Home Mangalorean News Kannada News ಜನನುಡಿ ಸಮಾರೋಪ : ಬ್ರಾಹ್ಮಣ ಧರ್ಮಕ್ಕೂ ಹಿಂದೂ ಧರ್ಮಕ್ಕೂ ಸಂಬಂಧ ಇಲ್ಲ

ಜನನುಡಿ ಸಮಾರೋಪ : ಬ್ರಾಹ್ಮಣ ಧರ್ಮಕ್ಕೂ ಹಿಂದೂ ಧರ್ಮಕ್ಕೂ ಸಂಬಂಧ ಇಲ್ಲ

Spread the love

ಜನನುಡಿ ಸಮಾರೋಪ : ಬ್ರಾಹ್ಮಣ ಧರ್ಮಕ್ಕೂ ಹಿಂದೂ ಧರ್ಮಕ್ಕೂ ಸಂಬಂಧ ಇಲ್ಲ

ಮಂಗಳೂರು: ಮಂಗಳೂರಿನ ಶಾಂತಿಕಿರಣದಲ್ಲಿ ನಡೆಯುತ್ತಿರುವ ಜನನುಡಿ ಸಾಹಿತ್ಯ ಸಮಾವೇಶ ಮುಕ್ತಾಯಗೊಂಡಿತು. ದಿನೇಶ್ ಅಮೀನ್ ಮಟ್ಟು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಡಾ.ಅರವಿಂದ ಮಾಲಗತ್ತಿ ಸಮಾರೋಪ ಭಾಷಣ ಮಾಡಿದರು.

jananudi-validictory

ಸಮಾರೋಪ ಭಾಷಣ ಮಾಡುತ್ತಾ ಅರವಿಂದ ಮಾಲಗತ್ತಿಯವರು ಬ್ರಾಹ್ಮಣ ಧರ್ಮವೇ ಬೇರೆ. ಅದು ಹಿಂದೂ ಧರ್ಮವಲ್ಲ. ಬ್ರಾಹ್ಮಣ ಧರ್ಮಕ್ಕೂ ಹಿಂದೂ ಧರ್ಮಕ್ಕೂ ಸಂಬಂಧ ಇಲ್ಲ. ವರ್ಣಸಂಕರ ಆಹಾರ ನಿರಾಕರಣೆ ಮೊದಲಾದವನ್ನು ಬಹುಸಂಖ್ಯಾತ ಹಿಂದೂಗಳು ಒಪ್ಪಿಕೊಳ್ತಾರೆ. ಆದರೆ ಬ್ರಾಹ್ಮಣರು ಒಪ್ಪಿಕೊಳ್ಳೋದಿಲ್ಲ. ಅವರು ತಮ್ಮದೇ  ನೀತಿನಿಯಮಗಳನ್ನು ಮಾಡಿಕೊಂಡಿದ್ದಾರೆ ಎಂದ ನಾನು ಭಗವದ್ಗೀತೆಯ ಬಗ್ಗೆ ಮಾತನಾಡಿದಾಗ ಅವರು ನನಗೆ ಹಿಂದೂ ಧರ್ಮವನ್ನು ಬಿಟ್ಟು ಹೋಗಲು ಒತ್ತಾಯಿಸಿದರು. ನನಗೂ ಅವರನ್ನು ಕುರಿತು ಅದೇ ಪ್ರಶ್ನೆ ಕೇಳಬೇಕು ಅನ್ನಿಸುತ್ತದೆ ಎಂದರು. ಪರಂಪರೆಯಲ್ಲಿ ಮೂರು ಮಾರ್ಗಗಳಿವೆ. ಒಂದು, ಧರ್ಮದ ತಾರತಮ್ಯಗಳ ಬಗ್ಗೆ ರೋಸಿಹೋಗಿ ತಮ್ಮದೇ ಧರ್ಮ ಕಟ್ಟಿಕೊಳ್ಳುವುದು, ಎರಡನೆಯದು, ಧರ್ಮದ ಒಳಗಿದ್ದುಕೊಂಡೇ ವಿರೋಧಿಸುತ್ತ ಇದು ಸರಿಯಲ್ಲ ಎಂದು ತಿದ್ದುವ ಪ್ರಕ್ರಿಯೆ. ಮೂರನೆಯದು, ಹೀಗೆ ಹೊರಕಳಿಸುವ ತಂತ್ರಗಾರಿಕೆ. ನಾವು ಕೂಡ ಇದನ್ನು ತಂತ್ರವಾಗಿ ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.

ಐಕ್ಯತೆ ಸಮಾನ ಮನಸ್ಕರಲ್ಲಿ ಮಾತ್ರ ಒಡಮೂಡುವಂಥದ್ದು ಎಂದ ಅವರು ಅದಕ್ಕೆ ಶರಣ ಚಳವಳಿ ಮೂಡಿಬಂದ ಉದಾಹರಣೆಯನ್ನು ನೀಡಿದರು. ಅಂತರ್ಜಾತಿ ವಿವಾಹಗಳಿಂದ ಜಾತಿ ವಿನಾಶ ಸಾಧ್ಯ ಎಂದ ಅವರು,  ಗಾಂಧಿ ಹೇಳಿದ ಲೋಟಾ – ರೋಟಿ – ಬೇಟಿ ಚಿಂತನೆಗಿಂತ ಅಂಬೇಡ್ಕರ್ ಸೂಚಿಸಿದ ಬೇಟಿ – ಅಂದರೆ ಹೆಣ್ಣುಮಕ್ಕಳನ್ನು ಅಂತರ್ಜಾತೀಯ ವಿವಾಹಕ್ಕೆ ಪ್ರೋತ್ಸಾಹಿಸುವುದು ಹೆಚ್ಚು ಪರಿಣಾಮಕಾರಿ ಎಂದು ಅಭಿಪ್ರಾಯಪಟ್ಟರು. ಅಂತರ್ಜಾತೀಯ ವಿವಾಹಕ್ಕೆ ಲೋಹಿಯಾ ನೀಡಿದ ಸಲಹೆಯನ್ನು ಉಲ್ಲೇಖಿಸುತ್ತಾ, ಸರ್ಕಾರೆ ಹುದ್ದೆಗಳನ್ನು ಅಂತರ್ಜಾತಿ ವಿವಾಹಿತರಿಗೆ ಮೀಸಲಿಟ್ಟರೆ ಜಾತಿರಹಿತ ಸಮಾಜ ಸೃಷ್ಟಿಗೆ ಸುಲಭವಾಗುತ್ತದೆ ಎಂದರು.

ಪ್ರಗತಿಪರರ ಚಿಂತನೆಗಳು ಒನ್ ವೇ ಟ್ರಾಫಿಕ್ ಆಗಿವೆಯಾ ಅನ್ನುವ ಅನುಮಾನ ವ್ಯಕ್ತಪಡಿಸಿದ ಮಾಲಗತ್ತಿ, ನಮ್ಮನಮ್ಮ ಒಳಗಿನ ಅಹಮಿಕೆಯನ್ನು ಮೀರಿ ಜನರೊಟ್ಟಿಗೆ ಬೆಳೆಯುವ ಪ್ರಕ್ರಿಯೆ ನಮ್ಮಲ್ಲಿ ಇಲ್ಲದುದ್ದರಿಂದಲೇ ಒಮಟಿಯಾಗಿದ್ದೇವೆ. ಈ ಒಂಟಿತನ ಹೋಗಲಾಡಿಸಬೇಕೆಂದರೆ ಜನತೆಯ ಒಳಹೊಕ್ಕು ನೋಡುವ ಅಗತ್ಯವಿದೆ ಎಂದು ಸಿದ್ಧಾಂತದ ಆತ್ಮವಿಮರ್ಶೆಯ ಮಾತುಗಳನ್ನಾಡಿದರು.

ಕೇಂದ್ರ ಸರ್ಕಾರದ ಡಿಮಾನೆಟೈಸೇಷನ್ ಅನ್ನು ಸರ್ಜಿಕಲ್ ದಾಳಿಗೆ ಹೋಲಿಸಿ ಮಾತನಾಡುವವರನ್ನು ಪ್ರಶ್ನಿಸುತ್ತಾ, ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಜಿಕಲ್ ಸ್ಟ್ರೈಕ್ ಮಾಡುವುದೇ ಆದರೆ ಜಾತಿ ತಾರತಮ್ಯದ ಮೇಲೆ ಮಾಡಲಿ ಎಂದು ಸವಾಲು ಹಾಕಿದರು.

ಹಿಂದೂಗಳು ವಿದೇಶಕ್ಕೆ ಹೋಗಿ ನೆಲೆಸಿದರೆ ಅಲ್ಲಿಯೂ ಜಾತಿವ್ಯವಸ್ಥೆಯನ್ನು ಹುಟ್ಟುಹಾಕುತ್ತಾರೆ ಎಂದ ಅವರು, ಭಾರತ ತಲೆ ತಗ್ಗಿಸುವಂತೆ ಆಗಿರುವುದು ಜಾತೀಯತೆ, ಮೇಲು – ಕೀಳು, ಸಸ್ಯಾಹಾ – ಮಾಂಸಾಹಾರ ಮೊದಲಾದ ಕಾರಣಗಳಿಂದಲೇ ಎಂದು ಬೇಸರ ವ್ಯಕ್ತಪಡಿಸಿದರು.

ಅಧ್ಯಕ್ಷೀಯ ಭಾಷಣ ಮಾಡಿದ ದಿನೇಶ್ ಅಮೀನ್ ಮಟ್ಟು, ಸಮಾನಮನಸ್ಕರು ಒಂದೆಡೆ ಕೂತು, ಕಲೆತು, ಜಗಳ ಮಾಡಿಕೊಂಡು, ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡು ಅಲ್ಲಿ ಸಿಗುವ ಅರಿವನ್ನು ಕಟ್ಟಿಕೊಂಡು ಹೊರಡುವುದೇ ಜನನುಡಿಯ ಉದ್ದೇಶ ಎಂದು ವಿವರಿಸಿದರು. ಚಲೋ ಉಡುಪಿ ಮತ್ತು ಚಲೋ ಮಡಿಕೇರಿ ಸಮಾವೇಶಗಳು ಜನನುಡಿಯ ವಿಸ್ತರಣೆಗಳೇ ಆಗಿವೆ ಎಂದು ಹೇಳಿದರು.

ಈ ಬಾರಿಯ ಜನನುಡಿಯನ್ನು ಅಂಬೇಡ್ಕರರ 125ನೇ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಸಮತೆ ಎಂಬುದು ಅರಿವು ಎಂಬ ಆಶಯದೊಡನೆ ಹಮ್ಮಿಕೊಳ್ಳಲಾಗಿದೆ. ಅಂಬೇಡ್ಕರರ ಚಿಂತನೆಗೆ ವಿರುದ್ಧವಾಗಿ ನಡೆಯುವವರು ಅಂಬೇಡ್ಕರರ ಜನ್ಮದಿನಾಚರಣೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಮಾಡುವುದಾಗಿ ಹೇಳಿಕೊಳ್ತಾರೆ. ಇದಕ್ಕೆ ಕಾರಣ ವೋಟ್ ಬ್ಯಾಂಕ್ ರಾಜಕಾರಣವೇ ಹೊರತು ಅಂಬೇಡ್ಕರರ ಮೇಲಿನ ಗೌರವವಲ್ಲ. ಹಾಗೆ ಅವರು ನಿಜಕ್ಕೂ ಅಂಬೇಡ್ಕರರ ಆಶಯಗಳಿಗೆ ಬೆಲೆ ಕೊಡುವುದೇ ಆದರೆ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ತರಲಿ ಎಂದು ಸವಾಲೆಸೆದರು.

ಪ್ರಧಾನ ಮಂತ್ರಿಯ ಡಿಮಾನೆಟೈಸೇಷನ್ ಅನ್ನು ಉಲ್ಲೇಖಿಸುತ್ತಾ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗಗಳ ಮೇಲೆ ಗೌರವ ಇಲ್ಲದ ವ್ಯಕ್ತಿ ಸರ್ವಾಧಿಕಾರಿ ಎನ್ನಿಸಿಕೊಳ್ಳುತ್ತಾನೆ ಎಂದ ಅವರು, ಅರಸನ ಮೈಮೇಲಿನ ಬಟ್ಟೆ ಒಂದೊಂದಾಗೇ ಕಳಚಿ ಬೀಳ್ತಾ ಇದೆ. ಅಂತರಂಗದ ಕುರೂಪ ಬಚ್ಚಿಡೋಕೆ ಸಾಧ್ಯವಿಲ್ಲ. ಪ್ರಧಾನಿ ಸೂಟುಬೂಟು ತೊಟ್ಟು 56 ಇಂಚಿನ ಎದೆ ತೋರಿಸಿದರೂ ಅಂತರಂಗದ ಕುರೂಪ ಬಚ್ಚಿಡಲು ಸಾಧ್ಯವಿಲ್ಲ. ನಮಗೆ  56 ಬೇಕಾಗಿಲ್ಲ ಬಡವ ದಲಿತ ಶೋಷಿತ ರೈತ ಕಾರ್ಮಿಕರಿಗೆ ಮಿಡಿಯುವ ಹೃದಯ ಬೇಕಾಗಿದೆ ಎಂದರು.

ಬಲಪಂಥೀಯರು ದೇವರು. ಧರ್ಮ ಮತ್ತು ದೇಶವೆಂಬ ಮೂರು ಆಯುಧಗಳನ್ನಿಟ್ಟುಕೊಂಡು ಪರೋಕ್ಷ ಯುದ್ಧ ನಡೆಸುತ್ತಿದ್ದಾರೆ. ನಾವು ಈ ಮೂರು ಆಯುಧಗಳ ಬಗ್ಗೆ ಸ್ಪಷ್ಟತೆ ತಂದುಕೊಳ್ಳದೆ ಇದ್ದರೆ ಇವನ್ನು ಎದುರಿಸಲು ಸಾಧ್ಯವಿಲ್ಲ. ಧರ್ಮವನ್ನು ಬಿಟ್ಟು ಜಾತ್ಯತೀತತೆ ಕಟ್ಟಲಿಕ್ಕೆ ಸಾಧ್ಯವಿಲ್ಲ ಎನ್ನುವುದನ್ನು ನಾವು ಅರಿತುಕೊಳ್ಳಬೇಕು ಎಂದು ಅವರು ಹೇಳಿದರು.

ದೇಶಪ್ರೇಮಿ ಅನ್ನಿಸಿಕೊಳ್ಳೋದಕ್ಕೆ ಬ್ರಿಗೇಡ್ ಗಳನ್ನು ಕಟ್ಟಬೇಕಿಲ್ಲ. ನಮ್ಮನಮ್ಮ ಕೆಲಸಗಳನ್ನು ಪ್ರಾಮಾಣಿಕತೆಯಿಂದ ಮಾಡಿದರೆ ಅದೇ ದೇಶಪ್ರೇಮ ಎಂದ ಅವರು, ಈ ನಿಟ್ಟಿನಲ್ಲಿ ಸ್ಪಷ್ಟತೆ ಮತ್ತು ಅರಿವು ಪಡೆಯಲು ಅಂಬೇಡ್ಕರ್, ಗಾಂಧಿ, ಲೋಹಿಯಾ, ಮಾರ್ಕ್ಸ್ ಮೊದಲಾದವರನ್ನು ಓದಬೇಕು ಎಂದು ಹೇಳಿದರು.

ಬಲಪಂಥೀಯರು ಈ ಜನ್ಮದಲ್ಲಿ ರಾಮಮಂದಿರ ಕಟ್ಟಲಿಕ್ಕೆ ಸಾಧ್ಯವಿಲ್ಲ. ಸಮಾನ ನಾಗರಿಕ ಸಂಹಿತೆಯನ್ನೂ ತರುವುದಿಲ್ಲ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಮಾಡೋಕೂ ಸಾಧ್ಯವಿಲ್ಲ. – ಇದನ್ನೆಲ್ಲ ಅರಿತುಕೊಂಡ ಮೇಲೆ ಅವರು ಹೊಸತನ್ನು ಹುಡುಕಿಕೊಂಡಿದ್ದಾರೆ. ಅದು ದೇಶಪ್ರೇಮ. ರಾಷ್ಟ್ರಗೀತೆ ಹೆಸರಲ್ಲಿ, ಮತ್ತೊಂದರ ಹೆಸರಲ್ಲಿ ಅವರು ಸಾಂಸ್ಕೃತಿಕ ರಾಜಕಾರಣ ಮಾಡುತ್ತಿದ್ದಾರೆ. ಬಸವಣ್ಣ, ಗಾಂಧಿ, ವಿವೇಕಾನಂದ, ಭಗತ್ ಸಿಂಗ್ ಮೊದಲಾದವರನ್ನು ಆಪೋಶನ ತೆಗೆದುಕೊಳ್ಳಲು ಯತ್ನಿಸ್ತಿದ್ದಾರೆ. ಅದಕ್ಕೆ ಅವಕಾಶ ಕೊಡಬಾರದು ಎಂದು ಅವರು ಹೇಳಿದರು.

ಮಾತು ಮುಗಿಸುವ ಮುನ್ನ ದಿನೇಶ್ ಅಮೀನ್ ಮಟ್ಟು ಅಂತರ್ಜಾತೀಯ ವಿವಾಹಗಳು ಜಾತಿವಿನಾಶಕ್ಕೆ ಸಹಾಯಕ. ಅದಕ್ಕೆ ಹೆಚ್ಚು ಪ್ರೋತ್ಸಾಹ ಕೊಡಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.

ವೇದಿಕೆಯ ಮೇಲೆ ಉಪಸ್ಥಿತರಿದ್ದ ವಿಲ್ಫ್ರೆಡ್ ಡಿ’ಸೋಜ ಮಾತನಾಡಿ ಕೋಮುವಾದ ಇಂದು ಕರಾವಳಿಯನ್ನು ದಾಟಿ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮೊದಲಾದ ಕಡೆಗೂ ವಿಸ್ತರಿಸುತ್ತಿದೆ. ಇದರ ವಿರುದ್ಧ ನಾವು ಒಗ್ಗಟ್ಟಿನ ಹೋರಾಟ ನಡೆಸಬೇಕಿದೆ. ನಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪರ್ಯಾಯ ರಾಜಕೀಯ ಶಕ್ತಿಯನ್ನು ರೂಪಿಸಬೇಕಿದೆ ಎಂದರು.

ಬಾಲರಾಜ್ ಕೋಡಿಕಲ್ ಮಾತನಾಡಿ ನಮ್ಮ ದನಿಯನ್ನು ತಗ್ಗಿಸುವ ಹುನ್ನಾರ ನಡೆಯುತ್ತಿದೆ. ಸಮುದಾಯದ ಒಬ್ಬ ನಾಯಕನನ್ನು ವೇದಿಕೆಯ ಮೇಲೆ ಕೂರಿಸದ ಮಾತ್ರಕ್ಕೆ ಸಮಾನತೆ ಸಿಗುವುದಿಲ್ಲ ಎಂದು ಅಭಿಪ್ರಾಯಪಟ್ಟರು. ಹಾಗೂ ದಕ್ಷಿಣ ಕನ್ನಡದ ಮೂಲನಿವಾಸಿಗಳಾದ ಕೊರಗ ಸಮುದಾಯ ವೈಚಾರಿಕತೆಯನ್ನು ದಕ್ಕಿಸಿಕೊಂಡು ಮುನ್ನಡೆಯಬೇಕೆಂಬ ಆಶಯವನ್ನೂ ಅವರು ವ್ಯಕ್ತಪಡಿಸಿದರು.

ಜ್ಯೋತಿ ಚೇಳ್ಯಾರು ಅವರು ಮಾತನಾಡಿ, ಜನದ ಸಮಸ್ಯೆ ಮತ್ತು ನುಡಿಯ ಸಮಸ್ಯೆಯನ್ನ ಅರ್ಥಮಾಡಿಕೊಂಡಾಗ ಮಾತ್ರ ಸಮತೆ ಸಾಧ್ಯ. ನುಡಿ ಆಲಯವನ್ನು ದಾಟಿ ಬಯಲಿನ ಬೆಳಕಿನ ಬೀಜಗಳಾಗಬೇಕಾದ ಅಗತ್ಯವಿದೆ ಎಂದು ನುಡಿದರು.

ಅನಂತ ನಾಯಕ್ ಸಮಾರೋಪ ಕಾರ್ಯಕ್ರಮದ ನಿರ್ವಹಣೆ ಮಾಡಿದರು.


Spread the love

Exit mobile version