ಮಂಗಳೂರು: ಇಂದು ಶ್ರೀಸಾಮಾನ್ಯನೊಬ್ಬನಿಗೆ ಜವಾಬ್ದಾರಿ ನೀಡಿದಾಗ ಯಾವ ರೀತಿ ಅಸಾಮಾನ್ಯ ಸಾಧನೆ ಮಾಡಿ ತೋರಿಸಿ ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಏನೆಂಬುದನ್ನು ಕಳೆದ 2 ವರ್ಷದಲ್ಲಿ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರಕಾರ ತೋರಿಸಿಕೊಟ್ಟಿದೆ ಎಂದು ದಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರಧಾನ ಮಂತ್ರಿಯವರನ್ನು ನೇರವಾಗಿ ಮಾತನಾಡುವಂತಹ ವಾತಾವರಣ ಸೃಷ್ಟಿಯಾಗಿದೆ. ಇದು ವಿಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಇಂದು ಜಗತ್ತು ಕೂಡ ಭಾರತವನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ. ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವಂತಾಗಿದೆ. ರೈಲ್ವೆ, ವಿದ್ಯುತ್, ರಕ್ಷಣೆ, ವಿದೇಶಾಂಗ, ಸಂಪರ್ಕ ಇತ್ಯಾದಿ ಕ್ಷೇತ್ರಗಳಲ್ಲಿ ಆಡಳಿತಾತ್ಮಕ ಧೃಢವಾದ ಬದಲಾವಣೆ ಪ್ರಗತಿಯ ಸಂಕೇತವಾಗುತ್ತಿದೆ. ಸ್ಥಿರತೆ, ಧೃಡತೆ ಎರಡು ವರ್ಷಗಳಲ್ಲಿ ಬಂದಿದೆ. ದೇಶದ ಜನತೆಗೆ ಇದು ಅನುಭವಕ್ಕೆ ಬರುತ್ತಿದೆ. ಇದು ವಿಪಕ್ಷಗಳನ್ನು ಗಲಿಬಿಲಿಗೊಳಿಸುತ್ತಿದೆ.
ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ದುರ್ಬಲಗೊಳಿಸಿದ ಕುಟುಂಬ ರಾಜಕಾರಣದ ನೆರಳಿನಲ್ಲಿ ದಾಸ್ಯ ಮನೋವೃತ್ತಿಯಲ್ಲಿರುವ ಕಾಂಗ್ರೇಸಿಗೆ ಕೇಂದ್ರ ಸರಕಾರದ 2 ವರ್ಷದ ಸಾಧನೆಗಳನ್ನು ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಅದಕ್ಕಾಗಿ ಅಪಪ್ರಚಾರದಲ್ಲಿ ತೊಡಗಿದ್ದಾರೆ. ನೀರಿನಿಂದ ಹೊರಗೆ ಬಿದ್ದ ಮೀನಿನ ಹಾಗೆ ಅಧಿಕಾರವಿಲ್ಲದೆ ನರಳಾಡುತ್ತಿದ್ದಾರೆ.
ದೇಶದಿಂದ ಕಾಂಗ್ರೇಸ್ ಮಾಯವಾಗುವ ಸೂಚನೆಗಳು ಈ ದೇಶದಲ್ಲಿ ನಡೆಯುತ್ತಿರುವ ಚುನಾವಣೆಗಳು ಸೂಚಿಸುತ್ತಿವೆ. ಹೀಗಾಗಿ ಜನರ ಗಮನ ಬೇರೆಡೆ ಸೆಳೆಯಲು ಕನ್ನಯ್ಯ, ಓವೈಸಿಯಂತವರಿಗೆ ಬೆಂಬಲ ನೀಡಿ ದೇಶದ ಅಭಿವೃದ್ಧಿ ಪಥದಿಂದ ಬೇರೆಡೆ ಸೆಳೆಯುವ ಪ್ರಯತ್ನ ಕಾಂಗ್ರೇಸ್ ಮಾಡುತ್ತಿದೆ.
ದಕ್ಷ ಹಾಗೂ ಪಾರದರ್ಶಕ ಆಡಳಿತ ನೀಡಿ ಎಲ್ಲಾ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸಿ ದೇಶವನ್ನು ಪರಮೋಚ್ಚ ಸ್ಥಾನಕ್ಕೆ ಕೊಂಡೊಯ್ಯುತ್ತಿರುವ ಈ ಸುಸಂದರ್ಭದಲ್ಲಿ ಮಂಗಳೂರಿನ ಪುರಭವನದಲ್ಲಿ ಜೂ. 8 ರಂದು ಬುಧವಾರ ಮಧ್ಯಾಹ್ನ 3 ಗಂಟೆಗೆ ಶಕ್ತಿಶಾಲಿ ಭಾರತಕ್ಕಾಗಿ ಬೃಹತ್ ಸಮಾವೇಶ ವಿಕಾಸಪರ್ವ ನಡೆಯಲಿದೆ.
ಕೇಂದ್ರ ವಾಣಿಜ್ಯ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ , ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹರಿಭಾಯಿ ಪಿ. ಚೌಧರಿ, ಸಾಂಸದ ನಳೀನ್ ಕುಮಾರ್ ಕಟೀಲು, ಎಸ್.ಸಿ.ಮೋರ್ಚಾ ಮಾಜಿ ರಾಷ್ಟ್ರೀಯ ಅಧ್ಯಕ್ಷ ದುಶ್ಯಂತ್ ಕುಮಾರ್ ಗೌತಮ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕರಾದ ಎಸ್.ಅಂಗಾರ, ಗಣೇಶ್ ಕಾರ್ನಿಕ್, ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲೆಯ ಮಾಜಿ ಶಾಸಕರುಗಳು ಹಾಗು ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.