Home Mangalorean News Kannada News ಜನತಾ ಕರ್ಫ್ಯೂ ಗೆ ದಕ ಜಿಲ್ಲಾ ಕಾಂಗ್ರೆಸ್ ಸಂಪೂರ್ಣ ಬೆಂಬಲ – ಎ ಸಿ ವಿನಯ್...

ಜನತಾ ಕರ್ಫ್ಯೂ ಗೆ ದಕ ಜಿಲ್ಲಾ ಕಾಂಗ್ರೆಸ್ ಸಂಪೂರ್ಣ ಬೆಂಬಲ – ಎ ಸಿ ವಿನಯ್ ರಾಜ್

Spread the love

ಜನತಾ ಕರ್ಫ್ಯೂ ಗೆ ದಕ ಜಿಲ್ಲಾ ಕಾಂಗ್ರೆಸ್ ಸಂಪೂರ್ಣ ಬೆಂಬಲ – ಎ ಸಿ ವಿನಯ್ ರಾಜ್

ಮಂಗಳೂರು: ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ದೇಶವನ್ನು ಉದ್ದೇಶಿಸಿ ಬರುವ ಆದಿತ್ಯವಾರ ಮಾರ್ಚ್ 22ರಂದು ಬೆಳಿಗ್ಗೆ 7.00 ಗಂಟೆಯಿಂದ ರಾತ್ರಿ 09.00 ಗಂಟೆಯವರೆಗೆ ದೇಶದ ಎಲ್ಲಾ ನಾಗರಿಕರು ಮನೆಯ ಒಳಗೆ ಇರುವುದರ ಮೂಲಕ ಜನತಾ ಕರ್ಫ್ಯೂ ದೇಶದಾದ್ಯಂತ ಮಾಡಬೇಕಾಗಿದೆ ಹಾಗೂ ಸಂಜೆ 05.00 ಗಂಟೆಗೆ ಅವರವರ ಮನೆಯ ಕಿಟಕಿಯ ಬಳಿ, ಬಾಲ್ಕನಿ ಬಳಿ ಬಂದು ಚಪ್ಪಾಳೆ ತಟ್ಟಬೇಕೆಂದು ನೀಡಿರುವ ಕರೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪಕ್ಷ ನಮ್ಮ ದೇಶದ ಜನತೆಯ ಆರೋಗ್ಯ ಕಾಪಾಡುವ ವಿಚಾರದ ಬಗ್ಗೆ ಎಚ್ಚರಿಕೆಯ/ ಮುಂಜಾಗ್ರತಾ ಕ್ರಮದ ಸಂಕೇತವಾಗಿ ಪ್ರಧಾನಮಂತ್ರಿಗಳು ನೀಡಿರುವ ಈ ಕರೆಗೆ ಸಂಪೂರ್ಣ ಬೆಂಬಲವನ್ನು ಸೂಚಿಸುತ್ತದೆ ಎಂದು ಹೇಳಿದೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ದಕ ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರರಾದ ಎಸಿ ವಿನಯ್ ರಾಜ್ ಅವರು ಕೋವಿಡ್-19 ವೈರಸ್ ಇಡೀ ಪ್ರಪಂಚವನ್ನೇ ಅಲುಗಾಡಿಸಿದೆ. ಈ ರೋಗ ಮನುಷ್ಯಕುಲವನ್ನು ಅಲುಗಾಡಿಸಿದ್ದು ಮಾತ್ರವಲ್ಲದೇ ಈ ರೋಗ ಪೀಡಿತ ದೇಶಗಳ ಅರ್ಥಿಕ ಪರಿಸ್ಥಿತಿಯನ್ನು ದುರ್ಬಲಗೊಳಿಸಿದೆ. ಈ ರೋಗ ನಮ್ಮ ದೇಶಕ್ಕೆ ಕೂಡ ಕಾಲಿಟ್ಟಿದ್ದು ಈಗಾಗಲೇ ಅನೇಕರು ರೋಗ ಪೀಡಿತರಾಗಿದ್ದು, ಮೂರು ಜೀವವನ್ನು ಬಲಿತೆಗೆದುಕೊಂಡಿದೆ. ಮದ್ದಿಲ್ಲದ ಈ ರೋಗಕ್ಕೆ ತಡೆಗಟ್ಟುವಿಕೆ ಮಾತ್ರ ಪ್ರಸ್ತುತ ಇರುವ ಮಾರ್ಗವಾಗಿದೆ. ಈ ಕಾರಣದಿಂದ ಕೇಂದ್ರ ಸರಕಾರ ಮತ್ತು ಎಲ್ಲಾ ರಾಜ್ಯ ಸರ್ಕಾರಗಳು ಈ ರೋಗವನ್ನು ತಡೆಗಟ್ಟುವಲ್ಲಿ ಮುಂಜಾಗ್ರತಾ ಕ್ರಮವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ದೇಶದ ಜನತೆ ಇದಕ್ಕೆ ಶೀಘ್ರ ಸ್ಪಂದನೆಯನ್ನು ಕೂಡ ಕೊಟ್ಟಿದೆ.

ಆದರೆ ಈ ಕೋವಿಡ್-19 ರ ಹಾವಳಿಯಿಂದ ಮತ್ತು ಅದನ್ನು ತಡೆಗಟ್ಟುವ ಮುಂಜಾಗ್ರತಾ ಕ್ರಮದಿಂದ ವ್ಯಾಪಾರ ಮುಂಗಟ್ಟುಗಳು, ಹೋಟೇಲುಗಳು, ಸಣ್ಣ, ಮಧ್ಯಮ ಕೈಗಾರಿಕೆಗಳು, ಅಸಂಘಟಿತ ವಲಯದ ಕಾರ್ಮಿಕರು, ರೈತರು ವ್ಯಾಪಾರವಿಲ್ಲದೆ ಆರ್ಥಿಕ ಮುಗಟ್ಟನ್ನು ಅನುಭವಿಸುತ್ತಿದ್ದಾರೆ. ಉತ್ಪಾದನೆ ಕಡಿತವಾಗಿರುವುದರಿಂದ ಎಲ್ಲಾ ಸಿಬ್ಬಂದಿ ಕಾರ್ಮಿಕ ವರ್ಗವನ್ನು ಇವತ್ತು ರಜೆಯಲ್ಲಿ ಕಳುಹಿಸಲಾಗಿದೆ. ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕ ಮತ್ತು ಮಾಲಕರು, ಬೀದಿ ಬದಿ ವ್ಯಾಪಾರಸ್ಥರು, ಕಟ್ಟಡ ಕಾರ್ಮಿಕರು ಇವತ್ತು ಆರ್ಥಿಕ ತೊಂದರೆಗೆ ಈಡಾಗಿದ್ದಾರೆ. ಪೆಟ್ರೋಲ್, ಡಿಸೇಲ್ ಬೆಲೆ ಗಗನಕ್ಕೇರಿರುತ್ತದೆ, ದಿನಸಿ ಸಾಮಾನುಗಳ ಪೂರೈಕೆ ಕೊರತೆ ಕಂಡುಬಂದಿದ್ದು ಬೆಲೆ ಹೆಚ್ಚಾಗಿದೆ. ಬೇರೆ ರಾಜ್ಯಗಳಿಂದ ಬರುವಂತಹ ಸರಕು ಟ್ರಕುಗಳು, ಬಸ್ಸುಗಳು ಅದರ ಸೇವೆಯನ್ನು ಮಟಕುಗೊಳಿಸಿವೆ. ಸರಕಾರಿ ಬಸ್ಸುಗಳ, ಖಾಸಗಿ ಬಸ್ಸ್ಸುಗಳ, ರೈಲುಗಳ, ವಿಮಾನಗಳ ಸೇವೆಯನ್ನು ಭಾಗಶಃ ಸ್ಥಗಿತಗೊಳಿಸಲಾಗಿದೆ. ಕೇಂದ್ರ ಸರಕಾರದ ಸಿಬ್ಬಂದಿಗಳು ಮನೆಯಿಂದಲೇ ಕೆಲಸ ಮಾಡಲು ಕರೆನೀಡಲಾಗಿದೆ. ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಸಿಬ್ಬಂದಿಗಳು ಮನೆಯಿಂದ ಕೆಲಸ ಮಾಡಲು ಕರೆ ನೀಡಲಾಗಿದೆ. ಸುಮಾರು 30 ಕೋಟಿ ಕಾರ್ಮಿಕ/ ಸಿಬ್ಬಂದಿ ಪಡೆಯನ್ನು (ವರ್ಕ್ ಪೋರ್ಸ್) ಮನೆಗೆ ಸೀಮಿತಗೊಳಿಸಲಾಗಿದೆ. ಈ ಎಲ್ಲಾ ಕಾರಣಗಳಿಂದ ಆರ್ಥಿಕ ವಹಿವಾಟು ಸಂಪೂರ್ಣ ಸ್ತಬ್ದವಾಗಿದೆ.

ಆರ್ಥಿಕ ವಲಯ ಸ್ತಬ್ದತೆಯಿಂದ ಜನರ ಆದಾಯಕ್ಕೆ ಕುತ್ತುಬಂದಿರುತ್ತದೆ. ಬ್ಯಾಂಕುಗಳಿಂದ ಸಾಲಪಡೆದವರು ಸಾಲ ಮರುಪಾವತಿ ಮಾಡಲು ಕಷ್ಟಪಡುತ್ತಿದ್ದಾರೆ. ರಜೆಯಲ್ಲಿ ಹೋಗಿರುವ ಸಿಬ್ಬಂದಿಗಳಿಗೆ/ಕಾರ್ಮಿಕರಿಗೆ ಪುನಃ ಕೆಲಸ ಸಿಗುತ್ತದೆ ಎಂಬ ಭರವಸೆ ಇಲ್ಲವಾಗಿದೆ. ಅನೇಕ ವ್ಯಾಪಾರ ಮುಂಗಟ್ಟುಗಳು, ಕೈಗಾರಿಕೆಗಳು ವ್ಯಾಪಾರವಿಲ್ಲದೆ ಮುಚ್ಚಲ್ಪಟ್ಟಿದೆ. ರಿಕ್ಷಾ, ಟ್ಯಾಕ್ಸಿ ಚಾಲಕ ಮಾಲಕರು ಆತಂಕದಲ್ಲಿದ್ದಾರೆ.

ಇಂತಹ ಅಘೋಷಿತ ತುರ್ತು ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರ ಯಾವ ರೀತಿಯಾಗಿ ಆರ್ಥಿಕ ತೊಂದರೆಗೆ ಒಳಪಟ್ಟ ಜನರಿಗೆ, ಕೆಲಸ ಕಳೆದುಕೊಂಡವರಿಗೆ ಹಾಗೂ ಈ ರೋಗ ಭಾದಿತರಿಗೆ ಆರ್ಥಿಕವಾಗಿ ಸ್ಪಂದನೆ ನೀಡುತ್ತದೆ ಎಂಬ ವಿಚಾರ ಪ್ರಧಾನ ಮಂತ್ರಿಗಳ ಭಾಷಣದಲ್ಲಿ ಹೇಳದೇ ಇರುವುದು ಖೇದಕರ. ಜನರು ಆತ್ಮಹತ್ಯೆಗೆ ಶರಣಾಗುತ್ತಿರುವ ಸನ್ನಿವೇಶವನ್ನು ಕಾಣುತ್ತಿದ್ದೇವೆ.

ಇಂತಹ ಸಂಧರ್ಭದಲ್ಲಿ ಕೇಂದ್ರ ಸರಕಾರ ವ್ಯಾಪಾರವನ್ನು ಕಳೆದುಕೊಂಡವರಿಗೆ, ಕೆಲಸವನ್ನು ಕಳೆದುಕೊಂಡವರಿಗೆ, ರೈತರಿಗೆ ಹಾಗೂ ಆರ್ಥಿಕ ಮುಗ್ಗಟ್ಟನ್ನು ಎದುರಿಸುವ ಎಲ್ಲಾ ಸಾಮಾನ್ಯ ಜನರಿಗೆ ಆರ್ಥಿಕ ಭರವಸೆಯನ್ನು ಪ್ರಧಾನ ಮಂತ್ರಿಗಳು ಭದ್ದತೆಯೊಂದಿಗೆ ದೇಶಕ್ಕೆ ಹೇಳಬೇಕಾಗಿ ಆಗ್ರಹಿಸುತ್ತದೆ. ದೇಶದ ಜನತೆ ಕೇಂದ್ರ ಸರಕಾರದತ್ತ ಆಶಾ ಭಾವನೆಯಿಂದ ನೋಡುತ್ತಿರುವ ವಿಚಾರ ಪ್ರಧಾನಮಂತ್ರಿಗಳು ತಿಳಿದುಕೊಳ್ಳಬೇಕಾಗಿದೆ.

ಕರ್ನಾಟಕ ರಾಜ್ಯಕ್ಕೆ ಕಾನೂನಾತ್ಮಕವಾಗಿ ಕೊಡಬೇಕಾದ ತೆರಿಗೆ ಹಣ 11 ಸಾವಿರ ಕೋಟಿ ರೂಪಾಯಿಯನ್ನು ಕೊಡುವುದು ಮಾತ್ರವಲ್ಲದೇ ಹೆಚ್ಚುವರಿಯಾಗಿ ಸುಮಾರು 30 ಸಾವಿರ ಕೋಟಿ ಹಣವನ್ನು ಪರಿಹಾರ ರೂಪದಲ್ಲಿ ಬಿಡುಗಡೆಮಾಡಬೇಕಾಗಿ ಕಾಂಗ್ರೆಸ್ ಪಕ್ಷ ಆಗ್ರಹಿಸುತ್ತದೆ. ನೋಟು ಅಪನಗದೀಕರಣ ಹಾಗೂ ಜಿ.ಎಸ್.ಟಿ ಅನುಷ್ಠಾನದ ಕೆಟ್ಟ ನೀತಿಯಿಂದ ಈಗಾಗಲೇ ದೇಶದಲ್ಲಿ ಸುಮಾರು 5 ಕೋಟಿ ಜನ ನಿರುದ್ಯೋಗಿಗಳಾಗಿದ್ದು, ಕೋವಿಡ್-19 ರೋಗ ಮುಂಜಾಗ್ರತಾ ಕ್ರಮದಿಂದ ಇನ್ನೂ ಎಷ್ಟೋ ಕೋಟಿ ಜನ ನಿರುದ್ಯೋಗಿಗಳಾಗುವ ಆತಂಕದಲ್ಲಿದ್ದು ಅದಕ್ಕೆ ಸ್ಪಂದಿಸುವ ಕೆಲಸ ಮಾಡಲಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version