Home Mangalorean News Kannada News ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದವರನ್ನು ಸಮಾಜ ಬಹಿಷ್ಕರಿಸಬೇಕು – ಮುನಿಯಾಲು ಉದಯ್ ಕುಮಾರ್ ಶೆಟ್ಟಿ

ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದವರನ್ನು ಸಮಾಜ ಬಹಿಷ್ಕರಿಸಬೇಕು – ಮುನಿಯಾಲು ಉದಯ್ ಕುಮಾರ್ ಶೆಟ್ಟಿ

Spread the love

ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದವರನ್ನು ಸಮಾಜ ಬಹಿಷ್ಕರಿಸಬೇಕು – ಮುನಿಯಾಲು ಉದಯ್ ಕುಮಾರ್ ಶೆಟ್ಟಿ

ಉಡುಪಿ: ಕಾರ್ಕಳ ತಾಲೂಕಿನ ಬೈಲೂರು ಉಮಿಕಲ್ ಬೆಟ್ಟದ ಮೇಲೆ ಪರಶುರಾಮನ ಕಂಚಿನ ಪ್ರತಿಮೆ ನಿರ್ಮಾ ಣದ ಹೆಸರಿನಲ್ಲಿ ಕೋಟ್ಯಾಂತರ ರೂ.ಗಳ ಭ್ರಷ್ಟಾಚಾರ ನಡೆಸಿದ್ದು ಮಾತ್ರವಲ್ಲದೆ, ಇದು ಬಹಿರಂಗಗೊಂಡ ಬಳಿಕ ದಿನಕ್ಕೊಂದು ಸುಳ್ಳು ಹೇಳುತ್ತಾ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿರುವ ಧರ್ಮವಿರೋಧಿ ಜನಪ್ರತಿನಿಧಿಯನ್ನು ಸಮಾಜ ಬಹಿಷ್ಕರಿಸದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಖಂಡಿತ ಎಂದು ಕಾರ್ಕಳದ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಹೇಳಿದ್ದಾರೆ.

ಉಡುಪಿಯಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಶುರಾಮ ಥೀಮ್ ಪಾರ್ಕ್ ನಿರ್ಮಾಣದ ಹೆಸರಿನಲ್ಲಿ ಸಾರ್ವಜನಿಕರ ಹಣ ಲೂಟಿ ಮಾಡಲಾಗಿದೆ ಎಂದು ನ್ಯಾಯಪೀಠವೂ ಈ ಸಂಬಂಧ ನಡೆದಿರುವ ವಿಚಾರಣೆ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಮುನಿಯಾಲು ಹೇಳಿದರು.

ಅಲ್ಲದೆ ರಾತೋರಾತ್ರಿ ಕದ್ದು ಸಾಗಿಸಿರುವ ಪರಶುರಾಮನ ನಕಲಿ ಮೂರ್ತಿಯ ಮೇಲ್ಬಾಗ ಇದೀಗ ನಾಪತ್ತೆಯಾಗಿದೆ. ತಕ್ಷಣವೇ ಪೊಲೀಸರು ನಾಪತ್ತೆಯಾಗಿರುವ ಮೇಲ್ಬಾಗವನ್ನು ಪತ್ತೆ ಹಚ್ಚಿ ಜನರ ಮುಂದೆ ಸತ್ಯ ಸಂಗತಿಯನ್ನು ತಿಳಿಸ ಬೇಕು. ಮೂರ್ತಿಯ ಮೇಲ್ಬಾಗ ನಮ್ಮಲ್ಲಿಗೆ ತಂದಿಲ್ಲ ಎಂದು ಶಿಲ್ಪಿ ಕೃಷ್ಣ ನಾಯಕ್ ಈಗಾಗಲೇ ಹೇಳಿದ್ದಾರೆ. ಹಾಗಿದ್ದರೆ ಅದು ಕಾರ್ಕಳದಲ್ಲಿ ಎಲ್ಲೋ ಅಥವಾ ನಿರ್ಮಿತಿ ಕೇಂದ್ರದ ವಶದಲ್ಲಿರಬೇಕು. ಅದು ಎಲ್ಲಿದೆ ಎಂಬುದು ಮೊದಲು ತನಿಖೆ ಯಾಗಬೇಕು ಎಂದು ಅವರು ಆಗ್ರಹಿಸಿದರು.

ಪರಶುರಾಮ ಮೂರ್ತಿಯ ಮೇಲ್ಬಾಗ ನಕಲಿ ಎಂದು ಗೊತ್ತಿದ್ದರೂ ಅದು ಎಲ್ಲಿಯೂ ಜನರಿಗೆ ಕಾಣಿಸದಂತೆ ರಾತ್ರಿ ಕದ್ದು ಸಾಗಿಸಿ ಜನರಿಗೆ ನಿರಂತರವಾಗಿ ಸುಳ್ಳು ಹೇಳುತ್ತಾ, ತಾನು ಮಾಡಿದ್ದೆ ಸರಿ ಎಂದು ಅಪಪ್ರಚಾರ ಮಾಡುತ್ತಿದ್ದ ಕಾರ್ಕಳ ಶಾಸಕರ ನಿಜ ಬಣ್ಣ ಈಗ ಬಯಲಾಗಿದೆ. ಇಷ್ಟಿದ್ದರೂ ಕೂಡ ಅಸಲಿ ಮೂರ್ತಿ ಎಂದು ಕೋರ್ಟಿಗೆ ಮತ್ತೆ ದಾಖಲೆಗಳನ್ನು ತಯಾರು ಮಾಡುತ್ತಿರುವ ಶಾಸಕರ ವರ್ತನೆ ನೋಡಿದರೆ ಅಚ್ಚರಿ ಎನಿಸುತ್ತಿದೆ ಎಂದವರು ನುಡಿದರು.

ಕೇವಲ ರಾಜಕೀಯ ಲಾಭಗೋಸ್ಕರ ಪರಶುರಾಮ ಥೀಮ್ ಪಾರ್ಕ್ನ್ನು ಬಳಸಿಕೊಂಡು ಜನರ ಭಾವನೆಗಳ ಜೊತೆ ಚೆಲ್ಲಾಟ ವಾಡುವವರನ್ನು ಸಮಾಜ ಬಹಿಷ್ಕರಿಸಬೇಕು. ಮತ್ತು 14 ಕೋಟಿ ರೂ. ಮೊತ್ತದ ಯೋಜನೆಯಲ್ಲಿ ಈಗಾಗಲೇ ಮಂಜೂರಾತಿಯಾಗಿರುವ 12 ಕೋಟಿ ರೂ.ಗಳಲ್ಲಿ ಆಗಿರುವ ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಮುನಿಯಾಲು ಉದಯಕುಮಾರ್ ಶೆಟ್ಟಿ ಒತ್ತಾಯಿಸಿದರು.

ಕಂಚಿನ ಪ್ರತಿಮೆ ಎಂದು ಹೇಳಿ ಹಿತ್ತಾಳೆ ಸೇರಿ ವಿವಿಧ ಲೋಹಗಳ ಮಿಶ್ರಣದೊಂದಿಗೆ ಫೈಬರ್ ಪರಶು ರಾಮ ಮೂರ್ತಿಯನ್ನು ತಯಾರು ಮಾಡಿದ ಶಿಲ್ಪಿ ಕೃಷ್ಣ ನಾಯ್ಕ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಯಾವುದೇ ರೀತಿಯ ತನಿಖೆ ನಡೆಯದಂತೆ ನ್ಯಾಯಾಲಯದ ಮೆಟ್ಟಲೇರಿದ್ದು, ಕೂಡಲೇ ಅವರಿಗೆ ಸಂದಾಯವಾಗಿರುವ 1.25 ಕೋಟಿ ರೂ.ಗಳನ್ನು ವಾಪಾಸು ಪಡೆದು, ಸಮರ್ಥ, ಅರ್ಹ ಶಿಲ್ಪಿಗೆ ಪರಶುರಾಮ ಮೂರ್ತಿ ನಿರ್ಮಾಣದ ಗುತ್ತಿಗೆ ನೀಡಬೇಕು ಎಂದೂ ಮುನಿಯಾಗಲು ಸರಕಾರವನ್ನು ಒತ್ತಾಯಿಸಿದರು.

ಶಿಲ್ಪಿಗೆ ಪರಶುರಾಮ ಮೂರ್ತಿ ತಯಾರಿಸಲು ಬೇಕಾದ ಪರಿಣಿತಿ ಇಲ್ಲ ಎಂಬುದು ಅವರು ನಿರ್ಮಿಸಿರುವ ಮೂರ್ತಿಯ ಬಗ್ಗೆ ನೀಡಿದ ಹೇಳಿಕೆಯಿಂದ ಖಚಿತವಾಗುತ್ತಿದೆ. ಅವರು ಕೂಡ ದಿನಕೊಂದು ಕಥೆಗಳನ್ನ ಹೇಳುತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಗುಣಮಟ್ಟದ ಪ್ರತಿಮೆ ನಿರ್ಮಾಣವಾಗ ಬೇಕಾದರೆ ಅದರ ಗುತ್ತಿಗೆಯನ್ನು ಯಾವುದೇ ಕಾರಣಕ್ಕೂ ಕೃಷ್ಣ ನಾಯಕ್ಗೆ ನೀಡದೆ ಬೇರೆ ಪರಿಣಿತ ತಂಡಕ್ಕೆ ಅವಕಾಶ ಕಲ್ಪಿಸಬೇಕು ಎಂದರು.

ನಿರಂತರ ಸುಳ್ಳು ಹೇಳಿ ಜನರನ್ನ ಮರಳು ಮಾಡುವ ಶಾಸಕರೊಬ್ಬರಿದ್ದರೆ ಅದು ಕಾರ್ಕಳದಲ್ಲಿ ಮಾತ್ರ. ರಾಜ್ಯ ಹಾಗೂ ಕೇಂದ್ರದಲ್ಲಿ ಕೂಡ ಇಂತಹ ಶಾಸಕ ಸಿಗಲಿಕ್ಕಿಲ್ಲ. ಇವರಿಗೆ ಪ್ರಚಂಡ ಸುಳ್ಳುಗಾರ ಎಂದು ಬಿರುದು ನೀಡಿದರೂ ತಪ್ಪಾಗಲಾ ರದು. ಇದರೊಂದಿಗೆ ತಪ್ಪು ಹೇಳಿಕೆಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುವ ಚಾಳಿಯೂ ಅವರಿಗಿದೆ ಎಂದು ಮುನಿಯಾಲು ಆರೋಪಿಸಿದರು.

ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕೆಂದು ಜನರನ್ನು ಮರಳು ಮಾಡುತ್ತಾ ತನ್ನ ಅಭಿವೃದ್ಧಿ ಮಾಡಿಕೊಂಡ ಕಾರ್ಕಳ ಶಾಸಕ ಈಗ ಪರಶುರಾಮ ಥೀಮ್ ಪಾರ್ಕ್ ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಗಾಲು ಎಂದು ಸುಳ್ಳು ಆರೋಪ ಮಾಡಿ ತನ್ನ ಭ್ರಷ್ಟಾಚಾರವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ ಎಂದವರು ದೂರಿದರು.

ಪ್ರವಾಸೋದ್ಯಮಕ್ಕೆ ಕಾಂಗ್ರೆಸ್ ಕೊಡುಗೆ ಅಪಾರ. ಕಾರ್ಕಳ ಮಸ್ತಕಾಭಿಷೇಕ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ಪ್ರವಾಸೋದ್ಯಮಕ್ಕೆ ನೀಡಿ ಕಾರ್ಕಳ ಅಭಿವೃದ್ಧಿ ಪಡಿಸಿದ್ದು ಕಾಂಗ್ರೆಸ್. ಆದರೆ ಕಾರ್ಕಳ ಶಾಸಕ ಎಣ್ಣೆಹೊಳೆ, ಕಾರ್ಕಳ ಉತ್ಸವ ಮುಂತಾದ ಕಾರ್ಯಕ್ರಮದ ಮೂಲಕ ಹಣ ಮಾಡಿದರೆ ವಿನಹ ಕಾರ್ಕಳದಲ್ಲಿ ಪ್ರವಾಸೋದ್ಯಮಕ್ಕೆ ಏನೂ ಕೊಡುಗೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಡುಪಿ ನಗರಸಭಾ ಸದಸ್ಯ ರಮೇಶ್ ಕಾಂಚನ್, ಕಾಂಗ್ರೆಸ್ ಮುಖಂಡರಾದ ಕೃಷ್ಣಮೂರ್ತಿ ಆಚಾರ್ಯ, ವಿನಯಕುಮಾರ್ ಕಬ್ಯಾಡಿ, ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೇಶ್ ಇನ್ನ ಉಪಸ್ಥಿತ ರಿದ್ದರು.


Spread the love

Exit mobile version