Home Mangalorean News Kannada News ಜುಲೈ 17ರಂದು ಪಿಲಿಕುಳದ ಮತ್ಯೋತ್ಸವ ಮತ್ತು ಕ್ಷೇತ್ರೋತ್ಸವ

ಜುಲೈ 17ರಂದು ಪಿಲಿಕುಳದ ಮತ್ಯೋತ್ಸವ ಮತ್ತು ಕ್ಷೇತ್ರೋತ್ಸವ

Spread the love

ಜುಲೈ 17ರಂದು ಪಿಲಿಕುಳದ ಮತ್ಯೋತ್ಸವ ಮತ್ತು ಕ್ಷೇತ್ರೋತ್ಸವ

ಮಂಗಳೂರು: ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಲೇಕ್ ಗಾರ್ಡನ್‍ನಲ್ಲಿ ಜುಲೈ 17 ಭಾನುವಾರದಂದು ಕರ್ನಾಟಕ ಸರಕಾರದ ಮೀನುಗಾರಿಕಾ ಇಲಾಖೆ , ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ಮತ್ತು ಪಿಲಿಕುಳ ನಿಸರ್ಗಧಾಮದ ಆಶ್ರಯದಲ್ಲಿ ಪಿಲಿಕುಳ ಮತ್ಯೋತ್ಸವ ಮತ್ತು ಕ್ಷೇತ್ರೋತ್ಸವ ಕಾರ್ಯಕ್ರಮವು ನಡೆಯಲಿದೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಆ ದಿನ ಬೆಳಿಗ್ಗೆ 10.00 ಗಂಟೆಗೆ ಕರ್ನಾಟಕ ಸರಕಾರದ ಮೀನುಗಾರಿಕಾ ಸಚಿವರಾದ ಪ್ರಮೋದ್ ಮಧ್ವರಾಜ್ ರವರು ನೆರವೇರಿಸಲಿರುವರು.ಇದೇ ಸಂದರ್ಭದಲ್ಲಿ ಕೆರೆಯಲ್ಲಿ ಮೀನು ಮರಿಗಳನ್ನು ಬಿಡುವ ಕಾರ್ಯಕ್ರಮವು ಕೂಡಾ ನೆರವೇರಲಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಚಿವರು ಹಾಗೂ ಜನ ಪ್ರತಿನಿಧಿಗಳು ಕೂಡಾ ಉಪಸ್ಥಿತರಿರುವರು.

ಈ ಕಾರ್ಯಕ್ರಮವು ಜಿಲ್ಲೆಯ ಮೀನು ಪ್ರಿಯರಿಗೆ ಸುವರ್ಣಾವಕಾಶವಾಗಿದೆ. ಈ ಹಬ್ಬದ ಅಂಗವಾಗಿ ಪಿಲಿಕುಳದ ಲೇಕ್ ಗಾರ್ಡನ್ ನ ಕೆರೆಯಲ್ಲಿ ಬೆಳೆಸಿದ ಕಾಟ್ಲಾ, ರೋಹು, ಸಾಮಾನ್ಯ ಗೆಂಡೆ ಹಾಗೂ ಇತರೆ ಮೀನುಗಳನ್ನು ಹಿಡಿದು, ಮುಗಿಯುವ ತನಕ ಸಾರ್ವಜನಿಕ ಹರಾಜು ಮಾಡಲಾಗುವುದು.

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದಿಂದ ಸಿಹಿ ನೀರಿನ ಮೀನುಗಳು , ಪಾಂಪ್ಲೆಟ್, ಅಂಜಲ್, ಬಂಗುಡೆ, ಸಿಗಡಿ, ಬೊಂಡಾಸು ಹಾಗೂ ಇನ್ನಿತರ ತಾಜಾ ಮೀನು ಮತ್ತು ಮೌಲ್ಯವರ್ಧಿತ ಮೀನು ಉತ್ಪನ್ನಗಳ ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ತಾಜಾ ಸಮುದ್ರ ಮೀನುಗಳ ಫ್ರೈ, ಫಿಶ್ ಮಸಾಲಾ, ಫಿಶ್ ಕಬಾಬ್ ಹಾಗೂ ಇನ್ನಿತರ ಮೀನಿನ ಖಾದ್ಯಗಳನ್ನು ಶುಚಿ ರುಚಿಯಾಗಿ ಸ್ಥಳದಲ್ಲೇ ತಯಾರಿಸಿ ಮಾರಾಟ ಮಾಡಲಾಗುವುದು.

ವಿವಿಧ ರೀತಿಯ ಮೀನುಮರಿಗಳ ಮತ್ತು ಒಣ ಮೀನುಗಳ ಪ್ರದರ್ಶನ ಮತ್ತು ಮಾರಾಟ , ಮೀನುಗಾರಿಕಾ ಮಹಾವಿದ್ಯಾಲಯದಿಂದ ಮೀನುಗಾರಿಕೆ ಕುರಿತು ಅರಿವು ಮೂಡಿಸುವುದು ಮತ್ತು ಅಲಂಕಾರಿಕಾ ಮೀನುಗಳ ಪ್ರದರ್ಶನ ಮತ್ತು ಮಾರಾಟ ಕೂಡಾ ಇದೆ.

ದಿನವಿಡೀ ನಡೆಯುವ ಈ ಕಾರ್ಯಕ್ರಮದಲ್ಲಿ ಮೀನುಗಾರಿಕಾ ಮಹಾವಿದ್ಯಾಲಯ ಮಂಗಳೂರು ಮತ್ತು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ವೈವಿಧ್ಯಮಯ ಕಾರ್ಯಕ್ರಮಗಳು ಕೂಡಾ ನಡೆಯಲಿದೆ.


Spread the love

Exit mobile version