ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರೂ ಉಡುಪಿಯಲ್ಲಿ ತೆರವಿನ ಭಾಗ್ಯ ಕಾಣದ ರಾಜಕೀಯ ನಾಯಕರ ಕಟೌಟ್!
ಉಡುಪಿ: ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರೂ ಇನ್ನೂ ರಾಜಕೀಯ ನಾಯಕರನ್ನು ಸ್ವಾಗತಿಸುವ ಆಡಳಿತ ಕಾಂಗ್ರೆಸ್ ಪಕ್ಷದ ಬೃಹತ್ ಗಾತ್ರದ ಎರಡು ಕಟೌಟ್ ಬ್ರಹ್ಮಾವರ ಸಮೀಪದ ಹೇರೂರು ರಾಷ್ಟ್ರೀಯ ಹೆದ್ದಾರಿ ಬಳಿ ಸಾರ್ವಜನಿಕ ಸ್ಥಳಗಳಲ್ಲಿ ರಾರಾಜಿಸುತ್ತಿವೆ.
ರಾಷ್ಟ್ರೀಯ ಹೆದ್ದಾರಿ 66 ರ ಹೆರೂರು ಸೇತುವೆಯ ಬಳಿಯ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಕಟ್ಟಡವೊಂದರ ಮೇಲೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಸೇರಿದಂತೆ ಜಿಲ್ಲಾ ಮಟ್ಟದ ಕಾಂಗ್ರೆಸ್ ನಾಯಕರ ಭಾವಚಿತ್ರ ಹೊಂದಿದ ಬೃಹತ್ ಗಾತ್ರದ ಎರಡು ಕಟೌಟ್ ತೆರವಿನ ಭಾಗ್ಯ ಕಾಣದೆ ಇನ್ನು ರಾರಾಜಿಸುತ್ತಿದೆ.
ಚುನಾವಣಾ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗಿ ಹತ್ತು ದಿನಗಳು ಕಳೆದಿವೆ. ಆದರೂ ಜಿಲ್ಲಾಡಳಿತದ ಚುನಾವಣಾ ಆಯೋಗದ ಉಸ್ತುವಾರಿ ವಹಿಸಿದ ನಾಯಕರು ಇಂತಹ ಕಟೌಟ್ ತೆರವು ಮಾಡದೆ ನಿರ್ಲಕ್ಷ ತೋರಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಇದೇನಾ ಕಟ್ಟುನಿಟ್ಟಿನ ಚುನಾವಣಾ ನೀತಿ ಸಂಹಿತೆ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ.
ಈ ಬಗ್ಗೆ ಮ್ಯಾಂಗಲೋರಿಯನ್ ಜಿಪಂ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಾಶಿ ಅವರ ಗಮನ ಸೆಳೆದಾಗ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಖಾಸಗಿ ಸ್ಥಳಗಳಲ್ಲಿ ಇರುವ ಯಾವುದೇ ಸರಕಾರಿ ಅಥವಾ ಪಕ್ಷದ ಕಟೌಟ್, ನಾಮಫಲಕ, ಬ್ಯಾನರ್ ಇತ್ಯಾದಿಗಳನ್ನು ತೆರವುಗೊಳಿಸಲು ಆಯಾಯ ಪಂಚಾಯತ್ ವ್ಯಾಪ್ತಿಯ ಅಧಿಕಾರಿಗಳಿಗೆ ಮಾಹಿತ ನೀಡಲಾಗಿದೆ. ಇನ್ನೂ ಕೂಡ ತೆಗೆಯದೆ ನಿರ್ಲಕ್ಷ ವಹಿಸಿರುವುದು ಗಮನಕ್ಕೆ ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.