Home Mangalorean News Kannada News ಜಿಲ್ಲಾಧಿಕಾರಿ ಡಾ. ಜಗದೀಶ್ ಅವರಿಗೆ ಬೀಳ್ಕೊಡುಗೆ

ಜಿಲ್ಲಾಧಿಕಾರಿ ಡಾ. ಜಗದೀಶ್ ಅವರಿಗೆ ಬೀಳ್ಕೊಡುಗೆ

Spread the love

ಜಿಲ್ಲಾಧಿಕಾರಿ ಡಾ. ಜಗದೀಶ್ ಅವರಿಗೆ ಬೀಳ್ಕೊಡುಗೆ 

ಮಂಗಳೂರು: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರಾಗಿ ವರ್ಗಾವಣೆಗೊಂಡಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.

ಪೊಲೀಸ್ ಆಯುಕ್ತ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಕುಮಾರ್ ಮಾತನಾಡಿ, ಸರಳತೆ ಮತ್ತು ಸಜ್ಜನಿಕೆ ಮೈಗೂಡಿಸಿಕೊಂಡಿದ್ದ ಡಾ.ಜಗದೀಶ್, ಯೋಚನೆ ಮತ್ತು ಯೋಜನೆಯನ್ನು ಪ್ರತಿಯೊಂದರಲ್ಲೂ ಶಿಸ್ತುಬದ್ಧವಾಗಿ ಅಳವಡಿಸಿ ಕರ್ತವ್ಯ ನಿರ್ವಹಿಸಿದ್ದಾರೆ. ಸಾರ್ವಜನಿಕರ ಅಹವಾಲುಗಳನ್ನು ಅತ್ಯಂತ ತಾಳ್ಮೆ ಹಾಗೂ ಗೌರವಯುತವಾಗಿ ಆಲಿಸಿ ಅವರಲ್ಲಿ ವಿಶ್ವಾಸ ಮೂಡಿಸಿದ್ದರು. ವಿಶೇಷವಾಗಿ ಅಂಗವಿಕಲರ ಕಲ್ಯಾಣ, ಅನಾಥಾಶ್ರಮಗಳ ಹಾಗೂ ವೃದ್ಧಾಶ್ರಮಗಳ ಕಲ್ಯಾಣಕ್ಕೆ ಹೆಚ್ಚು ಒತ್ತು ನೀಡಿ ಸಹೃದಯಿಯಾಗಿದ್ದರು ಎಂದು ಮೆಚ್ಚುಗೆಯನ್ನಾಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ ಮಾತನಾಡಿ, ಉತ್ತಮ ಅಧಿಕಾರಿ ಎಲ್ಲರಿಗೂ ಉತ್ತಮನಾಗಿರುವುದಿಲ್ಲ. ದರ್ಪ, ಬೆದರಿಕೆ ಮತ್ತು ಭಯ ಹುಟ್ಟಿಸಿ ಆಡಳಿತ ನಡೆಸಲು ಸಾಧ್ಯವಿಲ್ಲ ಎಂಬುದನ್ನು ಡಾ. ಜಗದೀಶ್ ತೋರಿಸಿಕೊಟ್ಟಿದ್ದಾರೆ. ವೈಯಕ್ತಿಕವಾಗಿ ಮೌಲ್ಯ ಮತ್ತು ಬಾಂಧವ್ಯಕ್ಕೆ ಅವರು ಪ್ರಾಶಸ್ತ್ಯ ನೀಡುತ್ತಿದ್ದರು ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ಜಿ ಜಗದೀಶ್, ದಕ್ಷಿಣ ಕನ್ನಡ ಜಿಲ್ಲೆಯ ಸೇವೆ ಅತ್ಯುನ್ನತ ಅನುಭವ ನೀಡಿದೆ. ಕಾನೂನನ್ನು ಗೌರವಪೂರ್ವಕವಾಗಿ ಪಾಲನೆ ಮಾಡುವ ಪ್ರವೃತ್ತಿ ಜಿಲ್ಲೆಯ ಜನತೆಯಲ್ಲಿದೆ. ತಳಹಂತದ ಸಿಬ್ಬಂದಿಯಿಂದ ಜಿಲ್ಲಾ ಮಟ್ಟದ ಅಧಿಕಾರಿಯವರೆಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೆ ಮಾತ್ರ ಯಶಸ್ವಿಯಾಗಬಹುದು. ಜಿಲ್ಲೆಯ ಜನತೆ ತೋರಿಸಿದ ಪ್ರೀತಿಗೆ ಆಭಾರಿಯಾಗಿರುವುದಾಗಿ ಅವರು ನುಡಿದರು.

ಸಮಾರಂಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ, ಮಹಾನಗರಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್. ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಪುತ್ತೂರು ಸಹಾಯಕ ಆಯುಕ್ತ ಡಾ. ರಘುನಂದನಮೂರ್ತಿ ವಂದಿಸಿದರು. ನಿರ್ಗಮಿತ ಜಿಲ್ಲಾಧಿಕಾರಿಯವರನ್ನು ವಿವಿಧ ಇಲಾಖೆಗಳ ಅಧಿಕಾರಿಗಳು ಸನ್ಮಾನಿಸಿದರು.


Spread the love

Exit mobile version