ಜಿಲ್ಲೆಯ ಪ್ರತಿ ಮನೆಗಳಲ್ಲೂ ಮಳೆ ಕೊಯ್ಲು ಅಳವಡಿಕೆ ಬಗ್ಗೆ ಪರಿಶೀಲನೆ- ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ
ಉಡುಪಿ: ಜಿಲ್ಲೆಯ ಪ್ರತಿಯೊಂದು ಮನೆಗಳಲ್ಲೂ ಸಹ ಮಳೆ ನೀರು ಕೊಯ್ಲು ಅಳವಡಿಸುವ ಕುರಿತಂತೆ ಪರಿಶೀಲನೆ ನಡೆಸಿ, ಮಳೆ ನೀರು ಸಂಗ್ರಹಿಸುವ ಮೂಲಕ ಬೇಸಿಗೆಯಲ್ಲಿ ತಲೆದೋರುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ಕುರಿತಂತೆ ಚಿಂತನೆ ನಡೆದಿದೆ, ಅಲ್ಲದೇ ಹೊಸದಾಗಿ ಕಟ್ಟಡ ನಿರ್ಮಿಸುವ ಪ್ರತಿಯೊಬ್ಬರೂ ಕಟ್ಟಡ ನಿರ್ಮಾಣದ ನಕ್ಷೆಯ ಅನುಮೋದನೆ ಮತ್ತು ನಿರ್ಮಾಣದ ನಂತರ ಮಳೆ ನೀರು ಕೊಯ್ಲು ಅಳವಡಿಸಿರುವುದನ್ನು ಪರಿಶೀಲಿಸಿ ನಂತರ ಕಂಪ್ಲೀಷನ್ ಪ್ರಮಾಣಪತ್ರ ನೀಡುವ ಕುರಿತಂತೆ ಜಿಲ್ಲೆಯ ಎಲ್ಲಾ ಪಿಡಿಓಗಳಿಗೆ ಜಿಲ್ಲಾ ಪಂಚಾಯತ್ ಮೂಲಕ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದರು.
ಜಿಲ್ಲೆಯಲ್ಲಿ ಹೆಚ್ಚಿನ ಮಳೆ ಬಿದ್ದರೂ ಸಹ, ಬೇಸಿಗೆಯಲ್ಲಿ ನೀರಿನ ಅಭಾವ ತಲೆದೋರುತ್ತಿದೆ ಈ ನಿಟ್ಟಿನಲ್ಲಿ ಮಳೆ ನೀರು ಇಂಗಿಸುವ ಮೂಲಕ ಅಂತರ್ಜಲ ವೃದ್ದಿಮಾಡುವ ಕುರಿತಂತೆ, ಜಲಾನಯನ ಇಲಾಖೆ, ನಗರಸಭೆ, ಕೃಷಿ ಮತ್ತು ತೋಟಗಾರಿಕಾ ಹಾಗೂ ಅರಣ್ಯ ಇಲಾಖೆಯ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು, ಈ ವರ್ಷ ಜಲಾಮೃತ ಯೋಜನೆಯಡಿ ಸಾರ್ವಜನಿಕರಲ್ಲಿ ಜಲ ಸಾಕ್ಷರತೆ ಮೂಡಿಸುವ ಕಾರ್ಯಕ್ರಮ ನಡೆಯುತ್ತಿದ್ದು, ಜಲಶಕ್ತಿ ಅಭಿಯಾನ ಕಾರ್ಯಕ್ರಮದ ಮೂಲಕ ಸಹ ಜಲ ಸಂರಕ್ಷಣೆಯ ಅರಿವು ಮೂಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲೆಯಲ್ಲಿ ಅಗತ್ಯಕಿಂತ ಹೆಚ್ಚು ಬೋರ್ವೆಲ್ಗಳನ್ನು ಕೊರೆಯುವುದು ಸಮಂಜಸವಲ್ಲ. ಈ ಬಗ್ಗೆ ಪ್ರತಿಯೊಬ್ಬರೂ ಚಿಂತನೆ ನಡೆಸಬೇಕು. ನೀರಿನ ಸಂರಕ್ಷಣೆಯಲ್ಲಿ ಎಲ್ಲರ ಒಳಗೊಳ್ಳವಿಕೆ ಅಗತ್ಯ ಎಂದ ಜಿಲ್ಲಾಧಿಕಾರಿ, ಜಿಲ್ಲೆಯ ಎಲ್ಲಾ ಕಟ್ಟಡ ನಿರ್ಮಾಣ ಮಾಡುವ ಇಂಜಿನಿಯರ್ಗಳು, ಗುತ್ತಿಗೆದಾರರು ಮತ್ತು ಪ್ಲಂಬರ್ಗಳಿಗೆ ನಿರ್ಮಿತಿ ಕೇಂದ್ರದ ಮೂಲಕ ಕಾರ್ಯಾಗಾರ ಏರ್ಪಡಿಸಿ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಮಾತನಾಡುತ್ತಾ, ಜಲ ಸಂರಕ್ಷಣೆ ಕುರಿತಂತೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯರಿಗೆ ಮತ್ತು ಪಿಡಿಒಗಳು ಯಾವ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ತಿಳಿಸಲಾಗಿದೆ. ಸರಕಾರದಿಂದ ಸಿಗುವ ಸವಲತ್ತುಗಳ ಮಾಹಿತಿಯನ್ನು ಜನರಿಗೆ ತಲುಪಿಸಲು ಸೂಚಿಸಲಾಗಿದೆ ಎಂದರು. ನೀರಿನ ಸಂರಕ್ಷಣೆ ಮತ್ತು ಅರಣ್ಯ ಸಮೃದ್ಧಿಯಲ್ಲಿ ಸಂಘ-ಸಂಸ್ಥೆ ಮತ್ತು ಜನರ ಸಹಭಾಗಿತ್ವ ಅತ್ಯವಶ್ಯಕ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿ ಸಿಂಧೂ ಬಿ ರೂಪೇಶ್ ಮಾತನಾಡುತ್ತಾ, ಕುಡಿಯುವ ನೀರಿಗೆ ಸ್ಥಳೀಯ ಆಡಳಿತ ಮೊಟ್ಟ ಮೊದಲ ಆದ್ಯತೆ ನೀಡುತ್ತಿದೆ. ನೀರಿನ ಹಂಚಿಕೆ ವಿಷಯವಾಗಿ ಪಿಡಿಒಗಳಿಗೆ ಅವರ ಕೆಲಸದ ಬಗ್ಗೆ ವಿವರಣೆ ನೀಡಲಾಗಿದೆ. ಜಿಲ್ಲೆಯಲ್ಲಿರುವ ಪ್ರತಿಯೊಂದು ಪಂಚಾಯತ್ ಕೂಡ ತಮ್ಮ ಕಟ್ಟಡದಲ್ಲಿ ಮೊದಲು ಮಳೆ ನೀರಿನ ಕೊಯ್ಲು ಮಾಡುವ ವ್ಯವಸ್ಥೆಯನ್ನು ಅಳವಡಿಸಬೇಕೆಂದು ಈಗಾಗಲೇ ನಿರ್ದೇಶನ ನೀಡಲಾಗಿದೆ. ಇಂತಹ ವ್ಯವಸ್ಥೆಗಳನ್ನು ಜನರ ಗಮನಕ್ಕೆ ತಂದು, ಜನರೇ ಸ್ವ ಪ್ರೇರಣೆಯಿಂದ ಯೋಜನೆಗಳನ್ನು ಅಳವಡಿಸಿಕೊಳ್ಳುವಂತೆ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿದ, ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ ಮಾತನಾಡಿ, ಪ್ರಕೃತಿ ಎಲ್ಲರಿಗೂ ಬೇಕು, ಅದನ್ನು ಉಳಿಸಿ ಬೆಳೆಸುವ ಕಾರ್ಯ ನಡೆಯಬೇಕು. ಕೃಷಿಯಿಂದ ವಿಮುಖರಾಗಿರುವುದೇ ಜಲಕ್ಷಾಮಕ್ಕೆ ಮುಖ್ಯ ಕಾರಣ. ಕೃಷಿ ಭೂಮಿಯಲ್ಲಿ ಕಟ್ಟಡಗಳನ್ನು ಕಟ್ಟುವುದರಿಂದ, ನೀರು ಇಂಗಲು ಸಾಧ್ಯವಾಗದೇ ಅಂತರ್ಜಲ ಕಡಿಮೆಯಾಗುತ್ತಿದೆ, ನಾಗರೀಕರು ಕೃಷಿಯತ್ತ ಪಯಣ ಬೆಳೆಸಬೇಕು. ಅರಣ್ಯ ಉಳಿಸಿ, ವನ ಬೆಳೆಸಲು ಮರ ನೆಡುವ ಸ್ಪರ್ಧೆಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಬೇಕು ಎಂದರು.
ಜರ್ನಲಿಸ್ಟ್ ಯೂನಿಯನ್ನಿನ ರಾಜ್ಯಾಧ್ಯಕ್ಷ ಎಸ್. ನಾರಾಯಣ್ ಮಾತನಾಡುತ್ತಾ, ಪತ್ರಕರ್ತರು ಸಾಮಾಜಿಕ ಅರಿವನ್ನು ಮೂಡಿಸುವಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸುತ್ತಾರೆ. ಪತ್ರಕರ್ತರಿಗೆ ಸಾಮಾಜಿಕ ಬದ್ಧತೆಯಿರುತ್ತದೆ. ನೆಲೆ-ಜಲ ಸಂರಕ್ಷಣೆಯಲ್ಲಿ ಹಲವಾರು ಯೋಜನೆಗಳನ್ನು ಯೂನಿಯನ್ ವತಿಯಿಂದ ಹಮ್ಮಿಕೊಳ್ಳಲಾಗಿದೆ. ವೃತ್ತಿರಂಗಕ್ಕೆ ಬರಲಿರುವ ಹೊಸ ಪತ್ರಕರ್ತರಿಗೆ ಪರಿಸರ ಉಳಿಸುವ ನಿಟ್ಟಿನಲ್ಲಿ ಸಾಮಾಜಿಕ ಅರಿವು ಮೂಡಿಸುವ ಶಿಕ್ಷಣವನ್ನು ನೀಡುವ ಆಶಯವನ್ನು ಹೊಂದಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಜರ್ನಲಿಸ್ಟ್ ಯೂನಿಯನ್ ಉಡುಪಿ ಘಟಕದ ಅಧ್ಯಕ್ಷ್ಯ ಶಶಿಧರ್ ಹೆಮ್ಮಣ್ಣ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ರಾವ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಉಪಸ್ಥಿತರಿದ್ದರು
ಪ್ರೊ.ಬಾಲಕೃಷ್ಣ ಮುದ್ದೋಡಿ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಆಸ್ಟ್ರೋ ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜನಾರ್ಧನ ಕೊಡವೂರು ಸ್ವಾಗತಿಸಿದರು. ವಾಸುದೇವ್ ಭಟ್ ನಿರೂಪಿಸಿದರು. ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.