ಜಿಟಿಟಿಸಿ ತರಬೇತಿಯಿಂದ 100% ಉದ್ಯೋಗ- ಪ್ರಮೋದ್ ಮಧ್ವರಾಜ್

Spread the love

ಜಿಟಿಟಿಸಿ ತರಬೇತಿಯಿಂದ 100% ಉದ್ಯೋಗ- ಪ್ರಮೋದ್ ಮಧ್ವರಾಜ್

ಉಡುಪಿ : ಜಿಟಿಟಿಸಿ ಕಾಲೇಜಿನಲ್ಲಿ ತರಬೇತಿ ಪಡೆಯುವ ಜಿಲ್ಲೆಯ ಯುವ ಜನತೆಗೆ 100% ಉದ್ಯೋಗ ಸಿಗಲಿದೆ ಎಂದು ರಾಜ್ಯದ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಉಪ್ಪೂರು ನಲ್ಲಿ 43 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಕೈಗಾರಿಕೆಗಳಿಗೆ ಬೇಕಾದ ಉಪಕರಣ ತಯಾರಿಸುವ ಹಲವು ಪ್ರಸಿದ್ದ ಕಂಪೆನಿಗಳು ರಾಜ್ಯದಲ್ಲಿದ್ದು, ಇವುಗಳಿಗೆ ನುರಿತ ತಾಂತ್ರಿಕ ತರಬೇತಿ ಪಡೆದ ಸಿಬ್ಬಂದಿ ಕೊರತೆಯಿದೆ, ಈ ಕೇಂದ್ರದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಶಿಕ್ಷಣ ಪೂರೈಸುವ ಮುಂಚೆಯೇ ಉದ್ಯೋಗದ ಅವಕಾಶ ಕಾದಿರುತ್ತದೆ, ಇದುವರೆಗೆ ಈ ಕೇಂದ್ರಗಳಲ್ಲಿ ಶಿಕ್ಷಣ ಪಡೆದ ಎಲ್ಲಾ 50000 ಮಂದಿಗೆ ಉದ್ಯೋಗ ತರಬೇತಿ ದೊರೆತಿದೆ, ಉಪ್ಪೂರಿನಲ್ಲಿ ಈ ಕೇಂದ್ರ ನಿರ್ರ್ಮಾಣಕ್ಕೆ ಈಗಾಗಲೇ 11 ಕೋಟಿ ಬಿಡುಗಡೆ ಆಗಿದೆ, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಚಿವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಕಡಿಮೆ ಶಿಕ್ಷಣ ಪಡೆದ ಯುವಕರಿಗೆ , ತರಬೇತಿ ನೀಡಿ, ಆರ್ಥಿಕವಾಗಿ ಸಧೃಡರನ್ನಾಗಿಸುವ ಉದ್ದೇಶದಿಂದ ಈ ಜಿಟಿಟಿಸಿ ತರಬೇತಿ ನೀಡಲಾಗುತ್ತಿದೆ, ಕೇಂದ್ರದ ನಬಾರ್ಡ್ ಯೋಜನೆಯಡಿ 9.5 ಕೋಟಿ ಗಳನ್ನು ಇದಕ್ಕೆ ಬಿಡುಗಡೆ ಮಾಡಲಾಗಿದ್ದು, ಯುವಕರಿಗೆ ಕೌಶಲ್ಯ ಆಧಾರಿತ ತರಬೇತಿಯನ್ನೂ ಸಹ ಈ ಕೇಂದ್ರದಲ್ಲಿ ನೀಡಲಾಗುವುದು ಎಂದರು.

ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ದೇಶದಲ್ಲಿ ಯುವ ಜನತೆಯ ಪ್ರಮುಖ ಬೇಡಿಕೆ ಉದ್ಯೋಗ, ಈ ಕೇಂದ್ರದಲ್ಲಿ ಹೆಚ್ಚಿನ ಯುವಕರಿಗೆ ಶಿಕ್ಷಣ ನೀಡಿ, ಶಿಕ್ಷಕರ ಸಂಖ್ಯೆಯನ್ನು ಹೆಚ್ಚು ಮಾಡಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪ್ಪೂರು ಗ್ರಾ.ಪಂ ಅಧ್ಯಕ್ಷೆ ಆರತಿ, ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪ ಚಂದ್ರ ಶೆಟ್ಟಿ, ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಎ. ಗಫೂರ್, ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ , ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ಜಿ.ಪಂ. ಸದಸ್ಯ ಜನಾರ್ಧನ ತೋನ್ಸೆ, ತಾ.ಪಂ. ಸದಸ್ಯ ದಿನಕರ ಹೇರೂರು, ಕುಂದಾಪುರ ತಾಲೂಕು ಪ್ರಾಧಿಕಾರದ ಅಧ್ಯಕ್ಷ ವಿಕಾಸ್ ಹೆಗ್ಡೆ, ಎಪಿಎಂಸಿ ಸದಸ್ಯ ಬ್ಯಾಪಿಸ್ಟ್ ಡಯಾಸ್ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಕೈಗಾರಿಕ ಕೇಂದ್ರದ ಜಂಟಿ ನಿರ್ದೇಶಕ ರಮಾನಂದ ನಾಯಕ್ ಸ್ವಾಗತಿಸಿದರು, ಸಹಾಯಕ ನಿರ್ದೇಶಕ ಸೀತಾರಾಮ ಶೆಟ್ಟಿ ವಂದಿಸಿದರು.


Spread the love