ಜಿಲ್ಲಾ ಉಸ್ತುವಾರಿ ಸಚಿವರ ಸಭೆಯ ತನಕ ಟೋಲ್ ಸಂಗ್ರಹಕ್ಕೆ ತಡೆ?
ಉಡುಪಿ: ಜಿಲ್ಲೆಯ ಸಾಸ್ತಾನ ಮತ್ತು ಹೆಜಮಾಡಿ ಟೋಲ್ ಗೇಟುಗಳಲ್ಲಿ ನವಯುಗ ಸಂಸ್ಥೆ ಕೆ ಎ 20 ವಾಹನಗಳಿಂದ ನವೆಂಬರ್ 26ರಿಂದ ಟೋಲ್ ವಸೂಲಿ ಮಾಡಿದ ನಿರ್ಧಾರವನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ನವೆಂಬರ್ 28 ರಂದು ನಡೆಯಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯ ತನಕ ತಡೆಹಿಡಿಯಲು ನವಯುಗ ಸಂಸ್ಥೆಗೆ ಮನವಿ ಮಾಡಿದ್ದಾರೆ.
ಈ ಕುರಿತು ಮ್ಯಾಂಗಲೋರಿಯನ್ ಪ್ರತಿನಿಧಿಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಸಾಸ್ತಾನ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯವರು ನನ್ನಲ್ಲಿ ಬಂದು ಜಿಲ್ಲಾ ಉಸ್ತುವಾರಿ ಸಚಿವರ ಸಭೆಯ ತನಕ ಟೋಲ್ ವಸೂಲಿ ಮಾಡದಂತೆ ವಿನಂತಿ ಮಾಡಿಕೊಂಡಿದ್ದು ಅದರಂತೆ ನಾನು ನವಯುಗ ಸಂಸ್ಥೆಗೆ ಈ ಬಗ್ಗೆ ಮಾಹಿತಿ ನೀಡಿದ್ದೇನೆ. ನವಯುಗ ಸಂಸ್ಥೆ ಹೆದ್ದಾರಿ ಪ್ರಾಧಿಕಾರದೊಂದಿಗೆ ಮಾತನಾಡಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಟೋಲ್ ಸಂಗ್ರಹಕ್ಕೆ ಅವಕಾಶ ನೀಡದ ಕಾರಣ ಈಗಾಗಲೇ ನವಯುಗ ಕಂಪೆನಿ ಜಿಲ್ಲಾಡಳಿತದ ವಿರುದ್ದ ರಾಜ್ಯ ಪ್ರಾಧಿಕಾರಕ್ಕೆ ದೂರು ನೀಡಿದೆ. ಟೋಲ್ ಸಂಗ್ರಹಕ್ಕೆ ಪೋಲಿಸ್ ರಕ್ಷಣೆ ಒದಗಿಸಲು ಲೋಕೋಪಯೋಗಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಸೂಚಿಸಿದ್ದಾರೆ. ಟೋಲ್ ವಿರೋಧಿ ಹೋರಾಟ ಸಮಿತಿಯ ಬೇಡಿಕೆಯನ್ನು ಮೇಲಾಧಿಕಾರಿಗಳಿಗೆ ನಾವು ಕಳುಹಿಸಿದ್ದು ನಿರ್ಧಾರವನ್ನು ಅವರು ತೆಗೆದುಕೊಳ್ಳಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ನಡುವೆ ಶುಕ್ರವಾರ ತಮ್ಮ ವಾರದ ಫೋನ್ ಇನ್ ಕಾರ್ಯಕ್ರಮದ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಜಿಲ್ಲೆಯ ಸಾಸ್ತಾನ ಮತ್ತು ಹೆಜಮಾಡಿಯಲ್ಲಿ ಟೋಲ್ ಸಂಗ್ರಹ ವಿಚಾರದಲ್ಲಿ ಪೊಲೀಸ್ ಇಲಾಖೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರ ಇಲ್ಲ. ಇದು ಕೇಂದ್ರ ಸರಕಾರಕ್ಕೆ ಸಂಬಂಧಿಸಿದ ವಿಚಾರವಾಗಿರುವುದರಿಂದ ಸಾರ್ವಜನಿಕ ಆಸ್ತಿಯ ರಕ್ಷಣೆ ಮಾಡುವ ನಿಟ್ಟಿನಲ್ಲಿ ಟೋಲ್ ಗಳಿಗೆ ಭದ್ರತೆಯನ್ನು ಮಾತ್ರ ನೀಡಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ.
80 ಶೇಕಡಾ ಕಾಮಗಾರಿ ಮುಗಿದ ಬಳಿಕ ಟೋಲ್ ಸಂಗ್ರಹಿಸುವ ಕುರಿತು ಕೇಂದ್ರ ಸರಕಾರ ಸಂಬಂಧಿತ ಕಂಪೆನಿಯೊಂದಿಗೆ ಒಡಬಂಡಿಕೆ ಮಾಡಿದ್ದು, ಕೇಂದ್ರ ಸರಕಾರದಿಂದ ರಾಜ್ಯ ಸರಕಾರಕ್ಕೆ ಟೋಲ್ ಸಂಗ್ರಹಿಸಲು ಈಗಾಗಲೇ ಸೂಚನೆ ಬಂದಿದೆ ಹಲವು ಸಮಯ ಕಳೆದಿದೆ. ಹೋರಾಟಗಾರರು ತಮ್ಮ ಬೇಡಿಕೆಯನ್ನು ಪೊರೈಸದೆ ಟೋಲ್ ಸಂಗ್ರಹಿಸದಂತೆ ನಮ್ಮಲ್ಲಿ ಮತ್ತು ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಈ ವಿಚಾರದಲ್ಲಿ ನವಯುಗ ಸಂಸ್ಥೆ ತಮಗೆ ಜಿಲ್ಲಾದಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಟೋಲ್ ಸಂಗ್ರಹಿಸುವ ವಿಚಾರದಲ್ಲಿ ಸಹಕರಿಸುತ್ತಿಲ್ಲ ಎಂದು ಆರೋಪಿಸಿ ಪ್ರಾಧಿಕಾರಕ್ಕೆ ಎಬ್ರಿವೇಶನ್ ಅರ್ಜಿಯನ್ನು ಸಲ್ಲಿಸಿದ್ದಾರೆ. ತಮಗೆ ನಷ್ಟವಾಗಿದೆ ಎಂದು ಹೈಕೋರ್ಟಿನ ಮೊರೆ ಹೋಗಿದೆ. ಟೋಲ್ ಸಂಗ್ರಹ ಮಾಡಲು ಸಾರ್ವಜನಿಕರಿಂದ ತೊಂದರೆಯಾದರೆ ಟೋಲ್ ಗೇಟ್ ಗಳಿಗೆ ಭದ್ರತೆ ನೀಡುವುದು ಮಾತ್ರ ನಮ್ಮ ಜವಾಬ್ದಾರಿಯಾಗಿದೆ. ಹೆಜಮಾಡಿ ಮತ್ತು ಸಾಸ್ತಾನ ಟೋಲ್ ಗೇಟುಗಳಿಗೆ ಭದ್ರತೆ ನೀಡುವಂತೆ ಏನಾದರೂ ಪತ್ರ ಬಂದರೆ ಸೂಕ್ತ ಪೊಲೀಸ್ ಭದ್ರತೆಯನ್ನು ಒದಗಿಸಲಾಗುವುದು ಎಂದರು.