ಚುನಾವಣಾ ನೀತಿ ಸಂಹಿತೆ; ಖಾಸಗಿ ಕಾರ್ಯಕ್ರಮಕ್ಕೆ ಅನುಮತಿ ಅಗತ್ಯವಿಲ್ಲ- ಡಿಸಿ ಪ್ರಿಯಾಂಕಾ ಮೇರಿ 

Spread the love

ಚುನಾವಣಾ ನೀತಿ ಸಂಹಿತೆ; ಖಾಸಗಿ ಕಾರ್ಯಕ್ರಮಕ್ಕೆ ಅನುಮತಿ ಅಗತ್ಯವಿಲ್ಲ- ಡಿಸಿ ಪ್ರಿಯಾಂಕಾ ಮೇರಿ   

ಉಡುಪಿ: ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ , ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದಾದರೂ , ಅವರವರ ಖಾಸಗಿ ಮನೆಗಳಲ್ಲಿ ನಡೆಯುವ ಕಾರ್ಯಕ್ರಮಗಳನ್ನು ನಡೆಸಲು ಸಾರ್ವಜನಿಕರು ಅನುಮತಿ ಪಡೆಯುವ ಅಗತ್ಯವಿರುವುದಿಲ್ಲ. ಮದುವೆ, ಮುಂಜಿ, ಹುಟ್ಟುಹಬ್ಬ, ಆತರಕ್ಷತೆ, ಗೃಹಪ್ರವೇಶ ಇತ್ಯಾದಿ ರಾಜಕೀಯ ಉದ್ದೇಶವಲ್ಲದ ಖಾಸಗಿ ಕಾರ್ಯಕ್ರಮಗಳಿಗೆ ಚುನಾವಣಾಧಿಕಾರಿಯವರ ಗಮನಕ್ಕೆ ತಂದು ಹಿಂಬರಹ ಪಡೆಯಬೇಕಾಗಿರುತ್ತದೆ ಹೊರತು ಏಕ ಗವಾಕ್ಷಿ ನಲ್ಲಿ ಅನುಮತಿ ಪಡೆಯುವ ಅಗತ್ಯವಿರುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸ್ಪಷ್ಟಪಡಿಸಿದ್ದಾರೆ.

ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳ ನಡುವೆ ಉಂಟಾಗಿರುವ ಗೊಂದಲಗಳ ಕುರಿತು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಸ್ಪಷ್ಟನೆ ನೀಡಿದ ಅವರು ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮಗಳಾದ ಯಕ್ಷಗಾನ , ಕೋಲಾ, ದೈವರಾಧನೆಗಳಿಗೆ ಧ್ವನಿವರ್ಧಕ ಬಳಸಲು, ಪೊಲೀಸ್ ಇಲಾಖೆಯ ಅನುಮತಿ ಪಡೆಯತಕ್ಕದ್ದು. ಯಕ್ಷಗಾನ, ನಾಟಕ ಸೇರಿದಂತೆ, , ರಾಜಕೀಯ ರಹಿತವಾದ ಸಾರ್ವಜನಿಕ ಕಾರ್ಯಕ್ರಮಗಳ ಸಂಘಟಕರು , ಈ ಕಾರ್ಯಕ್ರಮವನ್ನು ಯಾವುದೇ ಉದ್ದೇಶಕ್ಕಾಗಿ ನಡೆಸುತ್ತಿಲ್ಲವೆಂದು ದಾಖಲೆಯೊಂದಿಗೆ ಡಿಕ್ಲೆರೇಶನನ್ನು ಸಂಬಂದಪಟ್ಟ ವಿಧಾನಸಭಾ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು.

ರಾಜಕೀಯ ಪ್ರಚಾರಗಳಿಗೆ ತ್ವರಿತಗತಿಯಲ್ಲಿ ಅನುಮತಿ ನೀಡಲು ಅನುಕೂಲವಾಗುವಂತೆ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಏಕಗವಾಕ್ಷಿ (Single Window) ಕೊಠಡಿ ತೆರೆಯಲಾಗಿದೆ. ಸಾರ್ವಜನಿಕರು ಅನುಮತಿಗಾಗಿ ಜಿಲ್ಲಾಧಿಕಾರಿಯವರ ಕಚೇರಿಗೆ ಬರುವ ಅಗತ್ಯ ಇರುವುದಿಲ್ಲ ಎಂದು ತಿಳಿಸಿದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷಣ್ ಬಿ ನಿಂಬರಗಿ, ಅಪರ ಜಿಲ್ಲಾಧಿಕಾರಿ ಅನುರಾಧ ಜಿ ಉಪಸ್ಥಿತರಿದ್ದರು.


Spread the love