ಜಿಲ್ಲಾ ಬಿಜೆಪಿ ಅಧ್ಯಕ್ಷರು ಹುದ್ದೆಗೆ ತಕ್ಕ ಹೇಳಿಕೆ ನೀಡಲಿ – ತೆಂಕನಿಡಿಯೂರು ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ್ ನಾಯಕ್
ಉಡುಪಿ: ಗುರುವಾರ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ತೆಂಕನಿಡಿಯೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುರೇಶ್ ನಾಯಕ್ ಅವರನ್ನು ಬಿಜೆಪಿಯಿಂದ ಹಿಂದೆಯೇ ಅಮಾನತು ಮಾಡಲಾಗಿದೆ ಎಂಬ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರ ಮಾಧ್ಯಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ತೆಂಕನಿಡಿಯೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುರೇಶ್ ನಾಯಕ್ ಅವರು ಬಿಡುಗಡೆ ಮಾಡಿರುವ ಮಾಧ್ಯಮ ಹೇಳಿಕೆಯನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ.
ಬಿಜೆಪಿಯ ಜಿಲ್ಲಾಧ್ಯಕ್ಷರೇ ನೀವು ನನ್ನ ವಿರುದ್ದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದೀರಿ, ನೀವು ನಿಮ್ಮ ಹುದ್ದೆಗೆ ತಕ್ಕಂತೆ ಹೇಳಿಕೆ ನೀಡಿ
ನಾನು 5 ವರ್ಷಗಳ ಹಿಂದೆ 32ನೇ ತೆಂಕನಿಡಿಯೂರು ಗ್ರಾಮದ ಕೆಳಾರ್ಕಳಬೆಟ್ಟು, ಗ್ರಾಮದ 1 ನೇ ವಾರ್ಡಿನ ಬಿಜೆಪಿಯ ಬೆಂಬಲಿತನಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ನನ್ನ ಗ್ರಾಮದ ಜನರ ಕಾರ್ಯಕರ್ತರ ಸಹಾಯದಿಂದ ಚುನಾಯಿತನಾಗಿರುತ್ತೇನೆ ಹೊರತು ಯಾವುದೇ ಪಕ್ಷದ ಚಿಹ್ನೆಯ ಅಡಿಯಲ್ಲಿ ಚುನಾಯಿತನಾಗಿರುವುದಿಲ್ಲ ಇದು ತಮಗೆ ತಿಳಿದಿರಲಿ. ಅದಾದ ನಂತರ 2.5 ವರ್ಷಕ್ಕೆ ಅಧ್ಯಕ್ಷರ ಬದಲಾವಣೆಯ ಸಂದರ್ಭದಲ್ಲಿ ನಾನು ಮತ್ತು ಕೆಲವರು ಅಡ್ಡ ಮತದಾನ ಮಾಡಿರುತ್ತೇವೆ, ಕಾರಣ ಪಂಚಾಯತ್ ದುರಾಡಳಿತ ಜನರಿಗೆ ಸರಿಯಾದ ಮೂಲಸೌಕರ್ಯಗಳು, ಅಭಿವೃದ್ಧಿ ಕಾಮಗಾರಿಗಳು ಆಗಿರುವುದಿಲ್ಲ.
ಈ ವಿಷಯವನ್ನು ನಾನು ಜಿಲ್ಲಾ ಆಫೀಸ್ ನಲ್ಲಿ ಮುಕ್ತವಾಗಿ ತಿಳಿಸಿರುತ್ತೇನೆ ಹೊರತು ಬೇರೆ ಯಾವುದೇ ಕೆಟ್ಟ ಉದ್ದೇಶವಿಲ್ಲ ಮತ್ತು ನೀವು ಬಳಸಿದ ಪದಕ್ಕೆ ಯಾವುದೇ ಸತ್ಯಾಂಶವಿಲ್ಲ. ತಾವು ಈ ವಿಷಯ ತಿಳಿದು ಸರಿಯಾದ ರೀತಿಯಲ್ಲಿ ಹೇಳಿಕೆಯನ್ನು ಕೊಡುವುದು ಸೂಕ್ತ ಮತ್ತು ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ತರಹದ ನೋಟಿಸು ನೀಡಿರುವುದಿಲ್ಲ ಮತ್ತು ಇದರ ಬಗ್ಗೆ ಜಿಲ್ಲಾ ಬಿಜೆಪಿ ಕೂಡ ಯಾವುದೇ ಮಾಧ್ಯಮ ಹೇಳಿಕೆಯನ್ನು ನೀಡಿರುವುದಿಲ್ಲ ಎಂದು ತಿಳಿಸಿದ್ದಾರೆ.