ಜಿಲ್ಲೆ ಸಮಸ್ಯೆ ಪರಿಹರಿಸಲು ಜನರು ಫೋನ್ ಮಾಡಿದರೆ ಮೋದಿ ಕರೆ ಸ್ವೀಕರಿಸುವರೇ? – ಪ್ರಮೋದ್
ಚಿಕ್ಕಮಗಳೂರು: ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಪ್ರಧಾನಿ ನರೇಂದ್ರ ಮೋದಿ ಪರವಾಗಿ ಮತಯಾಚಿಸುತ್ತಿದ್ದಾರೆ. ಜಿಲ್ಲೆಯ ಜನರ ಸಮಸ್ಯೆಗಳನ್ನು ಮೋದಿ ಬಂದು ಪರಿಹರಿಸುತ್ತಾರ? ಅವರನ್ನು ಟಿವಿಯಲ್ಲಷ್ಟೆ ನೋಡಬೇಕು ಎಂದು ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಟೀಕಿಸಿದರು.
ಕಾಂಗ್ರೆಸ್, ಜೆಡಿಎಸ್, ಸಿಪಿಐ ವತಿಯಿಂದ ನಗರದ ಉಪ್ಪಳ್ಳಿಯಲ್ಲಿ ಮಂಗಳವಾರ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲೆಯ ಜನರ ಫೋನ್ ಕರೆಯನ್ನು ಸ್ವೀಕರಿಸುತ್ತಾರ? ಸಾಮಾನ್ಯ ಜನರು ಅವರನ್ನು ಭೇಟಿ ಮಾಡಲು ಸಾಧ್ಯವಾಗುತ್ತದೆಯೇ? ಶೋಭಾ ಕರಂದ್ಲಾಜೆ ಅವರು ಐದು ವರ್ಷದ ಅವಧಿಯಲ್ಲಿ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಕ್ಷೇತ್ರದ ಹಳ್ಳಿಗಳಿಗೆ ಭೇಟಿ ನೀಡಿಲ್ಲ, ಸಮಸ್ಯೆ ಆಲಿಸಿಲ್ಲ. ಕುಡಿಯುವ ನೀರಿನ ಬವಣೆ ನಿವಾರಣೆಗೆ ಕ್ರಮ ವಹಿಸಿಲ್ಲ ಎಂದು ದೂರಿದರು.
ಕಸ್ತೂರಿರಂಗನ್ ವರದಿ ಅನುಷ್ಠಾನವಾದರೆ ಜಿಲ್ಲೆಯ ಅರ್ಧ ಭಾಗ ಅಭಿವೃದ್ಧಿಯಿಂದ ವಂಚಿತವಾಗಲಿದೆ. ಕೊಳವೆಬಾವಿ ಕೊರೆಯುವಂತಿಲ್ಲ, ವಸತಿ, ರಸ್ತೆ, ಚರಂಡಿ ನಿರ್ಮಿಸುವಂತಿಲ್ಲ. ಈ ಬಗ್ಗೆ ಸಂಸತ್ತಿನಲ್ಲಿ ಶೋಭಾ ಕರಂದ್ಲಾಜೆ ಧ್ವನಿ ಎತ್ತಿಲ್ಲ. ವರದಿ ಜಾರಿ ಬಗ್ಗೆ ಕೇಂದ್ರ ಸರ್ಕಾರ ಏರ್ಪಡಿಸಿದ್ದ ಸಂಸದರ ಸಭೆಗೆ ಅವರು ಗೈರಾಗುವ ಮೂಲಕ ಬೇಜವಾಬ್ದಾರಿತನ ತೋರಿದ್ದಾರೆ. ಅದರ ಪರಿಣಾಮವಾಗಿ ಕಸ್ತೂರಿರಂಗನ್ ವರದಿ ಈಗ ಅನುಷ್ಠಾನವಾಗುವ ಹಂತ ತಲುಪಿದೆ. ಜನರು ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
‘ಕಸ್ತೂರಿ ರಂಗನ್ ವರದಿ ಜನರ ಅಭಿವೃದ್ಧಿಗೆ ಮಾರಕವಾಗಲಿದೆ ಎನ್ನು ವುದನ್ನು ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೆವು. ಅದಕ್ಕೆ ಅವರು ಸಕಾ ರಾತ್ಮಕವಾಗಿ ಸ್ಪಂದಿಸಿದಿದ್ದರು. ವರದಿ ತಿರಸ್ಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು’ಎಂದರು.
ಜಿಲ್ಲೆಯಲ್ಲಿ ಅರಣ್ಯ ಒತ್ತುವರಿ ಸಮಸ್ಯೆ ಇದೆ. ಆದಿವಾಸಿಗಳು ತಲತಲಾಂತರದಿಂದ ಅರಣ್ಯದಲ್ಲಿ ವಸತಿ ನಿರ್ಮಿಸಿಕೊಂಡು, ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ, ಅವರನ್ನು ಒಕ್ಕಲೆಬ್ಬಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆ ಬಡ ಜನರ ಪರವಾಗಿ ಶೋಭಾ ಕರಂದ್ಲಾಜೆ ಹೋರಾಟ ನಡೆಸಿಲ್ಲ. ಉತ್ತಮ ವಕೀಲರನ್ನು ನೇಮಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲಿಲ್ಲ ಎಂದು ಆರೋಪಿಸಿದರು.
ಈ ಚುನಾವಣೆ ಜಿಲ್ಲೆಯ ಭವಿಷ್ಯ ನಿರ್ಧರಿಸುವ ಚುನಾವಣೆಯಾಗಿದೆ. ಸಂಸದನಾಗಿ ಆಯ್ಕೆಯಾದರೆ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಹೋರಾಟ ಮಾಡುತ್ತೇನೆ. ಸಾಮಾನ್ಯ ಜನರ ಕೈಗೆ ಸಿಗುತ್ತೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕ್ಷೇತ್ರಕ್ಕೆ ಹೆಚ್ಚು ಅನುದಾನ ತರುತ್ತೇನೆ ಎಂದು ಪ್ರಮೋದ್ ಮಧ್ವರಾಜ್ ಭರವಸೆ ನೀಡಿದರು.
ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೆ.ಮಹಮದ್ ಮಾತನಾಡಿ, ‘ಶೋಭಾ ಕರಂದ್ಲಾಜೆ ಅವರು ಜಿಲ್ಲೆಯ ಸರ್ಕಾರಿ ಕಾರ್ಯಕ್ರಮಗಳಿಗೆ, ಪತ್ರಿಕಾಗೋಷ್ಠಿಗೆ ಸೀಮಿತವಾಗಿದ್ದರು. ಕ್ಷೇತ್ರ ನಿರ್ಲಕ್ಷಿಸಿದ್ದರು. ಮಡಿಕೇರಿ, ಮಂಗಳೂರು, ಕೊಡಗು ಒಳಗೊಂಡಂತೆ ರಾಜ್ಯದಲ್ಲಿ ಭಾವನಾತ್ಮಕ ವಿಚಾರಗಳ ಕೆರಳಿಸುವಲ್ಲಿ ನಿರತರಾಗಿದ್ದರು’ ಎಂದು ಆಪಾದಿಸಿದರು.
ಬೀಕನಹಳ್ಳಿ, ಕುರವಂಗಿ, ಅಲ್ಲಂಪುರ, ಮಲ್ಲೇನಹಳ್ಳಿಯಲ್ಲಿ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪ್ರಚಾರ ನಡೆಸಿದರು.
ಮುಖಂಡರಾದ ಎ.ಎನ್.ಮಹೇಶ್, ಎಚ್.ಪಿ.ಮಂಜೇಗೌಡ, ಶಿವಕುಮಾರ್, ರೂಬೆನ್ ಮೊಸೆಸ್, ರಘು, ಎಂ.ಡಿ.ರಮೇಶ್, ಜಯರಾಜ್ ಅರಸ್, ಎಂ.ಸಿ.ಶಿವಾನಂದಸ್ವಾಮಿ, ಹೊಲದಗದ್ದೆ ಗಿರೀಶ್ ಇದ್ದರು.