Home Mangalorean News Kannada News ಜನವರಿ 8ರಂದು ದ.ಕ ಜಿಲ್ಲೆಯಾದ್ಯಂತ ಬಸ್ ಮುಷ್ಕರ

ಜನವರಿ 8ರಂದು ದ.ಕ ಜಿಲ್ಲೆಯಾದ್ಯಂತ ಬಸ್ ಮುಷ್ಕರ

Spread the love

ಜನವರಿ 8ರಂದು ದ.ಕ ಜಿಲ್ಲೆಯಾದ್ಯಂತ ಬಸ್ ಮುಷ್ಕರ

ಮಂಗಳೂರು: ಕೇಂದ್ರ ಕಾರ್ಮಿಕ ಸಂಘಟನೆಗಳಾದ CITU, AITUC, HMS  ಮತ್ತು INTUC ಹಾಗೂ ಇತರ ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ಸಂಯೋಜಿತಗೊಂಡಿರುವ ಸಾರಿಗೆ ನೌಕರರ ಅಖಿಲ ಭಾರತ ಫೆಡರೇಶನ್‌ಗಳು 2019ರ ಜನವರಿ 8 ಮತ್ತು 9ರಂದು ಅಖಿಲ ಭಾರತ ಸಾರಿಗೆ ಮುಷ್ಕರಕ್ಕೆ ಕರೆ ನೀಡಿದ್ದು ಜನವರಿ 8ರಂದು ಖಾಸಗಿ ರಂಗದ ಎಕ್ಸ್‌ಪ್ರೆಸ್‌, ಸರ್ವೀಸ್ ಹಾಗೂ ಸಿಟಿ ಬಸ್ಸುಗಳಲ್ಲಿ ದುಡಿಯುವ ನೌಕರರು ಮುಷ್ಕರದಲ್ಲಿ ಭಾಗವಹಿಸಲಿದ್ದು  ಜನವರಿ 8 ರಂದು ಬಸ್ಸು ಸೌಕರ್ಯ ಇರುವುದಿಲ್ಲ.

 ಬಸ್ಸು ಮಾಲಿಕರಿಗೆ ಹಾಗೂ ಬಸ್ಸು ನೌಕರರಿಗೆ ಮಾರಕವಾಗುವ 2017ರ ಮೋಟಾರ್ ವೆಹಿಕಲ್ (ಎಮಂಡ್‌ಮೆಂಟ್) ಬಿಲ್ಲನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು. ಖಾಸಗಿ ರಂಗದ ಸಾರಿಗೆ ರಂಗವನ್ನು ದೊಡ್ಡ ಕಾರ್ಪೊರೇಟ್ ರಂಗಕ್ಕೆ ನೀಡುವ ಕೇಂದ್ರ ಸರ್ಕಾರದ ನಿಲುಮೆ ಎಲ್ಲಾ ವಿಭಾಗಗಳಿಗೆ ಉದ್ಯೋಗ ನೀಡುವ ಪ್ರಸ್ತುತ ಸಾರಿಗೆ ವ್ಯವಸ್ಥೆಯನ್ನು ನಾಶ ಮಾಡಿ ಸಾರಿಗೆ ರಂಗದ ಮಾಲಿಕರು, ಡ್ರೈವರ್‌, ನಿರ್ವಾಹಕರು, ಕ್ಲೀನರ್ ಹಾಗೂ ಪರೋಕ್ಷವಾಗಿ ದುಡಿಯುವ ಕಾರ್ಮಿಕರು ಕೆಲಸ ಕಳಕೊಳ್ಳಲಿದ್ದಾರೆ. ಮಾತ್ರವಲ್ಲದೆ ಡ್ರೈವಿಂಗ್ ಲೈಸೆನ್ಸ್ ನಿಯಮವನ್ನು ಇನ್ನೂ ಕಠಿಣಗೊಳಿಸಲಾಗಿದೆ. ಚಿಕ್ಕ ಪುಟ್ಟ ಅಪಘಾತಗಳಿಗೂ ಚಾಲಕರು ಜೈಲು ಪಾಲಾಗಲಿದ್ದಾರೆ. ವಾಹನ ಮತ್ತು ಮೂರನೇ ಪಾರ್ಟಿಯ  ಇನ್ಶುರೆನ್ಸ್ ಪ್ರೀಮಿಯಮನ್ನು  ನೂರು ಪಟ್ಟು ಹೆಚ್ಚಿಸಲಾಗಿದೆ.

2014ರಿಂದ ಪೆಟ್ರೋಲ್ ಹಾಗೂ ಡೀಸೆಲ್‌ ದರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೀರಾ ಕಡಿಮೆಯಾಗಿದ್ದರೂ ನಾಲ್ಕುವರೆ ವರ್ಷದಲ್ಲಿ ಎಲ್ಲಾ ವಿಭಾಗವನ್ನು ಈ ಮೂಲಕ ಸುಲಿಗೆ ಮಾಡಲಾಗಿದೆ. ಟೋಲ್ ಗೇಟ್‌ಗಳಲ್ಲಿ ಚಾರ್ಜ್‌ನ್ನು ದುಬಾರಿಗೊಳಿಸಲಾಗಿದೆ. ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದೆ. ಕಾರ್ಮಿಕ ವೇತನವನ್ನು ಪೂರಕವಾಗಿ ಕನಿಷ್ಟ 24000 ರೂಪಾಯಿಗೆ ಏರಿಸದೆ ಜೀವನ ನಿರ್ವಹಿಸಲು ಸಾದ್ಯವಿಲ್ಲದಾಗಿದೆ. ಕಾರ್ಮಿಕ ಕಾನೂನುಗಳನ್ನು ಕೇಂದ್ರ ಸರ್ಕಾರ ನಾಶ ಮಾಡುತ್ತಿದೆ. ಬಸ್ಸು ನೌಕರರಿಗೆ ಹಾಗೂ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಸಿಗುತ್ತಿಲ್ಲ. ಪಿಎಫ್, ಇಎಸ್ಐ ಹಾಗೂ ಗ್ರಾಚ್ಯುಟಿ ಸೌಲಭ್ಯಗಳು ಬಡ ಕಾರ್ಮಿಕರಿಗೆ ಸಿಗುವಂತೆ ವ್ಯವಸ್ಥೆ ಆಗಬೇಕು. ಬಸ್ಸುಗಳು ಸೇರಿಕೊಂಡು ಎಲ್ಲಾ ಸಾರಿಗೆ ನೌಕರರನ್ನು ಕಾರ್ಮಿಕ ಇಲಾಖೆಯಿಂದ ಇಲಾಖೆಯಲ್ಲಿ ಹೆಸರು ನೋಂದಾಯಿಸಬೇಕೆಂಬ ಅಖಿಲ ಭಾರತ ಬೇಡಿಕೆಗಳನ್ನು ಒತ್ತಾಯಿಸಲಾಗಿದೆ ಎಂದು ಮೋಟಾರ್ ಟ್ರಾನ್ಸ್ ಪೋರ್ಟ್ ಆ್ಯಂಡ್ ಇಂಜಿನಿಯರಿಂಗ್ ವರ್ಕರ್ಸ್‍ ಯೂನಿಯನ್(ರಿ) ಸಿಐಟಿಯುನ‌ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ   ಹೇಳಿಕೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version