ಜೀವನ ಶಿಕ್ಷಣಕ್ಕೆ ಸ್ಕೌಟ್ಸ್ ಪೂರಕ -ಪ್ರಮೋದ್ ಮದ್ವರಾಜ್

Spread the love

ಜೀವನ ಶಿಕ್ಷಣಕ್ಕೆ ಸ್ಕೌಟ್ಸ್ ಪೂರಕ -ಪ್ರಮೋದ್ ಮದ್ವರಾಜ್

ಉಡುಪಿ: ವಿದ್ಯಾರ್ಥಿ ಜೀವನದಲ್ಲಿ ಬರೇ ಪುಸ್ತಕದಲ್ಲಿ ಓದಿದ್ದು ಜೀವನ ಶಿಕ್ಷಣವಾಗದು ; ಸ್ಕೌಟ್ಸ್‍ನಂತಹ ಸಂಘಟನೆಗಳಲ್ಲಿ ಪಾಲ್ಗೊಂಡು ಜೀವನ ಶಿಕ್ಷಣವನ್ನು ಪಡೆಯುವುದೇ ನಿಜವಾದ ಶಿಕ್ಷಣ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಅವರು ಹೇಳಿದರು.

ಡಾ.ವಿ.ಎಸ್ ಆಚಾರ್ಯ ಜಿಲ್ಲಾ ತರಬೇತಿ ಕೆಂದ್ರ ಪ್ರಗತಿ ನಗರ ಅಲೆವೂರು ಇಲ್ಲಿ ಭಾರತ್ ಸ್ಕೌಟ್ಸ್ ಮತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ಹಾಗೂ ಜಿಲ್ಲಾ ಸಂಸ್ಥೆ ಉಡುಪಿ ಇವರ ಆಶ್ರಯದಲ್ಲಿ ಆಯೋಜಿಸಿರುವ ವಿಭಾಗ ಮಟ್ಟದ ರಾಷ್ಟ್ರಪತಿ ಪೂರ್ವಸಿದ್ಧತಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.

ವಿದ್ಯಾರ್ಥಿಗಳು ತಮ್ಮ ಶಾಲಾ ಕಾಲೇಜು ದಿನಗಳಲ್ಲಿ ಸ್ಕೌಟ್ಸ್ ಗೈಡ್ಸ್, ಎನ್.ಎಸ್.ಎಸ್, ಎನ್.ಸಿ.ಸಿ ಯಂತಹ ಜೀವನ್ಮುಖಿ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಸಾಮಾಜಿಕವಾಗಿ ಬದುಕಲು ಕಲಿಯುತ್ತಾರೆ,. ಇಂತಹ ಕಾರ್ಯಕ್ರಮದಲ್ಲಿ ಅವರಿಗೆ ನಿಜವಾದ ಜೀವನ ಶಿಕ್ಷಣ ಲಭಿಸುತ್ತದೆ. ಈ ಸಂಸ್ಥೆಯ ಅಭಿವೃದ್ಧಿಗೆ ಡಾ.ವಿ.ಎಸ್ ಆಚಾರ್ಯ ಹಾಗೂ ತಮ್ಮ ತಂದೆಯವರಾದ ಮಧ್ವರಾಜ್ ನೀಡಿರುವ ಕೊಡುಗೆಯನ್ನು ಸ್ಮರಿಸಿದ ಅವರು ಸಂಸ್ಥೆಯ ಅಭಿವೃದ್ಧಿಗೆ ಯುವಸಬಲೀಕರಣ ಇಲಾಖೆಯಿಂದಲೂ ನೆರವು ನೀಡುವುದಾಗಿ ಘೋಷಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಶಾಂತ ವಿ ಆಚಾರ್ಯ ಮಾತನಾಡಿ, ಶಿಸ್ತು, ಸಮಯಪ್ರಜ್ಞೆ, ಪರೋಪಕಾರಿ ಮನೋಭಾವನೆಗಳನ್ನು ಸ್ಕೌಟ್ಸ್ ಕಲಿಸುತ್ತದೆ ಎಂದು ಹೇಳಿದರು.

ರಾಜ್ಯ ಸಂಘಟನಾ ಆಯುಕ್ತ ಪ್ರಭಾಕರ ಭಟ್, ಜಿಲ್ಲಾ ಸ್ಕೌಟ್ಸ್ ಆಯುಕ್ತರಾದ ಎಡ್ವಿನ್ ಆಳ್ವ, ಶಿಬಿರದ ನಾಯಕರಾದ ಶಾಂತರಾಮ ಪ್ರಭು, ಕಾಮಾಕ್ಷಿ ಉಪಸ್ಥಿತರಿದ್ದರು.

5 ದಿನಗಳ ಕಾಲ ನಡೆದ ಶಿಬಿರದಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರಕನ್ನಡ, ಶಿವಮೊಗ್ಗ, ಕಾರವಾರ, ಹಾಸನದ ಒಟ್ಟು 330 ವಿದ್ಯಾರ್ಥಿಗಳು ಹಾಗೂ 40 ಸಿಬ್ಬಂದಿಗಳು ಭಾಗವಹಿಸಿದ್ದರು.

ಡಾ.ಜಯರಾಮ್ ಶೆಟ್ಟಿಗಾರ್ ಸ್ವಾಗತಿಸಿ, ಪ್ರಭಾಕರ ಭಟ್ ವಂದಿಸಿದರು. ಆನಂದ ಅಡಿಗ ಕಾರ್ಯಕ್ರಮ ನಿರ್ವಹಿಸಿದರು.


Spread the love