Home Mangalorean News Kannada News ಜಿಲ್ಲೆಯಲ್ಲಿ ಡಿ.ಸಿ. ಮನ್ನಾ ಜಮೀನಿನ ಸರ್ವೇ -ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೂಚನೆ 

ಜಿಲ್ಲೆಯಲ್ಲಿ ಡಿ.ಸಿ. ಮನ್ನಾ ಜಮೀನಿನ ಸರ್ವೇ -ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೂಚನೆ 

Spread the love

ಜಿಲ್ಲೆಯಲ್ಲಿ ಡಿ.ಸಿ. ಮನ್ನಾ ಜಮೀನಿನ ಸರ್ವೇ -ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೂಚನೆ 

ಮಂಗಳೂರು : ಜಿಲ್ಲೆಯ ಪತ್ರಿಯೊಂದು ತಾಲೂಕಿನ ಗ್ರಾಮ ಪಂಚಾಯತ್‍ನಲ್ಲಿ ಇರುವ ಡಿ.ಸಿ. ಮನ್ನಾ ಜಮೀನಿನ ಬಗ್ಗೆ ಸಂಪೂರ್ಣವಾಗಿ ಸರ್ವೇ ನಡೆಸಿ ಅದರ ವರದಿಯನ್ನು ಆಯಾ ತಾಲೂಕಿನ ತಹಶೀಲ್ದಾರರು ಕಡ್ಡಾಯವಾಗಿ ನೀಡಬೇಕು. ಆಸ್ತಿಯನ್ನು ಹೊಂದಿರುವ ವ್ಯಕ್ತಿ ಹೆಚ್ಚುವರಿ ಆಸ್ತಿಗಾಗಿ ಡಿ.ಸಿ. ಮನ್ನಾ ಯೋಜನೆ ಅಡಿ ಭೂಮಿಯನ್ನು ಪಡೆಯಲು ಅರ್ಜಿ ಸಲ್ಲಿಸುವವರ ವಿರುದ್ಧ ಕ್ರಮ ಹಾಗೂ ಡಿ.ಸಿ. ಮನ್ನಾ ಜಮೀನಿನ ಭೂಮಿಯನ್ನು  ಒತ್ತುವರಿ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಮಾಜ ಕಲ್ಯಾಣ ಇಲಾಖೆಯ ವಿವಿಧ ಯೋಜನೆ / ಸಮಿತಿಗಳ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.  ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಡಿ.ಸಿ. ಮನ್ನಾ ಜಮೀನಿನ್ನು ಬಳಕೆ ಮತ್ತು ಖಾಲಿ ಇರುವ ಭೂಮಿಯ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಬಂಧ ಪಟ್ಟ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ನೀಡಬೇಕು. ಅಧಿಕಾರಿಗಳು ಬಡವರಿಗೆ, ಶೋಷಿತ ವರ್ಗದರಿಗೆ ಡಿ.ಸಿ. ಮನ್ನಾ ಭೂಮಿಯು ಸಮರ್ಪಕವಾಗಿ ಹಂಚಿಕೆಯಾಗುವಂತೆ ನೋಡಿಕೊಳ್ಳಬೇಕು. ಡಿ.ಸಿ. ಮನ್ನಾ ಜಮೀನಿನಲ್ಲಿ ಲೇ ಔಟ್ ನಿರ್ಮಾಣ ಮಾಡುವ ಸಂದರ್ಭದಲ್ಲಿ ಸ್ಥಳೀಯ ಮುಖಂಡರನ್ನು ಕರೆಯಿಸಿ ಸಭೆಯನ್ನು ನಡೆಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕು. ಹಾಗೆಯೇ ಪೂರ್ವಜರ ಹೆಸರಲ್ಲಿ ಇವರು ಆಸ್ತಿಯನ್ನು ತಮ್ಮ  ಮಕ್ಕಳ ಹೆಸರಿನಲ್ಲಿ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಕೆಲವು ತೊಂದರೆಗಳು ಉಂಟಾಗುತ್ತಿದ್ದು ಅದರ ಬಗ್ಗೆ ಸಂಬಂದಪಟ್ಟ ತಹಶೀಲ್ದಾರರು ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

2019-20ನೇ ಸಾಲಿನಲ್ಲಿ ಸರ್ಕಾರದಿಂದ ಬಿಡುಗಡೆಯಾದ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಅನುದಾನವನ್ನು ಹಲವು ಇಲಾಖೆಗಳು ಉತ್ತಮವಾಗಿ ಬಳಸಿಕೊಂಡು ಶೇ.87 ರಷ್ಟು ಅಭಿವೃದ್ಧಿ ಹೊಂದಿರುವುದು ಹೆಮ್ಮಯ ಸಂಗತಿಯಾಗಿದೆ. ಜಿಲ್ಲೆಯ ಕೆಲವೊಂದು ಇಲಾಖೆಯಲ್ಲಿ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗಿಲ್ಲ, ಇಂತಹ ಇಲಾಖೆ ಹಿರಿಯ ಅಧಿಕಾರಿಗಳು ತಮ್ಮಲ್ಲಿರುವ ಸಣ್ಣ ಪುಟ್ಟ ಸಮಸ್ಯೆಗಳನ್ನು ನಿವಾರಿಸಿಕೊಂಡ ಅಭಿವೃದ್ಧಿಯತ್ತ ಗಮನ ನೀಡುವಂತೆ ಅಧಿಕಾರಿಗಳಲ್ಲಿ ಸ್ಫೂರ್ತಿ ನೀಡಬೇಕೆಂದು ಅವರು ಸಲಹೆ ನೀಡಿದರು.

ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಅನುದಾನದ ಅಡಿಯಲ್ಲಿ ಅರ್ಜಿ ಸಲ್ಲಿಸುವ ಫಲಾನುಭವಿಗಳ ಆಯ್ಕೆಯು ಸಮರ್ಪಕವಾಗಿ ಕೂಡಿರಬೇಕು. ಅನುದಾನವಿಲ್ಲವೆಂದು ಯಾವುದೇ ಅರ್ಜಿಯನ್ನು ತಿರಸ್ಕರಿಸುವಂತಿಲ್ಲ ಹಾಗೂ ಸರಕಾರದಿಂದ  ಅನುದಾನ ಬಿಡುಗಡೆಯಾದ ಕೂಡಲೇ ಅಂತಹ ಫಲಾನುಭವಿಗಳಿಗೆ ಸೌಲಭ್ಯಯನ್ನು ನೀಡಬೇಕು. ಅವಶ್ಯಕತೆಯಿದ್ದಲ್ಲಿ ಬೇರೆ ಇಲಾಖೆಯ ಅಧಿಕಾರಿಗಳ ಜೊತೆಯಲ್ಲಿ ಚರ್ಚೆ ನಡೆಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಂಡು ಯೋಜನೆಯನ್ನು ಅನುಷ್ಟಾನ ಮಾಡಬೇಕು ಎಂದರು.

ನಮ್ಮ ಜಿಲ್ಲೆಯು ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಂಡಲ್ಲಿ ಇತರೆ ಜಿಲ್ಲೆಯಲ್ಲಿ ಉಳಿದಿರುವ ಅನುದಾನವನ್ನು ನಾವು ಪಡೆಯುವುದಕ್ಕೆ ಸರಕಾರವು ಅವಕಾಶ ಕಲ್ಪಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯು ಅಭಿವೃದ್ಧಿಯ ಮುಂಚೂಣಿಯಲ್ಲಿ ಇರಬೇಕು ಎಂದು ತಿಳಿದರು.

ಎಸ್.ಸಿ ಮತ್ತು ಎಸ್.ಟಿ ಸಮುದಾಯದ ಜನರಿಗೆ ಸರಕಾರವು ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಅನುದಾನದ ಅಡಿಯಲ್ಲಿ ಹಲವು ಯೋಜನೆಯನ್ನು ನೀಡಿದ್ದು, ಅಧಿಕಾರಿಗಳು ಇದರ ಉಪಯೋಗವು ತಳಮಟ್ಟದ ಜನರಿಗೂ ತಲುಪುವಂತೆ ಶ್ರಮವಹಿಸಬೇಕು. ಪ್ರತಿಯೊಬ್ಬ ಜಿಲ್ಲಾ ಮಟ್ಟದ ಅಧಿಕಾರಿಯೂ ಸಭೆಗೆ ಕಡ್ಡಾಯವಾಗಿ ಭಾಗವಹಿಸಬೇಕು, ತಪ್ಪಿದಲ್ಲಿ  ಅಂತಹಾ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ಡಾ. ರಾಜೇಂದ್ರ ತಿಳಿಸಿದರು.

ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್,  ಎಲ್ಲಾ ಪೌರ ಕಾರ್ಮಿಕರಿಗೆ ಆರೋಗ್ಯ ವಿಮೆಯನ್ನು ನೀಡಲಾಗುವುದು. ಮಹಾಕಾಳಿಪಡ್ಪುನಲ್ಲಿ ಸಿದ್ಧವಾಗಿರುವ 32 ಮನೆಗಳನ್ನು ಅರ್ಹ ಫಲಾನುಭವಿಗಳಿಗೆ  ಅತಿ ಶೀಘ್ರದಲ್ಲಿ  ಹಸ್ತಾಂತರ ಮಾಡಲಾಗುವುದು. ಮಹಿಳಾ ಪೌರಕಾರ್ಮಿಕರಿಗೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಡ್ರೆಸ್ ರೂಂ ಮತ್ತು ಪ್ರತ್ಯೇಕ ಶೌಚಾಲಯವನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಯೋಗಿಶ್, ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್,  ಜಿ.ಪಂ. ಉಪಕಾರ್ಯದರ್ಶಿ ಆನಂದ ಕುಮಾರ್, ಡಿಸಿಪಿ ವಿನಯ್ ಗಾಂವ್‍ಕರ್,  ವಿವಿಧ ಇಲಾಖೆಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.


Spread the love

Exit mobile version