ಜಲೀಲ್ ಕರೋಪಾಡಿ ಹತ್ಯೆ, ಗಡಿ ಮಾಫಿಯಾ ವಿರುದ್ಧ ಕಠಿಣ ಕ್ರಮಕ್ಕೆ ಮುನೀರ್ ಕಾಟಿಪಳ್ಳ ಒತ್ತಾಯ

Spread the love

ಜಲೀಲ್ ಕರೋಪಾಡಿ ಹತ್ಯೆ, ಗಡಿ ಮಾಫಿಯಾ ವಿರುದ್ಧ ಕಠಿಣ ಕ್ರಮಕ್ಕೆ ಮುನೀರ್ ಕಾಟಿಪಳ್ಳ ಒತ್ತಾಯ

ಮಂಗಳೂರು: ಕರೋಪಾಡಿ ಗಾಪಂ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಕೊಲೆ ಜಿಲ್ಲೆಯ ಜನರನ್ನು ಆತಂಕಕ್ಕೆ ತಳ್ಳಿದೆ. ಹಾಡು ಹಗಲೇ ಪಂಚಾಯತ್ ಕಚೇರಿಯಲ್ಲಿ ದುಷ್ಕರ್ಮಿಗಳು ಜನಪ್ರತಿನಿಧಿಯೊಬ್ಬನ ಹತ್ಯೆಯನ್ನು ನಡೆಸಿರುವುದು ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದು, ಕೇರಳ – ಕರ್ನಾಟಕ ಗಡಿಭಾಗದಲ್ಲಿ ಸಕ್ರಿಯವಾಗಿರುವ ಕ್ರಿಮಿನಲ್ ಮಾಫಿಯಾಗಳನ್ನು ಹತ್ತಿಕ್ಕುವಲ್ಲಿ ಪೋಲೀಸರ ವೈಫಲ್ಯ ಈ ಕೊಲೆಗೆ ಕಾರಣ ಎಂದು ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಬಂಟ್ವಾಳ ಹಾಗೂ ಪುತ್ತೂರಿನ ಕೇರಳ ಸರಹದ್ದಿನ ಗ್ರಾಮಗಳು ಮರಳು, ಟಿಂಬರ್, ಸ್ಪಿರಿಟ್, ಖೋಟಾನೋಟು, ನಿಧಿಶೋಧ, ವಾಹನ ಕಳವು ಸಹಿತ ಹಲವು ಮಾಫಿಯಾಗಳ ಕೇಂದ್ರವಾಗಿವೆ. ಈ ಅಂತರ್ರಾಜ್ಯ ಕಳ್ಳಸಾಗಾಣಿಕೆ ಮಾಫಿಯಾಗಳು ಕುಖ್ಯಾತ ಕ್ರಿಮಿನಲ್ ತಂಡಗಳನ್ನು ಸೃಷ್ಟಿಸಿದ್ದು, ತಮ್ಮದೇ ಆದ ಪರ್ಯಾಯ ಆಡಳಿತವನ್ನು ಗಡಿಗ್ರಾಮಗಳಲ್ಲಿ ನಡೆಸುತ್ತಿವೆ. ಸ್ಥಳೀಯ ರಾಜಕಾರಣ ಸೇರಿದಂತೆ ಎಲ್ಲಾ ವ್ಯವಹಾರಗಳಲ್ಲೂ ಮೂಗುತೂರಿಸುವ ಈ ಗ್ಯಾಂಗ್‍ಗಳ ಉಪಟಳದಿಂದ ಸ್ಥಳೀಯವಾಗಿ ಉಸಿರುಗಟ್ಟಿಸುವ ಸ್ಥಿತಿ ನಿರ್ಮಾಣವಾಗಿದೆ. ತಮ್ಮ ಮಾತು ಕೇಳದ, ಅಕ್ರಮಗಳ ವಿರುದ್ಧ ಧ್ವನಿ ಎತ್ತುವವರ ಮೇಲೆ ಈ ಕ್ರಿಮಿನಲ್ ತಂಡಗಳು ಆಕ್ರಮಣ ನಡೆಸುತ್ತವೆ. ಇಂತಹ ಗ್ಯಾಂಗ್ ಗಳು ಪರಸ್ಪರ ಕಾದಾಟಕ್ಕಿಳಿದು ಸಾರ್ವಜನಿಕ ಸ್ಥಳದಲ್ಲಿ ಎದುರಾಳಿ ಗ್ಯಾಂಗ್‍ಗಳ ಮೇಲೆ ದಾಳಿ, ಹತ್ಯೆಗಳನ್ನು ನಡೆಸಿ ಅರಾಜಕತೆಯನ್ನು ಸೃಷ್ಟಿಸಿವೆ. ಸ್ಥಳೀಯ ಪೋಲೀಸ್ , ಅರಣ್ಯ ಇಲಾಖೆಗಳು ಈ ಮಾಫಿಯಾಗಳೊಂದಿಗೆ ಮೃದು ಧೋರಣೆ, ಶಾಮೀಲಾತಿ ಹೊಂದಿರುವುದೇ ಪರಿಸ್ಥಿತಿ ಗ್ರಾಪಂ ಉಪಾಧ್ಯಕ್ಷನ ಕೊಲೆಯವರಗೆ ಮುಂದುವರಿಯಲು ಕಾರಣ.

ಸರಕಾರ ಈಗಲಾದರೂ ಎಚ್ಚೆತ್ತು ಗಡಿಭಾಗದ ಠಾಣೆಗಳಿಗೆ ನಿಷ್ಠುರ ಅಧಿಕಾರಿಗಳನ್ನು ನೇಮಿಸಬೇಕು, ಮಾಫಿಯಾಗಳೊಂದಿಗೆ ನಂಟು ಹೊಂದಿರುವ ಅನುಮಾನಿತ ಪೋಲೀಸರನ್ನು ವರ್ಗಾಯಿಸಬೇಕು. ಕೇರಳದ ಪೋಲೀಸರೊಂದಿಗೆ ಸಮನ್ವಯ ಸಾಧಿಸಿಕೊಂಡು ಮಾಫಿಯಾಗಳನ್ನು ಮಟ್ಟಹಾಕಬೇಕು ಎಂದು ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.


Spread the love