ಜೂ 1 ರ ಬದಲು 8 ಕ್ಕೆ ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳು ತೆರೆಯಲಿವೆ –ಸಚಿವ ಕೋಟ ಶ್ರೀನಿವಾಸ ಪೂಜಾರಿ
ಉಡುಪಿ: ಕರ್ನಾಟಕ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳ ಸಹಿತ ಎಲ್ಲಾ ದೇವಸ್ಥಾನಗಳನ್ನು ತೆರೆದು ಭಕ್ತರಿಗೆ ಪೂಜೆ ಪುನಸ್ಕಾರ ಮತ್ತು ದರ್ಶನದ ಬಗ್ಗೆ ಅವಕಾಶ ಮಾಡಿಕೊಡುವ ದಿನಾಂಕವನ್ನು ಜೂನ್ 8 ಕ್ಕೆ ಮುಂದೂಡಲಾಗಿದೆ ಎಂದು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು
ಅವರು ಭಾನುವಾರ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಈ ಮೊದಲು ಜೂನ್ 1ಕ್ಕೆ ತೆರೆಯಬೇಕೆಂದು ನಿರ್ಧರಿಸಲಾಗಿದ್ದರೂ, ಕೇಂದ್ರ ಸರ್ಕಾರ ನೀಡಿರುವ ನೂತನ ಮಾರ್ಗಸೂಚಿಯ ಮೇರೆಗೆ ಜೂನ್ 8 ಕ್ಕೆ ಮುಂದೂಡಲಾಗಿದ್ದು, ಎಲ್ಲಾ ಭಕ್ತರು ಸಹಕರಿಸಬೇಕಾಗಿ ತಿಳಿಸಿದ್ದಾರೆ.
8 ನೇ ತಾರೀಕಿನಂದು ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ದೇವಸ್ಥಾನಗಳನ್ನು ತೆರೆಯಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇಲಾಖಾ ಅಧಿಕಾರಿಗಳಿಗೆ ಮಾರ್ಗಸೂಚಿ ತಯಾರಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಗರ್ಭಗುಡಿಯೊಳಗೆ ಅರ್ಚಕರಿಗೆ ಮಾತ್ರ ಪ್ರವೇಶವಿದ್ದು ಭಕ್ತರಿಗೆ ಗರ್ಭಗುಡಿಯ ಒಳಗೆ ಹೋಗಿ ಮುಟ್ಟಿ ಪೂಜೆ ಮಾಡುವ ಅವಕಾಶ ಇಲ್ಲ. ಖಾಸಗಿ ದೇವಾಲಯ, ಮಠ ತೆರೆಯುವುದು ಅವರ ವಿವೇಚನೆಗೆ ಬಿಟ್ಟ ವಿಚಾರ. ದೇವಾಲಯಗಳಲ್ಲಿ ಗಂಧ, ಕುಂಕುಮ ನೀಡಲಾಗುವುದು. ತೀರ್ಥ ಪ್ರಸಾದ ನೀಡುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದರು.
ಈಗಾಗಲೇ ಕೇಂದ್ರ ಸರಕಾರ ಜೂನ್ 8 ಬಳಿಕ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಿದ್ದು ಅದರಂತೆ ಎಲ್ಲಾ ಧರ್ಮದವರ ಧಾರ್ಮಿಕ ಕೇಂದ್ರಗಳು ಕೂಡ ತೆರೆಯಲಿವೆ. ಈ ಕುರಿತು ಈಗಾಗಲೇ ಮುಖ್ಯಮಂತ್ರಿಗಳು ಕೂಡ ಸ್ಪಷ್ಟನೆ ನೀಡಿದ್ದಾರೆ ಎಂದರು.