ಜುಲೈ 28:   ‘ಡೆಂಗ್ಯೂ ಡ್ರೈವ್ ಡೇ’ : ನಿಮ್ಮ ಮನೆ ಸುತ್ತಮುತ್ತ ಸ್ವಚ್ಛಗೊಳಿಸಿ

Spread the love

ಜುಲೈ 28:   ‘ಡೆಂಗ್ಯೂ ಡ್ರೈವ್ ಡೇ’ : ನಿಮ್ಮ ಮನೆ ಸುತ್ತಮುತ್ತ ಸ್ವಚ್ಛಗೊಳಿಸಿ

ಮಂಗಳೂರು:  ಜಿಲ್ಲೆಯಲ್ಲಿ ಡೆಂಗ್ಯೂ ಹಾಗೂ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ವಿವಿಧ ಸಂಘ-ಸಂಸ್ಥೆ, ಮತ್ತು ಎನ್‍ಜಿಒ ಗಳ ಸಹಯೋಗದಲ್ಲಿ ಸೇರಿ ಜುಲೈ 28 ಭಾನುವಾರ ದಂದು ‘ಡೆಂಗ್ಯೂ ಡ್ರೈವ್ ಡೇ’ ಅಭಿಯಾನ ನಡೆಯಲಿದೆ.

ಡೆಂಗ್ಯೂ ನಿರ್ಮೂಲನೆಗೆ ಈಗಾಗಲೇ ಜಿಲ್ಲಾಡಳಿತ, ಮಹಾನಗರಪಾಲಿಕೆ, ಸಂಘ-ಸಂಸ್ಥೆಗಳು, ಮತ್ತು ಹಲವು ಎನ್‍ಜಿಒ ಸಾಂಕ್ರಾಮಿಕ ಡೆಂಗ್ಯೂ ಕುರಿತು ಜಾಗೃತಿ ಮೂಡಿಸುತ್ತಿವೆ. ಇದರ ಮುಂದುವರೆದ ಭಾಗವಾಗಿ ‘ಡೆಂಗ್ಯೂ ಡ್ರೈವ್ ಡೇ’ ಕಾರ್ಯಕ್ರಮ ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ನಡೆಯಲಿದೆ. ಅಭಿಯಾನ ಕಾರ್ಯಕ್ರಮದ ಪ್ರಯುಕ್ತ ಜಿಲ್ಲೆಯಾದ್ಯಂತ ಪ್ರತಿ ಮನೆ, ಫ್ಲಾಟ್-ಅಪಾರ್ಟ್‍ಮೆಂಟ್, ವಸತಿ ಸಂಕೀರ್ಣ, ಮಳಿಗೆ, ಆಸ್ಪತ್ರೆಗಳು, ಸಂಘ ಸಂಸ್ಥೆಗಳ ಕಟ್ಟಡ, ಸಾರ್ವಜನಿಕ ಸ್ಥಳಗಳು ಸೇರಿದಂತೆ ಪ್ರತಿಯೊಂದು ಸ್ಥಳಗಳಲ್ಲಿಯೂ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗಿದೆ.

‘ಡೆಂಗ್ಯೂ ಡ್ರೈವ್ ಡೇ’ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧಿಕಾರಿಗಳು, ಮಹಾನಗರ ಪಾಲಿಕೆ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ಎನ್‍ಜಿಒ ಸಂಸ್ಥೆಗಳು, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಸ್ವಯಂಸೇವಾ ಸಂಸ್ಥೆಗಳು, ಮತ್ತಿತರ ಸಂಘ ಸಂಸ್ಥೆಗಳು, ಪಾಲ್ಗೊಳ್ಳಲಿವೆ.

ಅಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಪಂಚಾಯತ್ ಕಚೇರಿ ಸಮೀಪ ವಸತಿಗೃಹದಲ್ಲಿ ಅಭಿಯಾನ ಆರಂಭಗೊಳ್ಳಲಿದೆ. ಸಾರ್ವಜನಿಕರು ತಮ್ಮ ಮನೆ ಸುತ್ತಮುತ್ತ, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯಲ್ಲಿ ನೀರು ನಿಲ್ಲದಂತೆ ಹಾಗೂ ಸ್ವಚ್ಛಗೊಳಿಸಿ ಈ ಅಭಿಯಾನದಲ್ಲಿ ಕೈಜೋಡಿಸಬೇಕು ಎಂದು ಪ್ರಕಟಣೆ ತಿಳಿಸಿದೆ.


Spread the love