ಜವಾಬ್ದಾರಿಯುತವಾಗಿ ಇಂಟರ್ನೆಟ್ ಬಳಸಿ ಸೈಬರ್ ವಂಚನೆಗಳಿಂದ ರಕ್ಷಿಸಿಕೊಳ್ಳಿ: ಸಿ.ಇ.ಓ ಡಾ|| ಆನಂದ್ ಕೆ
ಮಂಗಳೂರು: ಆನ್ಲೈನ್ ಜಗತ್ತನ್ನು ಎಲ್ಲಾ ಬಳಕೆದಾರರಿಗೂ ಸುರಕ್ಷಿತ ಹಾಗೂ ಉತ್ತಮ ಸ್ಥಳವನ್ನಾಗಿ ಮಾಡುವಲ್ಲಿ ಪ್ರತಿಯೊಬ್ಬ ಬಳಕೆದಾರನ ಪಾತ್ರವಿದ್ದು ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಫೆಬ್ರವರಿ ತಿಂಗಳ ಎರಡನೇ ಮಂಗಳವಾರದಂದು ವಿಶ್ವ ಸುರಕ್ಷಿತ ಅಂತರ್ಜಾಲ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ವಿಶ್ವ ಸುರಕ್ಷಿತ ಅಂತರ್ಜಾಲ ದಿನವನ್ನು “ಜೊತೆಯಾಗಿ ಉತ್ತಮ ಇಂಟರ್ನೆಟ್ ಕಡೆಗೆ” ಎಂಬ ಧ್ಯೇಯವಾಕ್ಯದೊಂದಿಗೆ ಫೆಬ್ರವರಿ 11 ರಂದು ಆಚರಿಸಲಾಗಿದ್ದು, ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ದ.ಕ. ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ|| ಆನಂದ್ ಕೆ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ನ ಅಧಿಕಾರಿಗಳಿಗೆ ಹಾಗೂ ಇತರ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ಕಾರ್ಯಗಾರವನ್ನು ನಡೆಸಲಾಯಿತು.
ಜಿಲ್ಲಾ ಎನ್.ಐ.ಸಿ ಅಧಿಕಾರಿ ಅಶ್ವಿನ್ ಕುಮಾರ್ ರೈ, ಮಂಗಳೂರು ಸೈಬರ್ ಪೋಲಿಸ್ ವಿಭಾಗದ ಎಸಿಪಿ ರವೀಶ್ ನಾಯ್ಕ್ ಮತ್ತು ಪಿ.ಎಸ್.ಐ. ಮಾರುತಿ ಪಿ. ವೈಯಕ್ತಿಕ ಮಾಹಿತಿಯ ಸುರಕ್ಷತೆ ಮತ್ತು ಸಾಮಾನ್ಯ ಸೈಬರ್ ಬೆದರಿಕೆಗಳಾದ ಡಿಜಿಟಲ್ ಬಂಧನ, ವಂಚನೆ ಕರೆಗಳು, ಫಿಶಿಂಗ್, ಲಾಟರಿ ಹಗರಣ, ಹೂಡಿಕೆ ಹಗರಣ ಮುಂತಾದ ವಂಚನೆಗಳ ಕಾರ್ಯವಿಧಾನ ಹಾಗೂ ಅವುಗಳಿಂದ ನಮ್ಮನ್ನು ರಕ್ಷಿಸಲು ಮುಂಜಾಗ್ರತಾ ಕ್ರಮದ ಕುರಿತು ವಿವರವಾದ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ನೀಡಿದರು.
ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ|| ಆನಂದ್ ಕೆ ಮಾತನಾಡಿ ವೈಯಕ್ತಿಕ ನೈರ್ಮಲ್ಯದಷ್ಟೇ ಡಿಜಿಟಲ್ ನೈರ್ಮಲ್ಯ ಕೂಡಾ ಮಹತ್ವದ್ದಾಗಿದ್ದು, ಎಲ್ಲರೂ ಕಂಪ್ಯೂಟರ್ ಮತ್ತು ಇಂಟರ್ನೆಟ್ಟನ್ನು ಬಳಸುವಾಗ ಜವಾಬ್ದಾರಿಯುತವಾಗಿ ಉತ್ತಮ ಸುರಕ್ಷತಾ ಅಭ್ಯಾಸಗಳನ್ನು ಅನುಸರಿಸುವ ಮೂಲಕ ಸೈಬರ್ ವಂಚನೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು ಎಂದು ತಿಳಿಸಿದರು.
ಜಿಲ್ಲಾಪಂಚಾಯತ್ನ ಉಪ ಕಾರ್ಯದರ್ಶಿಗಳು, ಯೋಜನಾ ನಿರ್ದೇಶಕರು, ಹಾಗೂ ಮುಖ್ಯ ಯೋಜನಾ ಅಧಿಕಾರಿ ಉಪಸ್ಥಿತರಿದ್ದರು.