Home Mangalorean News Kannada News ಜಿ.ಎಸ್.ಟಿ. ಮೂಲಕ ಮೋದಿ ಬಡವರನ್ನು ಸುಲಿಗೆ ಮಾಡುತ್ತಿದ್ದಾರೆ ; ಕೆ.ಸಿ. ವೇಣುಗೋಪಾಲ್

ಜಿ.ಎಸ್.ಟಿ. ಮೂಲಕ ಮೋದಿ ಬಡವರನ್ನು ಸುಲಿಗೆ ಮಾಡುತ್ತಿದ್ದಾರೆ ; ಕೆ.ಸಿ. ವೇಣುಗೋಪಾಲ್

Spread the love

ಜಿ.ಎಸ್.ಟಿ. ಮೂಲಕ ಮೋದಿ ಬಡವರನ್ನು ಸುಲಿಗೆ ಮಾಡುತ್ತಿದ್ದಾರೆ ; ಕೆ.ಸಿ. ವೇಣುಗೋಪಾಲ್

ಉಡುಪಿ: ಜಿ.ಎಸ್.ಟಿ.ಯನ್ನು ಜಾರಿಗೆ ತಂದಿರುವ ಮೋದಿ ಅವರದ್ದು ಗಬ್ಬರ್ ಸಿಂಗ್ ಸ್ಟ್ರಾಟಜಿ. ಅವರು ಜಿ.ಎಸ್.ಟಿ.ಮೂಲಕ ಬಡವರನ್ನು ಸುಲಿಗೆ ಮಾಡುವುದಕ್ಕೆ ಹೊರಟಿದ್ದಾರೆ ಎಂದು ರಾಜ್ಯದ ಎಐಸಿಸಿ ಉಸ್ತುವಾರಿ ಕೆ.ಸಿ.ವೇಣುಗೋಪಾಲ ಆರೋಪಿಸಿದ್ದಾರೆ.

ಅವರು ಸೋಮವಾರ ಉಡುಪಿಯಲ್ಲಿ ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

  ಬಡವರ ಯಾವ ವಸ್ತುವನ್ನು ಬೇಕಾದರೂ ಖರೀದಿಸಿ ಅವರ ಮೇಲೆ ಕೇಂದ್ರ ಸರ್ಕಾರ ಶೇ 18 ತೆರಿಗೆ ವಿಧಿಸುತ್ತಿದೆ, ಆದರೇ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ಗಳನ್ನು ತೆರೆದು 5 ರು.ಗೆ ತಿಂಡಿ, 10 ರು.ಗೆ ಊಟ ನೀಡುತ್ತಿದೆ. ಹೊರಗೆ ಇದೇ ತಿಂಡಿಯನ್ನು ತಿನ್ನಬೇಕಾದರೇ ಎರಡರಷ್ಟು ಬೆಲೆ ಅದರ ಮೇಲೆ ಶೇ 18 ತೆರಿಗೆ ಬೇರೆ ನೀಡಬೇಕು, ಇದೇ ಮೋದಿ ಮತ್ತು ಸಿದ್ದರಾಮಯ್ಯ ಸರ್ಕಾರಕ್ಕಿರುವ ವ್ಯತ್ಯಾಸ ಎಂದು ಅವರು ಹೇಳಿದರು.

   ಕೇಂದ್ರಸರ್ಕಾರದ ನೋಟು ಅಪನಗದೀಕರಣನವಾಗಿ ಒಂದು ವರ್ಷವೇ ಕಳೆದರೂ, ಅದರ ದುಷ್ಪರಿಣಾಮದಿಂದ ದೇಶ ಇನ್ನೂ ಚೇತರಿಸಿಕೊಂಡಿಲ್ಲ. ಇದೇ ಕಾರಣಕ್ಕೆ 150 ಮಂದಿ ಮೃತಪಟ್ಟಿದ್ದಾರೆ. ಆದರೂ ಮೋದಿ ಅಚ್ಚೇ ದಿನ್ ಬರುತ್ತದೆ ಎನ್ನುತ್ತಿದ್ದಾರೆ. ನೋಟು ಅಪನಗದೀಕರಣ ಮಾಡಿ ಕಪ್ಪುಹಣ ಹೊಂದಿರುವವರನ್ನು ಹಿಡಿಯುತ್ತೇವೆ ಎಂದರು. ಆದರೇ ಒಂದು ವರ್ಷದಲ್ಲಿ ಕಪ್ಪುಹಣ ಹೊಂದಿದ್ದ ಒಬ್ಬನೇ ಒಬ್ಬ ವ್ಯಕ್ತಿಯನ್ನು ಹಿಡಿದದ್ದನ್ನು ತೋರಿಸಲಿ ಎಂದವರು ಸವಾಲು ಹಾಕಿದರು.

  ಮೋದಿ ಹೇಳಿದ ಅಚ್ಚೆ ದಿನ್ ಅಂಬಾನಿಗೆ ಬಂದಿದೆ, ಅದಾನಿಗೆ ಬಂದಿದೆ, ಆದರೇ ಜನಸಾಮಾನ್ಯರಿಗೆ ಬಂದಿಲ್ಲ, ಕಳೆದ ಕೆಲವು ದಿನಗಳಲ್ಲಿ ಗ್ಯಾಸ್ ಬೆಲೆ ಒಂದೇ ಏಟಿಗೆ 94 ರು.ಗಳಿಗೇರಿದೆ. ಇದು ಮೋದಿ ಹೇಳಿದ ಅಚ್ಚೆ ದಿನ್. ಒಂದು ವೇಳೆ ಕಾಂಗ್ರೆಸ್ ಸರ್ಕಾರ ಇದನ್ನು ಮಾಡಿದ್ದರೇ ಬಿಜೆಪಿಯವರು ಸುಮ್ಮನೇ ಬಿಡುತ್ತಿದ್ದರೇ ಎಂದು ಅವರು ಪ್ರಶ್ನಿಸಿದರು.

   ಮೋದಿ ಸರ್ಕಾರ ಕೆಲಸ ಕಡಿಮೆ ಮಾಡಿ, ಹೆಚ್ಚು ಪ್ರಚಾರದಲ್ಲಿ ತೊಡಗಿದೆ, ಆದರೇ ಸಿದ್ಧರಾಮಯ್ಯ ಸರ್ಕಾರ  ಪ್ರಚಾರ ಇಲ್ಲದೇ ಹೆಚ್ಚು ಕೆಲಸ ಮಾಡಿ ಹೆಚ್ಚು ಜನರನ್ನು ತಲುಪಿದೆ. ಈಗ ಕ್ರಿಯೆಯೇ ಪ್ರತಿಕ್ರಿಯೆ ಕೊಡುವ ಕಾಲ ಬಂದಿದೆ. ಮೋದಿ ಸರ್ಕಾರದ ವಿಫಲತೆಯನ್ನು ಮತ್ತು ಸಿದ್ಧರಾಮಯ್ಯ ಸರ್ಕಾರದ ಸಫಲತೆಯನ್ನು ಮನೆಮನೆಗೆ ತಲುಪಿಬೇಕಾಗಿದೆ ಎಂದು ಕರೆ ನೀಡಿದರು.

  ಬಿ.ಜೆ.ಪಿ.ಯವರು ರಾಜ್ಯದಲ್ಲಿ ಪರಿವರ್ತನಾ ರಥಯಾತ್ರೆ ಮಾಡುತ್ತಿದ್ದಾರೆ, ಯಾವುದೇ ಯಾತ್ರೆ ಮಾಡುವುದಕ್ಕೆ ಅವರಿಗೆ ಹಕ್ಕಿದೆ, ಮಾಡಲಿ, ಆದರೇ ರಾಜ್ಯದಲ್ಲಿ ಪುನಃ ಕಾಂಗ್ರೆಸ್ ಅರಾಮವಾಗಿ ಅಧಿಕಾರಕ್ಕೆ ಬರುತ್ತದೆ. ಇದಕ್ಕೆ ಪಕ್ಷದ ಕಾರ್ಯಕರ್ತರು ಸರ್ಕಾರದ ಮತ್ತು ಮತದಾರರ ನಡುವೆ ಕೊಂಡಿಯಾಗಿ ಕೆಲಸ ಮಾಡಿ ಎಂದವರು ಸಲಹೆ ಮಾಡಿದರು.

ಹಿಂದೆ ರಾಜ್ಯದಲ್ಲಿ ಬಿ.ಜೆ.ಪಿ. ಸರ್ಕಾರ ಇದ್ದಾಗ, ಇದೇ ಬಿಜೆಪಿ ನಾಯಕರು ಸಂಭ್ರಮದಿಂದ ಟಿಪ್ಪು ಜಯಂತಿಯನ್ನು ಆಚರಿಸಿದ್ದರು, ಆತನನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಹಾಡಿ ಹೊಗಳಿದ್ದರು. ಆದರೇ ಈಗ ಇದ್ದಕ್ಕಿದ್ದಂತೆ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎನ್ನುತ್ತಿದ್ದಾರೆ, ಟಿಪ್ಪು ಜಯಂತಿಯನ್ನು ಆಚರಿಸುವುದಕ್ಕೆ ಬಿಡುದಿಲ್ಲ ಎನ್ನುತ್ತಿದ್ದಾರೆ. ಯಾಕೆಂದರೇ ಬಿ.ಜೆ.ಪಿ.ಯವರಿಗೆ ರಾಜ್ಯದಲ್ಲಿ ಈಗ ಗಲಾಟೆ ಆಗಬೇಕಾಗಿದೆ, ಆ ಮೂಲಕ ಓಟು ಗಳಿಸಬೇಕಾಗಿದೆ. ಆದರೇ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂದು ಸತ್ಯ ಹೇಳಿ ಬಿಜೆಪಿಯ ಸುಳ್ಳನ್ನು ಬಯಲು ಮಾಡಿದ್ದಾರೆ ಎಂದು ವೇಣುಗೋಪಾಲ್ ಲೇವಡಿ ಮಾಡಿದರು.

  ಇದೇ ಸಂದರ್ಭದಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರಿರುವ ಕುಂದಾಪುರ ಮತ್ತು ಕಾರ್ಕಳ ಕ್ಷೇತ್ರಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ ಎಂಬ ನೋವು ಜನರಲ್ಲಿದೆ. ಮುಂದಿನ ಬಾರಿ ಈ ಕ್ಷೇತ್ರಗಳನ್ನೂ ಗೆದ್ದು ಜನರ ನೋವು ನಿವಾರಿಸಲಾಗುವುದು ಎಂದರು.

  ಸಭೆಯಲ್ಲಿ ಉಡುಪಿ ಕಾಂಗ್ರೆಸ್ ವರಿಷ್ಠ ನಾಯಕ ಆಸ್ಕರ್ ಫೆರ್ನಾಂಡಿಸ್, ಕಾಪು ಶಾಸಕ ವಿನಯಕುಮಾರ್ ಸೊರಕೆ, ಬೈಂದೂರು ಶಾಸಕ ಗೋಪಾಲ ಪೂಜಾರಿ, ಕಾರ್ಕಳದ ಮಾಜಿ ಶಾಸಕ ಗೋಪಾಲ ಪೂಜಾರಿ, ಉಡುಪಿ ಜಿಲ್ಲಾ ಉಸ್ತುವಾರಿ ವಿಷ್ಣುನಾದ್, ವಿ.ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಮುಂತಾದವರಿದ್ದರು.

 


Spread the love

Exit mobile version