ಚೇತನಾ ಬಾಲ ವಿಕಾಸ ಕೇಂದ್ರದಲ್ಲಿ ‘ಆಟಿಸಂ ಡೇ’
ಮಂಗಳೂರು : ಸೇವಾ ಭಾರತಿ(ರಿ) ಮಂಗಳೂರು ಇದರ ಅಂಗ ಸಂಸ್ಥೆಯಾದ ಚೇತನಾ ಬಾಲ ವಿಕಾಸ ಕೇಂದ್ರದಲ್ಲಿ ವರ್ಷಂಪ್ರತಿ ನಡೆಯುವಂತೆ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಹಾಗೂ ‘ಆಟಿಸಂ ಡೇ’ ಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಹನುಮಂತ ಕಾಮತ್, ನೀಲಕಂಠ, ಸಿ.ಎಲ್. ಶೆಣೈ, ಕೆ.ಆರ್. ಕಾಮತ್, ಪ್ರಶಾಂತ್ ಕಾಮತ್ ಹಾಗೂ ಡಾ. ಶಾಲಿನಿ ಅಯ್ಯಪ್ಪ ಇವರು ಆಗಮಿಸಿದ್ದರು. ಸೇವಾ ಭಾರತಿ (ರಿ) ಮಂಗಳೂರು ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಸುಮತಿ ವಿ. ಶೆಣೈ ಹಾಗೂ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಪ್ರೀತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಕ್ಕಳಿಗೆ ಆರತಿ ಬೆಳಗಿ, ಕುಂಕುಮ ಹಚ್ಚಿ ಸಿಹಿತಿಂಡಿ ತಿನ್ನಿಸುವ ಮೂಲಕ ಮಕ್ಕಳ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಸ್ವಯಂ ಸೇವಕರು ಹಾಗೂ ಪೋಷಕರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಗಳು ಪ್ರಾರಂಭಗೊಂಡವು. ಪೋಷಕರಿಂದ ಯುಗಳ ಗೀತೆ, ಶಿಕ್ಷಕಿಯರಿಂದ ಸಮೂಹ ನೃತ್ಯಗಾನ, ಸಮೂಹ ಗೀತೆಯಿಂದ ಮಕ್ಕಳನ್ನು ರಂಜಿಸಲಾಯಿತು.
ಮಕ್ಕಳಿಂದ ನೃತ್ಯಗಾನಗಳು ನಡೆದವು. ಮಕ್ಕಳಿಗೆ ಹುಟ್ಟು ಹಬ್ಬದ ಪ್ರಯುಕ್ತ ಉಡುಗೊರೆಯನ್ನು ಕೊಟ್ಟು ಸವಿಯಾದ ಭೋಜನದ ನಂತರ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.