ಜನಮನಸೂರೆಗೊಂಡ ಮಿಥುನ್ ರೈ ಸಾರಥ್ಯದ ‘ಪಿಲಿನಲಿಕೆ – 4’
ಮಂಗಳೂರು: ಮಂಗಳೂರಿನ ಮಂಗಳಾ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಯಲ್ಲಿ ಶುಕ್ರವಾರ ಎಲ್ಲಿ ನೋಡಿದರೂ ಟ್ರಾಫಿಕ್ ಜಾಮ್. ವಾಹನಗಳ ಸಾಲು ಕ್ಷಣಕ್ಷಣಕ್ಕೂ ಉದ್ದವಾಗುತ್ತಲೇ ಇತ್ತು. ಕ್ರಿಡಾಂಗಣ ಸಮೀಪದ ವಾಲಿಬಾಲ್ ಮೈದಾನದಿಂದ ಡಂಗ್ ಟಕ್… ಡಂಗ್ ಟಕ್… ಸದ್ದು ಕೇಳುತ್ತಿದ್ದಂತೆ ಎಲ್ಲರೂ ಅತ್ತ ಹೆಜ್ಜೆ ಹಾಕುತ್ತಿದ್ದರು. ಶಿಳ್ಳೆ, ಕೇಕೆ, ಚಪ್ಪಾಳೆಗಳು ಬ್ಯಾಂಡ್, ವಾದ್ಯಗಳ ಸದ್ದನ್ನು ಮೀರಿಸುತಿತ್ತು. ಇದು ಶುಕ್ರವಾರ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಸಾರಥ್ಯದಲ್ಲಿ ನಮ್ಮ ಟಿವಿ ಸಹಭಾಗಿತ್ವದಲ್ಲಿ ನಡೆದ ‘ಪಿಲಿ ನಲಿಕೆ-4’ ಸ್ಪರ್ಧೆಯ ಒಂದು ನೋಟ.
ಬೆಳಗ್ಗೆ ಉಡುಪಿ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ, ದಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಮಂಗಳೂರು ಶಾಸಕ ಜೆ.ಆರ್.ಲೋಬೊ, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಡಾ. ಶಿವಶರಣ್ ಶೆಟ್ಟಿ, ಡಿಸಿಪಿ ಕಾನೂನು ಮತ್ತು ಸುವ್ಯವಸ್ಥೆಯ ಹನುಮಂತರಾಯ, ಸಂತೋಷ್ ಶೆಟ್ಟಿ, ವೆಂಕಟೇಶ್ ಭಟ್, ನವೀನ್ ಡಿ ಪಡೀಲ್ ಹಾಜರಾತಿಯಲ್ಲಿ ಕಾರ್ಯಕ್ರಮ ಉದ್ಘಾಟನೆಗೊಂಡಿತು.
ಸ್ಪರ್ಧೆಯಲ್ಲಿ 10 ತಂಡಗಳು ಭಾಗವಹಿಸಿದ್ದವು. ಕುಣಿತ, ಬಣ್ಣಗಾರಿಕೆ, ಸಾಹಸ ಪ್ರದರ್ಶನ ಸೇರಿದಂತೆ ಎಲ್ಲ ಪ್ರದರ್ಶನಗಳಲ್ಲೂ ಒಂದಕ್ಕೊಂದು ಮಿಗಿಲೆಂಬಂತೆ ತಂಡಗಳು ಪ್ರದರ್ಶನ ನೀಡಿ, ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡವು. ಮರಿಹುಲಿಯಿಂದ ಹಿಡಿದು ಹಿರಿಯ ಹುಲಿಗಳು ಸ್ಪರ್ಧೆಯಲ್ಲಿ ಗಮನಸೆಳೆದವು. ಸ್ಪರ್ಧೆಯುದ್ದಕ್ಕೂ ಪೌಲ ಕುಣಿತ, ಜಂಡ ಮೆರವಣಿಗೆ, ಮುಡಿ ಎಸೆತ, ಲಾಟೆ ಮುಡಿ ಕುಣಿತ ಗಮನ ಸೆಳೆದವು.