ಜಿಲ್ಲಾಡಳಿತದ ಶಾಂತಿ ಸಭೆಗೆ ಬಿಜೆಪಿ ಬಹಿಷ್ಕಾರ – ಕ್ಯಾ. ಗಣೇಶ್ ಕಾರ್ಣಿಕ್
ಮಂಗಳೂರು: ಜಿಲ್ಲೆಯಲ್ಲಿ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಹಿಂಸಾಚಾರ ಹಾಗೂ ಕೋಮು ಸಂಬಂಧಿತ ಅಹಿತಕರ ಘಟನೆಗಳಿಗೆ ಸಂಬಂಧಿಸಿ ಜಿಲ್ಲಾಡಳಿತ ಕರೆಯಲಾಗಿರುವ ಶಾಂತಿ ಸಭೆಯನ್ನು ಭಾರತೀಯ ಜನತಾ ಪಕ್ಷ ಬಹಿಷ್ಕರಿಸುವುದಾಗಿ ವಿಧಾನಪರಿಷತ್ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದ ಸಾರಾಂಶ ಇಂತಿದೆ.
ಮಾನ್ಯ ಜಿಲ್ಲಾಧಿಕಾರಿಗಳು
ದಕ್ಷಿಣ ಕನ್ನಡ ಜಿಲ್ಲೆ
ಮಂಗಳೂರು.
ವಿಷಯ: ದಿನಾಂಕ 13.07.2017 ರ ಶಾಂತಿ ಸಭೆ ಬಹಿಷ್ಕರಿಸುವ ಕುರಿತು.
ಉಲ್ಲೇಖ: ತಮ್ಮ ಸಭಾ ಸೂಚನ ಪತ್ರ ಸಂ. ಎಂಎಜಿ(2)ಸಿಆರ್ 316/2017/ಸಿ4 ದಿನಾಂಕ 10.07.2017.
ಮೇಲಿನ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ವಿಷಯಗಳನ್ನು ತಮ್ಮ ಗಮನಕ್ಕೆ ತರಲಿಚ್ಚಿಸುತ್ತೇನೆ.
1. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ವಾರಗಳಿಂದ ಮಾರಣಾಂತಿಕ ಇರಿತ ಪ್ರಕರಣಗಳು, ಹಲ್ಲೆ, ಹತ್ಯೆ ಮುಂತಾದ ಗಂಭೀರ ಘಟನೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಕಳೆದ 48 ದಿನಗಳಿಂದ ಸೆಕ್ಷನ್ 144 ಜಾರಿಯಲ್ಲಿದ್ದರೂ ಅಶಾಂತಿ ಹಾಗೂ ಪ್ರಕ್ಷುಬ್ಧತೆ ಮುಂದುವರೆದಿದ್ದು ಈಗಲಾದರೂ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಶಾಂತಿ ಸಭೆ ನಡೆಸಲು ಮುಂದಾಗಿರುವುದು ಅಭಿನಂದನೀಯ. ಈ ಕೆಲಸವನ್ನು ಪ್ರಾರಂಭದಲ್ಲಿಯೇ ಕೈಗೆತ್ತಿಕೊಂಡಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯ ಮಾನ ರಾಷ್ಟ್ರಮಟ್ಟದಲ್ಲಿ ಹರಾಜಾಗುತ್ತಿರಲಿಲ್ಲ.
2. ಈ ಸಭೆಗೆ ಆಹ್ವಾನಿಸಿರುವವರ ಪಟ್ಟಿಯನ್ನು ಅವಲೋಕಿಸಿದಾಗ ಜಿಲ್ಲಾಡಳಿತ ಮತ್ತೊಮ್ಮೆ ಪಕ್ಷಪಾತ ನೀತಿ ಅನುಸರಿಸುತ್ತಿರುವುದು ಎದ್ದು ಕಾಣುತ್ತಿದೆ. ಈ ಪಟ್ಟಿಯನ್ನು ಆಯ್ಕೆ ಮಾಡಲು ಅನುಸರಿಸಿದ ಮಾನದಂಡಗಳೇನೆಂಬುದು ಸ್ಪಷ್ಟವಾಗುತ್ತಿಲ್ಲ.
3. 48 ದಿನಗಳ ಕಾಲ ನಿರಂತರವಾಗಿ ಸೆಕ್ಷನ್ 144 ಜಾರಿಯಲ್ಲಿದ್ದರೂ ದುಷ್ಕೃತ್ಯಗಳು ನಡೆಯುತ್ತಿರುವುದು ಎಲ್ಲೊ ಒಂದೆಡೆ ಜಿಲ್ಲಾಡಳಿತ ಮತ್ತು ಪೋಲೀಸ್ ಇಲಾಖೆ ಗಲಭೆ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿರುವುದು ಗೋಚರಿಸುತ್ತಿದೆ.
4. ಈ ಕೆಳಗಿನ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆಯ ನಿಷ್ಕ್ರೀಯತೆಯಿಂದಾಗಿ ಯಾವುದೇ ಆರೋಪಿಗಳನ್ನು ಬಂಧಿಸಲಾಗದಿರುವುದು ಸಮಸ್ತ ಹಿಂದೂ ಸಮಾಜದ ಬಂಧುಗಳನ್ನು ಆತಂಕಕ್ಕೆ ಈಡುಮಾಡಿದೆ.
• ಕರೋಪಾಡಿಯಲ್ಲಿ ರಾಧಾಕೃಷ್ಣ ಮನೆಗೆ ನುಗ್ಗಿ ಅವರ ಹೆಂಡತಿಗೆ ಹಲ್ಲೆಗೈದು ರಾಧಾಕೃಷ್ಣ ಕೊಲೆಯತ್ನ
• ಕಲ್ಲಡ್ಕದಲ್ಲಿ ಯತಿನ್ ಕೊಲೆಯತ್ನ
• ಕಲ್ಲಡ್ಕ ರತ್ನಾಕರ ಶೆಟ್ಟಿ ಕೊಲೆಯತ್ನ
• ಅಡ್ಯಾರಿನಲ್ಲಿ ನಮಿತ್ ರಾಜ್ ಕೊಲೆಯತ್ನ
• ಬ್ರಹ್ಮರಕೂಟ್ಲು ಟೋಲ್ ಗೇಟ್ ನೌಕರರ ಕೊಲೆಯತ್ನ
• ಸಜಿಪ ಕಂದೂರು ಶರತ್ ಕೊಲೆ
• ಉಳ್ಳಾಲದಲ್ಲಿ ಚಿರಂಜೀವಿ ಕೊಲೆಯತ್ನ
5. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮರಳುದಂಧೆ, ಡ್ರಗ್ ಮಾಫಿಯಾ ಹಾಗೂ ಕಡಲಾಚೆಗಿನ ಭೂಗತ ಪಾತಕಿಗಳ ಚಟುವಟಿಕೆಗಳನ್ನು ಹತ್ತಿಕ್ಕುವಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿರುವುದು ವಾಸ್ತವ.
6. ಈ ರೀತಿಯ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿ ಹಾಗೂ ಗುಂಪುಗಳ ನಡುವಿನ ಘರ್ಷಣೆಗಳಿಗೂ ಮತೀಯ ಬಣ್ಣವನ್ನು ನೀಡುತ್ತಾ ಹಾಗೂ ಈ ಘಟನೆಗಳನ್ನು ಸರಿಯಾದ ಮಾಹಿತಿಯೊಂದಿಗೆ ಮಾಧ್ಯಮಗಳ ಮೂಲಕ ಸಾರ್ವಜನಿಕರ ಗಮನಕ್ಕೆ ತರುವಲ್ಲಿ ವಿಫಲವಾಗಿರುವ ಜಿಲ್ಲಾಡಳಿತ, ಹಾಗೂ ಮಾಧ್ಯಮಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವ ನೀತಿ ಗೊಂದಲ ಸೃಷ್ಟಿಸಲು ಕಾರಣವಾಗಿದೆ.
7. ಸೆಕ್ಷನ್ 144ನ ನಡುವೆಯೂ ಸಾರ್ವಜನಿಕರಿಗೆ ಅವರ ದೈನಂದಿನ ಚಟುವಟಿಕೆಗಳನ್ನು ನಡೆಸಲು ಅನುಕೂಲ ಮಾಡಿಕೊಟ್ಟಿರುವುದು ಸ್ವಾಗತಾರ್ಹವಾದರೂ ಜಿಲ್ಲೆಯಾದ್ಯಂತ 48 ದಿನಗಳಿಗೂ ಹೆಚ್ಚು ಕಾಲ ನಿರಂತರವಾಗಿ ಸೆಕ್ಷನ್ 144 ಜಾರಿಗೊಳಿಸಿರುವುದು ಈ ಕಾಯ್ದೆಯ ಉದ್ದೇಶವನ್ನೇ ಪ್ರಶ್ನೆ ಮಾಡುವಂತಾಗಿದ್ದು, ಇದು ಜಿಲ್ಲೆಯ ಕುರಿತಾಗಿ ದೇಶಾದ್ಯಂತ ಕೆಟ್ಟ ಅಭಿಪ್ರಾಯ ಮೂಡಿಸುವಲ್ಲಿ ಜಿಲ್ಲಾಡಳಿತ ಕಾರಣವಾಗಿದೆ.
8. ದೇಶದ ಸಂವಿಧಾನ ನಾಗರಿಕರಿಗೆ ಸಭೆ, ಸಮಾರಂಭಗಳನ್ನು ನಡೆಸಲು, ಜನಾಭಿಪ್ರಾಯ ರೂಪಿಸಲು, ಪ್ರತಿರೋಧ ವ್ಯಕ್ತಪಡಿಸಲು, ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸಲು ಎಲ್ಲಾ ಅವಕಾಶವನ್ನು ನೀಡಿರುತ್ತದೆ. ಆದರೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದು, ನಿರಂತರ 48 ದಿನಗಳ ಕಾಲ ಸೆಕ್ಷನ್ 144 ಹೇರಿಕೆಯ ಮೂಲಕ ಸಾರ್ವಜನಿಕರ ಸಂವಿಧಾನ ಬದ್ಧವಾದ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗಿದೆ.
9. ಜಿಲ್ಲಾಡಳಿತ ಗಲಭೆ, ಗೊಂದಲ ಪ್ರಾರಂಭವಾದಗಿನಿಂದಲೂ ಈವರೆಗೆ ಜಿಲ್ಲೆಯ ಬೇರೆ ಬೇರೆ ಸ್ತರಗಳ ಜನಪ್ರತಿನಿಧಿಗಳನ್ನು, ಸಮಾಜದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿರುವುದು, ಅತ್ಯಂತ ಸೂಕ್ಷ್ಮ ಸಮಯದಲ್ಲಿ ಘಟನೆಗಳು ನಡೆದಾಗಲೂ ಸಂವೇದನಾ ಶೂನ್ಯವಾಗಿ ವರ್ತಿಸುವುದು, ಕಾನೂನು ರಕ್ಷಣೆ ಮಾಡಬೇಕಾದ ಪೊಲೀಸ್ ಇಲಾಖೆಯೇ ಕಾನೂನು ಕೈಗೆತ್ತಿಕೊಂಡು ಸರ್ಚ್ ವಾರೆಂಟ್ ಹಾಗೂ ಇತರ ದಾಖಲೆಗಳಿಲ್ಲದೆ ವಿಚಾರಣೆಯ ನೆಪದಲ್ಲಿ ಅಪರಾತ್ರಿಯಲ್ಲಿ ದೊಡ್ಡ ಪೊಲೀಸ್ ಬಲದೊಂದಿಗೆ ಹೆಂಗಸರು ಹಾಗೂ ಮಕ್ಕಳು ಮಾತ್ರ ಇರುವ ಸಂದರ್ಭದಲ್ಲಿ ಮನೆಗಳಿಗೆ ನುಗ್ಗಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿರುವುದು ನೇರವಾಗಿ ಸಾರ್ವಜನಿಕರ ಮನಸ್ಸಿನಲ್ಲಿ ಆತಂಕ ಮೂಡಿಸಲು ಕಾರಣವಾಗಿದೆ.
10. ಬೇರೆ ಬೇರೆ ಘಟನೆಗಳಲ್ಲಿ ಭಾಗಿಯಾಗಿರುವ ಹಿನ್ನಲೆಯ ವ್ಯಕ್ತಿಗಳನ್ನು ಬಂಧಿಸಿದಾಗ ಪೊಲೀಸ್ ಇಲಾಖೆ ಕೇವಲ ಹಿಂದೂ ಸಮಾಜಕ್ಕೆ ಸೇರಿದ ವ್ಯಕ್ತಿಗಳ ಹೆಸರುಗಳನ್ನು ಮಾತ್ರ ಹಿಂದೂ ಸಂಘಟನೆಗಳಿಗೆ ಸೇರಿದವರೆಂಬಂತೆ ಬಿಂಬಿಸುವುದು ಹಾಗೂ ಅಲ್ಪ ಸಂಖ್ಯಾತ ಸಮುದಾಯದ ರಾಷ್ಟ್ರವಿರೋಧಿ ಸಂಘಟನೆಗಳಿಗೆ ಸೇರಿದ ವ್ಯಕ್ತಿಗಳ ಕುರಿತಾಗಿ ಮಾಹಿತಿ ಲಭ್ಯವಿದ್ದರೂ ಅದನ್ನು ಉಲ್ಲೇಖಿಸದಿರುವುದು ಸಮಾಜದಲ್ಲಿ ಅಶಾಂತಿ ಮೂಡಿಸಲು ಒಂದು ಪ್ರಬಲ ಕಾರಣವಾಗಿದೆ.
11. ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನಲೆಯಲ್ಲಿ ಈ ರೀತಿಯ ಅಹಿತಕರ ಘಟನೆಗಳು ನಡೆದಾಗ ಕಾನೂನನ್ನು ಸಮಾನವಾಗಿ ಎಲ್ಲರಿಗೂ ಒಂದೇ ರೀತಿ ಅನ್ವಯವಾಗುವಂತೆ ಜಾರಿಗೊಳಿಸುವುದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಆದ್ಯ ಕರ್ತವ್ಯ. ಇತ್ತೀಚೆಗಿನ ಘಟನೆಗಳಲ್ಲಿ ಪೊಲೀಸ್ ಇಲಾಖೆಯು ಇಬ್ಬಗೆ ನೀತಿಯನ್ನು ಅನುಸರಿಸಿರುವುದು ಹಾಗೂ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣದಂತೆ ವರ್ತಿಸುತ್ತಿರುವುದು ಜಿಲ್ಲೆಯ ಇಂದಿನ ಪರಿಸ್ಥಿತಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಬಹು ಸಂಖ್ಯಾತ ಹಿಂದೂ ಸಮಾಜ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ಇಬ್ಬಗೆ ನೀತಿಯಿಂದ ತೀವ್ರವಾಗಿ ನೊಂದಿದೆ.
12. ದೇಶದ ಕಾನೂನು ವ್ಯವಸ್ಥೆ ಸಮಾಜದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ನೆರವಾಗಬೇಕೇ ಹೊರತು ನಿರಪರಾಧಿಗಳನ್ನು ಬಂಧಿಸಿ ಸಾರ್ವಜನಿಕರ ಮನಸ್ಸಿನಲ್ಲಿ ಗೊಂದಲ ಸೃಷ್ಠಿ ಮಾಡುವಂತಾಗಬಾರದು. ನಿರಂತರ 48 ದಿನಗಳ ಕಾಲ ಸೆಕ್ಷನ್ 144 ಜಾರಿಗೊಳಿಸಿರುವ ನಿರ್ಣಯದ ನಡುವೆಯೂ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡಲು ವಿಫಲವಾಗಿರುವುದರಿಂದ ಜಿಲ್ಲೆಯ ಈ ಪರಿಸ್ಥಿತಿಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯೇ ಸಂಪೂರ್ಣವಾಗಿ ಜವಾಬ್ದಾರರಾಗಿರಬೇಕಾಗುತ್ತದೆ.
13. ಸುಮಾರು ಒಂದೂವರೆ ತಿಂಗಳಿಂದ ಕನಿಷ್ಠ ಸೌಜನ್ಯಕ್ಕಾದರೂ ಚುನಾಯಿತ ಜನಪ್ರತಿನಿಧಿಗಳನ್ನಾಗಲಿ, ಸಮಾಜದ ಮುಖಂಡರನ್ನಾಗಲಿ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವ ಜಿಲ್ಲಾಡಳಿತದ ನಿರ್ಣಯ ಸರ್ವತಾ ಖಂಡನೀಯ.
ಈ ಮೇಲೆ ನಮೂದಿಸಲಾಗಿರುವ ಎಲ್ಲಾ ಅಂಶಗಳ ಹಿನ್ನಲೆಯಲ್ಲಿ ಜನ ಪ್ರತಿನಿಧಿಗಳಾದ ನಮ್ಮನ್ನು ಇಲ್ಲಿಯವರೆಗೂ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವ ಕಾರಣದಿಂದ, ಹಿಂದೂ ಸಮಾಜದ ಯುವಕರ ಹತ್ಯೆ ಹಾಗೂ ಹಲ್ಲೆ ನಡೆದು ಹಲವು ದಿನಗಳೂ ಕಳೆದಿದ್ದರೂ ಕೂಡ ಯಾವುದೇ ಅಪರಾಧಿಗಳ ಪತ್ತೆ ಹಚ್ಚಿ ಬಂಧಿಸದಿರುವ ಹಿನ್ನಲೆಯಲ್ಲಿ, ಕೆಲವೇ ಕೆಲವು ವ್ಯಕ್ತಿಗಳನ್ನು ಗುರುತಿಸಿ, ಆಹ್ವಾನಿಸಿ, ಶಾಂತಿ ಸಭೆ ನಡೆಸುವುದು ಯಾವುದೇ ಕಾರಣಕ್ಕೂ ಸಾಧುವಲ್ಲವಾಗಿರುವುದರಿಂದ, ತಾವು ತುಂಬಾ ತಡವಾಗಿ ಕೈಗೊಂಡ ಈ ವ್ಯರ್ಥ ಪ್ರಯತ್ನಕ್ಕೆ ವಿಷಾಧಿಸುತ್ತಾ ಅನಿವಾರ್ಯವಾಗಿ ಈ ಸಭೆಯನ್ನು ಬಹಿಷ್ಕರಿಸುವುದಾಗಿ ತಿಳಿಸಲಿಚ್ಚಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ