ಜುಲೈ ಕೊನೆಯ ವಾರದೊಳಗೆ ಪಂಪ್ ವೆಲ್ ಫ್ಲೈ ಓವರ್ ಕಾಮಗಾರಿ ಪೂರ್ಣ – ನಳಿನ್ ಕುಮಾರ್ ಕಟೀಲ್
ಮಂಗಳೂರು: ಪಂಪ್ವೆಲ್ ಫ್ಲೈಓವರ್ನ ಕಾಮಗಾರಿ ಜುಲೈ ಕೊನೆಯ ವಾರದಲ್ಲಿ ಪೂರ್ಣಗೊಳ್ಳಲಿದ್ದು, ಲೋಕಾರ್ಪಣೆ ಆಗಲಿದೆ ಎಂದು ಸಂಸದ ನಳಿನ್ಕುಮಾರ್ ಕಟೀಲ್ ಹೇಳಿದರು.
ನಗರದ ಪಂಪ್ವೆಲ್ ಫ್ಲೈಓವರ್ ಕಾಮಗಾರಿಯನ್ನು ಬುಧವಾರ ಸಂಜೆ ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮಳೆಗಾಲದಲ್ಲಿಯೂ ಕಾಮಗಾರಿ ನಡೆಯಲಿದೆ. ತೊಕ್ಕೊಟ್ಟು ಮತ್ತು ಪಂಪ್ವೆಲ್ ಫ್ಲೈಓವರ್ಗಳಲ್ಲಿ ನೀರು ನಿಂತು, ಕೃತಕ ನೆರೆ ಉಂಟಾಗುವುದನ್ನು ತಪ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪಂಪ್ವೆಲ್ ಫ್ಲೈಓವರ್ನ ಎತ್ತರದಲ್ಲಿ ಯಾವುದೇ ರಾಜಿ ಇಲ್ಲ. ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ 5.5 ಮೀಟರ್ ಎತ್ತರ ಇರಲಿದೆ ಎಂದು ಸ್ಪಷ್ಟಪಡಿಸಿದರು.
ತಾಂತ್ರಿಕ ದೋಷಗಳಿಂದಾಗಿ ವಿಳಂಬವಾಗಿದ್ದ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ಶೇ 98 ಪೂರ್ಣಗೊಂಡಿದೆ. ಉಳಿದ ಕಾಮಗಾರಿ ಶೀಘ್ರವೇ ಪೂರ್ಣಗೊಂಡು ಜೂನ್ 10 ರಂದು ಜನರ ಸೇವೆಗೆ ಸಮರ್ಪಣೆ ಮಾಡಲಾಗುತ್ತದೆ. ವಾಹನ ಸಂಚಾರಕ್ಕೆ ನಾನೇ ನಿಂತು ಹಸಿರು ನಿಶಾನೆ ನೀಡುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ತೊಕ್ಕೊಟ್ಟು ಭರದಿಂದ ಸಾಗಿರುವ ಫ್ಲೈಓವರ್ ಕಾಮಗಾರಿ ಲೋಪ, ಅಡೆತಡೆಗಳು ಹಾಗೂ ಕಳಪೆಯಾಗಿದ್ದಲ್ಲಿ ವೀಕ್ಷಿಸಲು ಬುಧವಾರ ಭೇಟಿ ನೀಡಿದ ಸಂದರು ಸ್ಥಳೀಯರಿಂದ ಅಭಿಪ್ರಾಯ ಪಡೆದುಕೊಂಡರು.
ತಾಂತ್ರಿಕ ಅಡಚಣೆಗಳಿಂದಾಗಿ ಫ್ಲೈಓವರ್ ಕಾಮಗಾರಿ ವಿಳಂಬವಾಗಿದೆ. ಕೇಂದ್ರ ಮಂತ್ರಿ ನಿತಿನ್ ನಿತಿನ್ ಗಡ್ಕರಿ ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆಯಲಾಗಿ ವಿಳಂಬವಾಗಿದ್ದ ಕಾಮಗಾರಿಗೆ ವೇಗ ಕೊಡುವ ಕೆಲಸವಾಗಿತ್ತು. ಆದರೆ ನೀತಿ ಸಂಹಿತೆ ಜಾರಿಯಿಂದಾಗಿ ಸಭೆಯನ್ನು ಮುಂದುವರಿಸಲು ಅಸಾಧ್ಯವಾಯಿತು. ಇದೀಗ ಚುನಾವಣಾ ಮುಗಿದು ನೀತಿ ಸಂಹಿತೆ ಮುಗಿದ ಹಿನ್ನೆಲೆಯಲ್ಲಿ ವೀಕ್ಷಣೆ ಮಾಡುವ ನಿಟ್ಟಿನಲ್ಲಿ ಈಗ ಭೇಟಿಯಾಗಿದೆ. ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ಶೇ 98 ಮುಗಿದಿದೆ. ಇನ್ನು ಶೇ 2 ಬಾಕಿಯಿದೆ. ಈ ಹಿಂದೆ ಹಣದ ಅಡಚಣೆ ಉಂಟಾದಾಗ ₹ 55 ಕೋಟಿ ಹೆಚ್ಚುವರಿ ಅನುದಾನವನ್ನು ಬ್ಯಾಂಕ್ ಮೂಲಕ ಬಿಡುಗಡೆಗೊಳಿಸಲಾಗಿತ್ತು. ಮೂರನೇ ಬಾರಿ ಲೋಕಸಭಾ ಸದಸ್ಯನಾಗಿ ಆಯ್ಕೆಗೊಂಡು ಮೊದಲ ಕಾಮಗಾರಿ ತೊಕ್ಕೊಟ್ಟು ಫ್ಲೈಓವರ್ ಪೂರ್ಣಗೊಂಡಿದೆ. ಮುಂದೆ ಯಾವುದೇ ಕಾಮಗಾರಿಗಳು ನಿಲ್ಲದಂತೆ ಹಾಗೂ ವಿಳಂಬವಾಗದಂತೆ ಕಾರ್ಯಾಚರಿಸುವುದಾಗಿ ತಿಳಿಸಿದರು.
ಕೂಡಲೇ ಪಂಪ್ ವೆಲ್ ಕಾಮಗಾರಿಯನ್ನು ನವಯುಗ ಸಂಸ್ಥೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮುಗಿಸುವ ವಿಶ್ವಾಸವಿದೆ. ಮಳೆಗಾಲ ಆರಂಭವಾಗುವ ಸಮಯವಾಗಿರುವುದರಿಂದ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಣ್ಣಪುಟ್ಟ ಕೆಲಸ ಸರಿಪಡಿಸುವಂತೆ ನವಯುಗ ಅಧಿಕಾರಿಗಳಿಗೆ ಸೂಚಿಸಿದರು.
ತಡವಾಗಿಯಾದರೂ ನವಯುಗ ಸಂಸ್ಥೆ ಹಾಗೂ ಅಧಿಕಾರಿಗಳು ಕಾಮಗಾರಿ ಮುಗಿಸಿದ್ದಾರೆ. ಅದರಂತೆ ಪಂಪ್ವೆಲ್ ಫ್ಲೈಓವರ್ ಕಾಮಗಾರಿಯನ್ನು ಮುಗಿಸಬೇಕೆಂದರು. ಜನರಿಂದ ಸಮಸ್ಯೆಗಳನ್ನು ಆಲಿಸಿ ಅದನ್ನು ಅಧಿಕಾರಿಗಳು ಪರಿಹರಿಸಬೇಕಿದೆ. ಮಳೆಗಾಲದ ಸಮಯವಾಗಿರುವುದರಿಂದ ಹಲವೆಡೆ ಸಮಸ್ಯೆಗಳಿರುವುದರಿಂದ ಕೇಂದ್ರದ ಮಂತ್ರಿಗಳು ಬರಲು ಅಸಾಧ್ಯ. ಈ ನಿಟ್ಟಿನಲ್ಲಿ ತಾವೇ ನಿಂತು ಲೋಕಾರ್ಪಣೆ ನಡೆಸುವುದಾಗಿ ತಿಳಿಸಿದರು.
ಜತೆಗೆ ಸರ್ವಿಸ್ ರಸ್ತೆಗಳ ವಿಸ್ತರಣೆ ಪ್ರಕ್ರಿಯೆಯೂ ಫ್ಲೈಓವರ್ ನಲ್ಲಿ ವಾಹನ ಬಿಟ್ಟುಕೊಟ್ಟ ನಂತರ ಆರಂಭಿಸಲಾಗುವುದು. ಈಗಲೇ ಅದಕ್ಕೂ ಕೈಹಾಕಿದಲ್ಲಿ ವಾಹನ ದಟ್ಟಣೆ ಹೆಚ್ಚಿರುವುದರಿಂದ ಅಡ್ಡಿಯಾಗಲಿದೆ ಎಂದರು.