ಜಿಲ್ಲೆ ಏಡ್ಸ್ ಮುಕ್ತವಾಗಲಿ- ದಿನಕರ ಬಾಬು
ಉಡುಪಿ : ಉಡುಪಿ ಜಿಲ್ಲೆಯು ಏಡ್ಸ್ ಮುಕ್ತ ಜಿಲ್ಲೆಯಾಗಲಿ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.
ಅವರು ಗುರುವಾರ ಬಾರಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ ಉಡುಪಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ಯುವ ವಾಹಿನಿ ಯಡ್ತಾಡಿ ಘಟಕ, ಪ್ರಾಥಮಿಕ ಆರೋಗ್ಯ ಕೇಂದ್ರ ಬಾರ್ಕೂರು ಮತ್ತು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬಾರ್ಕೂರು, ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಕಾಲೇಜ್ ಆಫ್ ನರ್ಸಿಂಗ್ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ‘ವಿಶ್ವ ಏಡ್ಸ್ ದಿನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನವನ ಅತಿಯಾದ ಆಸೆ ಮತ್ತು ನೈತಿಕ ಮೌಲ್ಯಗಳಿಗೆ ತಿಲಾಂಜಲಿ ಇಟ್ಟ ಕಾರಣ ಏಡ್ಸ್ನಂತ ಮಾರಕ ಕಾಯಿಲೆಗಳಿಗೆ ಮಾನವ ಬಲಿಯಾಗಬೇಕಿದೆ, ನಮ್ಮ ಪೂರ್ವಜರು ಅನುಸರಿಸಿದ ನೈತಿಕ ಮೌಲ್ಯಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು, ಉಡುಪಿ ಜಿಲ್ಲೆಯಲ್ಲಿ ಏಡ್ಸ್ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ, ಜಿಲ್ಲೆಯನ್ನು ಏಡ್ಸ್ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ನಾಗರಿಕರ ಸಹಕಾರ ಅಗತ್ಯವಿದೆ ಎಂದು ದಿನಕರ ಬಾಬು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ, ಜಿಲ್ಲೆಯಲ್ಲಿ 4925 ಮಂದಿಗೆ ಎ.ಆರ್.ಟಿ ಚಿಕಿತ್ಸೆ ನೀಡಲಾಗುತ್ತಿದೆ, 2008 ರಲ್ಲಿ ಜಿಲ್ಲೆಯಲ್ಲಿ ಹೆಚ್.ಐ.ವಿ ಪ್ರಮಾಣ 5.6 ಇದ್ದು, ಪ್ರಸ್ತುತ ಇದು 0.4 ಕ್ಕೆ ಇಳಿದಿದೆ, ಗರ್ಭಿಣಿಯರಲ್ಲಿ ಈ ಪ್ರಮಾಣ 0.54 ರಿಂದ 0.06 ಗೆ ಇಳಿದಿದೆ, ಜಿಲ್ಲೆಯಲ್ಲಿ ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಹೆಚ್.ಐ.ವಿ ಪ್ರಕರಣಗಳು ಕಂಡುಬರುತ್ತಿವೆ, 2016-17 ರಲ್ಲಿ ಅಕ್ಟೋಬರ್ವರೆಗೆ ಒಟ್ಟು 20,208 ಪರೀಕ್ಷೆ ನಡೆಸಿದ್ದು, 210 ಪಾಸಿಟಿವ್ ಪ್ರಕರಣ ವರದಿಯಾಗಿದೆ. ಜಿಲ್ಲೆಯಲ್ಲಿ ಹೆಚ್.ಐ.ವಿ ಪೀಡಿತರಿಗಾಗಿ, 80 ಆಪ್ತ ಸಮಾಲೋಚನಾ ಕೇಂದ್ರಗಳು 2 ಎ.ಆರ್.ಟಿ ಸೆಂಟರ್ ಮತ್ತು 1 ಎ.ಆರ್.ಟಿ ಪ್ಲಸ್ ಸೆಂಟರ್ ಹಾಗೂ 4 ಲಿಂಕ್ ಎ.ಆರ್.ಟಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಹೆಚ್.ಐ.ವಿ ಪೀಡಿತರಿಗೆ ಮತ್ತು ಮಕ್ಕಳಿಗೆ ಪೌಷ್ಠಿಕ ಆಹಾರ, ಬಸ್ ಪಾಸ್, ಕಾನೂನಿನ ನೆರವು, ಮನೆ ನಿರ್ಮಾಣಕ್ಕೆ ಸಹಾಯ, ಹೈಜೆನಿಕ್ ಕಿಟ್ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ, ರೋಗದ ಬಗ್ಗೆ ಅರಿವು ಮೂಡಿಸಲು 87 ಪ್ರೌಢಶಾಲೆಗಳಲ್ಲಿ ಆರೋಗ್ಯ ಶಿಕ್ಷಣ ಕಾರ್ಯಕ್ರಮ, ರೆಡ್ ರಿಬ್ಬನ್ ಶಾಲೆಗಳ ಮೂಲಕ ಅರಿವು ಕಾರ್ಯಕ್ರಮ, ಯಕ್ಷಗಾನದ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ದೇಶದಲ್ಲಿ 2 ಮಿಲಿಯನ್ ಜನ ಏಡ್ಸ್ನಿಂದ ಬಳಲುತ್ತಿದ್ದು, ಇಡೀ ಏಷ್ಯಾಖಂಡದಲ್ಲಿ ಏಡ್ಸ್ನಿಂದ ಸಂಭವಿಸುವ ಮರಣ ಪ್ರಮಾಣದಲ್ಲಿ ಶೇ.50 ಭಾರತದಲ್ಲಿ ಸಂಭವಿಸುತ್ತಿದೆ, ದೇಶದ 5 ಏಡ್ಸ್ ಪೀಡಿತ ರಾಜ್ಯಗಳಲ್ಲಿ ಕರ್ನಾಟಕ ಸಹ ಒಂದು, ಇದಕ್ಕೆ ಕಾರಣಗಳು ಹಲವು; ಸಮಾಜದಲ್ಲಿ ಈ ರೋಗದ ಕುರಿತು ಅರಿವು ಮೂಡಿಸುವಲ್ಲಿ ಯುವ ಜನತೆಯ ಪಾತ್ರ ಅತ್ಯಂತ ಪ್ರಮುಖವಾಗಿದೆ, ತಮ್ಮ ಸಮೀಪದ ಪ್ರದೇಶದಲ್ಲಿ ಹೆಚ್.ಐ.ವಿ ಪೀಡಿತರು ಕಂಡು ಬಂದಲ್ಲಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು, ಜಿಲ್ಲಾ ಆರೋಗ್ಯ ಸೊಸೈಟಿಯಿಂದ ಏಡ್ಸ್ನಿಂದ ಮೃತಪಟ್ಟ ಪೋಷಕರ ಮಕ್ಕಳಿಗೆ ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲಾ ರೀತಿಯ ಉಚಿತ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಾರಕೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೈಲಾ ಡಿಸೋಜಾ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಹನೇಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ಪೂಜಾರಿ, ಕಾಲೇಜಿನ ಪ್ರಾಂಶುಪಾಲ ಪ್ರೊ.ವಸಂತ ರಾಜ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್, ಬಾರಕೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುಭಾಷ್ ಚಂದ್ರ ಸೂಡಾ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು ಮತ್ತಿತರರು ಉಪಸ್ಥಿತರಿದ್ದರು.
ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರತ್ನ ಸ್ವಾಗತಿಸಿದರು, ಮಂಜುನಾಥ್ ನಿರೂಪಿಸಿದರು.
ವಿದ್ಯಾರ್ಥಿಗಳಿಂದ ಏಡ್ಸ್ ಬಗ್ಗೆ ಅರಿವು ಮೂಡಿಸಲು ಜಾಥಾ ಕಾರ್ಯಕ್ರಮ, ಕೆಎಂಸಿ ವಿದ್ಯಾರ್ಥಿಗಳಿಂದ ಕಿರು ನಾಟಕ ಹಾಗೂ ಕರ್ನಾಟಕ ಕಲಾದರ್ಶಿನಿ ತಂಡದಿಂದ ಯಕ್ಷಗಾನ ಕಾರ್ಯಕ್ರಮ ನಡೆಯಿತು.