ ಅನೇಕ ಸಂದರ್ಭಗಳಲ್ಲಿ 55 ವಯಸ್ಸು ದಾಟಿದ, ಅರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ಸಹ ಈ ಕುರಿತು ಅವರು ಮಾಹಿತಿ ನೀಡಿದ್ದರೂ ಅದನ್ನು ಪರಿಗಣಿದೆ ದೂರದ ಊರುಗಳಿಗೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ಇಂತಹ ಶಿಕ್ಷಕರಿಗೆ ಚುನಾವಣಾ ಕಾರ್ಯದಿಂದ ವಿನಾಯತಿ ನೀಡಬೇಕು.
ಮೇಲಿನ ಅಂಶಗಳನ್ನು ಪರಿಗಣಿಸಿ, ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಅತ್ಯಂತ ದಕ್ಷತೆಯಿಂದ ಚುನಾವಣಾ ಅವಶ್ಯಕತೆಗಳಿಗೆ ನಿರಂತರವಾಗಿ ಸಹಕರಿಸುತ್ತಾ ಬಂದಿರುವ ಶಿಕ್ಷಕ ಸಮುದಾಯದವರ ಸಮಸ್ಯೆಗಳನ್ನು ಅರ್ಥೈಸಿಕೊಂಡು ಸೂಕ್ತ ಪರಿಹಾರ ನೀಡುವಂತೆ ಅವರು ಕ್ಷೇತ್ರ ವ್ಯಾಪ್ತಿಯ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.