ಜೂನ್ 3ಕ್ಕೆ ಭುವನೇಶ್ವರಿ ಹೆಗಡೆ ಅಭಿನಂದನಾ ಸಮಾರಂಭ-ಬನಸಿರಿ
ಮಂಗಳೂರು: ಮಂಗಳೂರು ವಿಶ್ವ ವಿದ್ಯಾಲಯ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಿಕೆ ಹುದ್ದೆಯಿಂದ ನಿವೃತ್ತರಾಗುತ್ತಿರುವ ಕನ್ನಡದ ಖ್ಯಾತ ಹಾಸ್ಯ ಲೇಖಕಿ ಶ್ರೀಮತಿ ಭುವನೇಶ್ವರಿ ಹೆಗಡೆಯವರನ್ನು ಸಾರ್ವಜನಿಕವಾಗಿ ಅಭಿನಂದಿಸುವ ಕಾರ್ಯಕ್ರಮ ‘ಬನಸಿರಿ’ಯನ್ನು ಜೂನ್ 3, ಶನಿವಾರ ಸಂಜೆ ಘಂಟೆ 4.00ರಿಂದ ಮಂಗಳೂರಿನ ಲಯನ್ಸ್ ಸೇವಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಭುವನೇಶ್ವರಿ ಹೆಗಡೆಯವರ ಅಭಿಮಾನಿಗಳು, ವಿದ್ಯಾರ್ಥಿಗಳು, ಸಾರಸ್ವತ ಲೋಕದ ಸ್ನೇಹಿತರು, ಬಂಧುಗಳು ಹಾಗೂ ಸಾರ್ವಜನಿಕರು ಈ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿದ್ದು, ಖ್ಯಾತ ಸಾಹಿತಿ ಡಾ.ವೈದೇಹಿಯವರ ಅಧ್ಯಕ್ಷತೆಯಲ್ಲಿ ‘ಬನಸಿರಿ’ ಜರುಗಲಿದೆ. ನಾಡಿನ ಖ್ಯಾತನಾಮರು ಭುವನೇಶ್ವರಿ ಹೆಗಡೆಯವರ ಬಗ್ಗೆ ಬರೆದಿರುವ ಲೇಖನ-ಬರಹಗಳ ಸಂಕಲನದ ಅಭಿನಂದನಾ ಗ್ರಂಥ ‘ಬನಸಿರಿ’ಯನ್ನು ಇದೇ ಸಂದರ್ಭದಲ್ಲಿ ಬೆಂಗಳೂರಿನ ಅಪರಂಜಿ ಪತ್ರಿಕೆಯ ಸಂಪಾದಕರಾದ ಎಂ ಶಿವಕುಮಾರ್ ಅವರು ಬಿಡುಗಡೆಗೊಳಿಸಲಿದ್ದು, ಹಿರಿಯ ಲೇಖಕಿ ಚಂದ್ರಕಲಾ ನಂದಾವರ ಹಾಗೂ ಮಂಗಳೂರು ವಿವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಸತ್ಯನಾರಾಯಣ ಮಲ್ಲಿಪಟ್ಣ ಅವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಕಾಂಚನಾ ಹುಂಡೈನ ಆಡಳಿತ ನಿರ್ದೇಶಕ ಪ್ರಸಾದ್ ರಾಜ್ ಕಾಂಚನ್ ಶುಭಾಶಂಸನೆ ಮಾಡಲಿದ್ದು, ‘ಬನಸಿರಿ’ಯ ಸಂಪಾದಕರಾದ ಎನ್ ರಾಮನಾಥ್ , ಅಭಿನಂದನಾ ಸಮಿತಿಯ ಅಧ್ಯಕ್ಷ ಅರೆಹೊಳೆ ಸದಾಶಿವ ರಾವ್, ಉಪಾಧ್ಯಕ್ಷ ರಾಘವೇಂದ್ರ ಬೆಟ್ಟಕೊಪ್ಪ, ಕಾರ್ಯದರ್ಶಿ ಡಾ.ಮುರಳೀ ಮೋಹನ ಚೂಂತಾರು, ಕೋಶಾಧಿಕಾರಿ ನಯನಾ ರಾವ್, ಸದಸ್ಯರಾದ ಶ್ರೀನಿವಾಸ ದೇಶಪಾಂಡೆ, ಶ್ರೀನಾಥ್ ಹೆಬ್ಬಾರ್, ಡಾ.ಮೀರಾ ಎಸ್, ಶಕುಂತಲಾ ಕಿಣಿ, ಅನಿತಾ ನರೇಶ್ ಮಂಚಿ ಹಾಗೂ ರಂಗನಾಥ್ ಉಪಸ್ಥಿತರಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.