ಜಸ್ಟೀಸ್ ಫಾರ್ ಕಾವ್ಯ – ಒಂದಾದ ವಿದ್ಯಾರ್ಥಿ ಸಮೂಹ, ಸಂಘಟನೆಗಳು; ಸೂಕ್ತ ತನಿಖೆಗೆ ಆಗ್ರಹ
ಮಂಗಳೂರು: ವಿದ್ಯಾರ್ಥಿನಿ ಕಾವ್ಯ ಪೂಜಾರಿಯ ಸಾವಿನ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿ ಜಸ್ಟೀಸ್ ಫಾರ್ ಕಾವ್ಯ ಹೋರಾಟ ಸಮಿತಿ ದಕ ಜಿಲ್ಲಾ ಸಮಿತಿಯ ವತಿಯಿಂದ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಬೃಹತ್ ಮಟ್ಟದ ಧರಣಿ ಬುಧವಾರ ನಡೆಯಿತು.
ನಗರದ ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಜಾಥಾ ನಡೆಯಿತು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸರ್ವ ಕಾಲೇಜು ವಿದ್ಯಾರ್ಥಿ ಸಂಘಟನೆಯ ರಾಜ್ಯಾಧ್ಯಕ್ಷ ದಿನಕರ ಶೆಟ್ಟಿ ವಿದ್ಯಾರ್ಥಿಗಳು ತಮ್ಮ ಹಕ್ಕಿಗಾಗಿ ಹೋರಾಟ ನಡೆಸುವುದು ನಮ್ಮ ಜವಬ್ದಾರಿಯಾಗಿದೆ. ನಿರ್ಭಯ ಪ್ರಕರಣದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ಫಲವಾಗಿ ಕೇವಲ ಮೂರು ತಿಂಗಳ ಒಳಗಾಗಿ ಆರೋಪಿಗಳಿಗೆ ಶಿಕ್ಷೆಯಾಯಿತು. ಕಾವ್ಯ ಪ್ರಕರಣದಲ್ಲಿ ವಿದ್ಯಾರ್ಥಿಗಳು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದ್ದು, ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಕೆಲವೊಂದು ಸಂಘಟನೆಗಳು ಆಳ್ವಾರ ಪರವಾಗಿ ನಿಂತಿದ್ದು ಒಂದು ವೇಳೆ ಅವರ ಮಗಳಿಗೆ ಅಂತಹ ಸಮಸ್ಯೆ ಆಗಿದ್ದರೆ ಅವರು ಆಳ್ವಾರ ಬೆಂಬಲಕ್ಕೆ ನಿಂತುಕೊಳ್ಳುತ್ತಿದ್ದವೇ ಎಂದು ಪ್ರಶ್ನಿಸಿದರು. ಸರಕಾರ ಕಾವ್ಯಳ ಕುಟುಂಬಕ್ಕೆ ರೂ 25 ಲಕ್ಷ ಪರಿಹಾರ ನೀಡುವುದರೊಂದಿಗೆ ನಿಷ್ಪಕ್ಷಪಾತವಾಗಿ ತನಿಖೆಯನ್ನು ನಡೆಸಬೇಕು ಎಂದು ಆಗ್ರಹಿಸಿದರು.
ಬಿರುವೆರ್ ಕುಡ್ಲ ಸಂಘಟನೆಯ ಸದಸ್ಯ ದೀಪಕ್ ಶೆಟ್ಟಿಗಾರ್ ಮಾತನಾಡಿ, ನಾವು ಕಾವ್ಯಾಳ ಸಾವಿಗೆ ನ್ಯಾಯಕ್ಕಾಗಿ ಆಗ್ರಹ ಮಾಡುತ್ತಿದ್ದು, ಕಾವ್ಯಾಳ ಪೋಷಕರಲ್ಲಿ ಹಲವಾರು ಸಂಶದಯ ಪ್ರಶ್ನೆಗಳಿದ್ದು ಅದಕ್ಕೆ ಉತ್ತರ ಲಭಿಸಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ. ಕಾವ್ಯಾಳ ಸಾವಿನ ಹಿಂದಿನ ನಿಜವಾದ ರಹಸ್ಯವನ್ನು ಬಯಲಿಗೆಳೆದು, ಆರೋಪಿಗಳನ್ನು ಬಂಧಿಸುವ ಕೆಲಸ ನಡೆಯಬೇಕು ಎಂದರು.
ಬಿಲ್ಲವ ಸಮಾಜದ ದೀಪಕ್ ಪೂಜಾರಿ ಮಾತನಾಡಿ ಬಂಟ ಸಮುದಾಯದವರು ಸುದ್ದಿಗೋಷ್ಟಿ ನಡೆಸಿ ಆಳ್ವಾರಿಗೆ ಬೆಂಬಲ ಸೂಚಿಸುತ್ತಾರೆ ಮತ್ತು ಅವರ ಪರವಾಗಿ ಸಭೆಯನ್ನು ಕೂಡ ಆಯೋಜಿಸಿಲು ನಿರ್ಧರಿಸಿದ್ದಾರೆ. ಕಾವ್ಯಾಳ ಸಾವು ಬಂಟ ಮತ್ತು ಬಿಲ್ಲವ ಸಮುದಾಯದ ನಡುವಿನ ಸಂಘರ್ಷಕ್ಕೆ ಕಾರವಾಗಿದೆ. ಆಳ್ವಾರ ಪರ ಇರುವ ಕಾಳಜಿ ಕಾವ್ಯಾಳ ಪರ ಇವರಿಗೆ ಏಕಿಲ್ಲ ಎಂದು ಪ್ರಶ್ನಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಅನಿಲ್ ದಾಸ್ ಮಾತನಾಡಿ ಹಲವಾರು ವಿದೇಶದಲ್ಲಿರುವ ಹಳೆ ವಿದ್ಯಾರ್ಥಿಗಳು ಸಹ ಕಾವ್ಯಾಳ ಪರವಾಗಿ ದನಿ ಎತ್ತಿದ್ದು, ಕಾವ್ಯಾಳ ಸಾವಿನ ನಿಜವಾದ ಕಾರಣ ಹೊರಗಿಡಬೇಕಾಗಿದೆ ಅಲ್ಲದೆ ಆಕೆಯ ಕುಟುಂಬಕ್ಕೆ ಸರಕಾರ ಸೂಕ್ತ ಪರಿಹಾರ ನೀಡಬೇಕು ಇಲ್ಲವಾದಲ್ಲಿ ನಮ್ಮ ಪ್ರತಿಭಟನೆ ಮುಂದುವರೆಯಲಿದೆ ಎಂದರು.
ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಕವಿತಾ ಸನೀಲ್ ಮಾತನಾಡಿ ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಟ ಮಾಡುತ್ತಿರುವ ವಿದ್ಯಾರ್ಥಿ ಸಮುದಾಯವನ್ನು ಅಭಿನಂದಿಸಿದ ಅವರು ಕಾವ್ಯಾಳ ತಾಯಿ ಆಕೆಯ ಸಾವಿನ ಕುರಿತು ಕೆಲವೊಂದು ಅನುಮಾನಗಳನ್ನು ವ್ಯಕ್ತಪಡಿಸಿದ್ದು, ಅದಕ್ಕೆ ಸೂಕ್ತ ಪರಿಹಾರ ನೀಡುವ ಕೆಲಸ ನಡೆಯಬೇಕಾಗಿದೆ. ಆಕೆ ಸಾವಿನ ಕುರಿತು ನಿಷ್ಪಕ್ಷಪಾತವಾದ ತನಿಖೆ ನಡೆಯಬೇಕಾಗಿದ್ದು, ಇದು ಪ್ರತಿಯೊಬ್ಬರ ಆಗ್ರಹವಾಗಿದೆ. ಒರ್ವ ಕ್ರೀಡಾಪಟುವಾಗಿ ಈ ರೀತಿ ಅನುಮಾಸ್ಪದವಾಗಿ ಸಾವನಪ್ಪಲು ಸಾಧ್ಯವಿಲ್ಲ. ಸಂಘಟನೆಗಳು ಸೂಕ್ತ ಪರಿಹಾರಕ್ಕಾಗಿ ಒತ್ತಾಯಿಸಿದ್ದು ತಾನೂ ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಚರ್ಚಿಸಿ ತನ್ನಿಂದಾಗುವ ಸಹಕಾರ ನೀಡುವ ಭರವಸೆ ನೀಡಿದರು.