ಚುನಾವಣೆಗೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಮೃತ್ ಶೆಣೈ
ಉಡುಪಿ: ಉಡುಪಿ–ಚಿಕ್ಕಮಗಳೂರು ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಮೃತ್ ಶೆಣೈ ಗುರುವಾರ ನಗರದ ಜೋಡುಕಟ್ಟೆಯಿಂದ ಪಾದೆಯಾತ್ರೆ ಆರಂಭಿಸುವ ಮೂಲಕ ಸಾರ್ವಜನಿಕರಿಂದ ಚುನಾವಣಾ ದೇಣಿಗೆ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶೆಣೈ, ‘12 ವರ್ಷಗಳಿಂದ ನಿಷ್ಟಾವಂತ ಕಾರ್ಯಕರ್ತನಾಗಿ ಪಕ್ಷದ ಸಿದ್ಧಾಂತ, ಸಾಮಾಜಿಕ ನ್ಯಾಯಕ್ಕಾಗಿ ಕಾಂಗ್ರೆಸ್‌ನಲ್ಲಿ ಕೆಲಸ ಮಾಡಿದ್ದೇನೆ. 5 ವರ್ಷಗಳಿಂದ ಸಂಸದೆ ಶೋಭಾ ಕರಂದ್ಲಾಜೆ ಅವರ ನಿಷ್ಕ್ರಿಯತೆ ಹಾಗೂ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನತೆಗೆ ಮುಟ್ಟಿಸಿದ್ದೇನೆ. ಈ ಶ್ರಮಕ್ಕೆ ಹೈಕಮಾಂಡ್ ಬೆಲೆ ನೀಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉಡುಪಿ–ಚಿಕ್ಕಮಗಳೂರು ಕ್ಷೇತ್ರದಲ್ಲಿ ಜೆಡಿಎಸ್ ಸಂಪೂರ್ಣ ದುರ್ಬಲವಾಗಿದೆ. ಆದರೂ ಆ ಪಕ್ಷಕ್ಕೆ ಕ್ಷೇತ್ರವನ್ನು ನೀಡಿರುವ ಹೈಕಮಾಂಡ್ ನಿರ್ಧಾರದಿಂದ ನಿಷ್ಟಾವಂತ ಕಾರ್ಯಕರ್ತರಿಗೆ ಬೇಸರವಿದೆ ಎಂದರು.
‘ಹೈಕಮಾಂಡ್ ಮತ್ತೆ ತಪ್ಪು ನಿರ್ಧಾರವನ್ನು ಕೈಗೊಳ್ಳಬಾರದು. ಅದಕ್ಕಾಗಿ ನನ್ನ ರಾಜಕೀಯ ಭವಿಷ್ಯವನ್ನು ಲೆಕ್ಕಿಸದೆ, ಹೈಕಮಾಂಡ್‌ಗೆ ಸ್ಪಷ್ಟ ಸಂದೇಶ ರವಾನೆ ಮಾಡುವ ಉದ್ದೇಶದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ’ ಎಂದು ಅಮೃತ್ ಶೆಣೈ ಹೇಳಿದರು.
‘ಚುನಾವಣಾ ಪ್ರಚಾರ, ಸಭೆಗಳಿಗೆ ಸಾಕಷ್ಟು ಖರ್ಚಾಗಲಿದೆ. ಅದಕ್ಕಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಮಾಡುತ್ತಿದ್ದೇನೆ. ಚುನಾವಣೆಯಲ್ಲಿ ಜನರ ಭಾಗವಹಿಸುವಿಕೆ ಮುಖ್ಯ. ಹಾಗಾಗಿ ‘ನೀವು ಹಣಕೊಡಿ, ಎಂಪಿ ಮಾಡಿ, ಮುಂದೆ ನಿಮ್ಮ ಸೇವೆ ಮಾಡುತ್ತೇನೆ’ ಎಂಬ ಹೊಸ ಪರಿಕಲ್ಪನೆಯನ್ನು ಇಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ’ ಎಂದು ಹೇಳಿದರು.
ಮನೋವೈದ್ಯ ಡಾ.ಪಿ.ವಿ. ಭಂಡಾರಿ, ಸಾಮಾಜಿಕ ಕಾರ್ಯಕರ್ತೆ ಜಯಶ್ರೀ ಭಟ್, ಯಜ್ಞೇಶ್ ಆಚಾರ್ಯ, ಸಂಜೀವ ವಂಡ್ಸೆ, ಕಿಶೋರ್ ಶೆಟ್ಟಿ, ಅನಿತಾ ಡಿಸೋಜ, ಅಲೆನ್ ರೋಹನ್ ವಾಜ್, ಅಹ್ಮದ್ ನೇಜಾರು ಪಾಲ್ಗೊಂಡಿದ್ದರು.