ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಗೆ ಮೇಲುಸ್ತುವಾರಿ ಸಮಿತಿ-ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ
ಉಡುಪಿ: ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಗೆ ಮರಳು ಮೇಲುಸ್ತುವಾರಿ ಸಮಿತಿಯನ್ನು ರಚಿಸಿ, ಅಕ್ರಮಗಳನ್ನು ತಡೆಯಲು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮುಂದಾಗಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಜಿಲ್ಲೆಯ ಜನರಿಗೆ ಮರಳು ದೊರೆಯಲು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದರು.
ಕುಂದಾಪುರದ ಬಳ್ಕೂರು ನಲ್ಲಿ 114 ಲೋಡ್ ಮರಳು ಲೋಕೋಪಯೋಗಿ ಇಲಾಖಾ ವ್ಯಾಪ್ತಿಯಡಿ ಸಂಗ್ರಹಿಸಿದ್ದು, ಲೋಡ್ ಒಂದಕ್ಕೆ 4,500 ರೂ.ಗಳಂತೆ ಖಾಸಗಿಯವರಿಗೂ ಲಭ್ಯವಿರುತ್ತದೆ ಎಂದರು.
ಜಿಲ್ಲೆಯಲ್ಲಿ ಸರ್ಕಾರಿ ಕಾಮಗಾರಿಗಳಿಗೆ ಸಾಕಷ್ಟು ಮರಳು ಲಭ್ಯವಿದೆ ಎಂದೂ ಅವರು ನುಡಿದರು. ಮರಳು ಅಗತ್ಯವಿರುವವರು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕುಂದಾಪುರ ಇವರನ್ನು ಸಂಪರ್ಕಿಸಿ ಮರಳನ್ನು ಪಡೆಯಬಹುದು ಎಂದು ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಚಂದ್ರಶೇಖರ್ ಅವರು ಸಭೆಗೆ ಮಾಹಿತಿ ನೀಡಿದರು.
08254-230363, 9448428545 ಈ ನಂಬರ್ ಗಳಿಗೆ ಸಂಪರ್ಕಿಸಿ ಎಂದೂ ಹೇಳಿದರು.
ಅಕ್ರಮ ಮರಳುಗಾರಿಕೆ ತಡೆಯಲು ಎರಡು ಪ್ರತ್ಯೇಕ ವಾಹನ, ಮೊಬೈಲ್, ಸಿಬ್ಬಂದಿ, ಬ್ಯಾರಿಕೇಡ್ಸ್, ರಿಫ್ಲೆಕ್ಟರ್ ಜಾಕೆಟ್ ಮತ್ತು ರಾತ್ರಿ ದೃಷ್ಟಿಯುಳ್ಳ ಸಿಸಿಟಿವಿಯನ್ನು ಅಳವಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಶಿರೂರು, ಹೊಸಂಗಡಿಯಲ್ಲಿ ಚೆಕ್ ಪೋಸ್ಟ್ ಗಳನ್ನು ಭದ್ರ ಮಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಸಭೆಯಲ್ಲಿ ಸಹಾಯಕ ಆಯುಕ್ತರಾದ ಶಿಲ್ಪಾ ನಾಗ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಅಮರ್‍ನಾಥ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೋದಂಡರಾಮ ಮತ್ತು ಇತರ ಅಧಿಕಾರಿಗಳು ಸಭೆಯಲ್ಲಿದ್ದರು.