ಜೂ18: ಪಾದಯಾತ್ರೆ ಮೂಲಕ ಜನ ಜಾಗೃತಿ ಮೂಡಿಸಿ ‘ಮಾಸ್ಕ್ ದಿನ’ ಆಚರಿಸಲು ಸರಕಾರ ಸೂಚನೆ
ಬೆಂಗಳೂರು: ಕೋವಿಡ್ 19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜೂನ್ 18 ರಂದು ರಾಜ್ಯದಾದ್ಯಂತ ಪಾದಯಾತ್ರೆ ಕೈಗೊಂಡು “ಮಾಸ್ಕ್ ದಿನ” ಆಚರಿಸುವ ಮೂಲಕ ಜನ ಜಾಗೃತಿ ಮೂಡಿಸುವಂತೆ ರಾಜ್ಯ ಸರಕಾರ ಆದೇಶ ನೀಡಿದೆ.
ಈ ಕುರಿತು ಆದೇಶ ಹೊರಡಿಸಿರುವ ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ ವಿಜಯ್ ಭಾಸ್ಕರ್ ಅವರು ಕೋವಿಡ್-19 ಸೋಂಕು ನಿಯಂತ್ರಿಸಲು ರಾಷ್ಟ್ರೀಯ ನಿರ್ದೇಶನಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಈ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಮುಖಗವಸು(MASK) ಧರಿಸುವುದು, ಸೋಪಿನಿಂದ ಕೈ ತೊಳೆಯುವುದು, ಸ್ಯಾನಿಟೈಸರ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತಿ ಪ್ರಾಮುಖ್ಯವಾದ ವೈದ್ಯಕೀಯೇತರ ಪಾಲನೆಯಾಗಿದೆ.
ಈ ಕುರಿತು ಜನ ಸಮುದಾಯದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರವು 18ನೇ ಜೂನ್ 2020 ರ ಗುರುವಾರದಂದು “ಮಾಸ್ಟ್ ದಿನ”ವನ್ನಾಗಿ ಘೋಷಿಸಲು ನಿರ್ಧರಿಸಿದೆ. – ಈ ದಿನ ಜಿಲ್ಲಾ ಮತ್ತು ತಾಲ್ಲೂಕು ಆಡಳಿತವು ಚುನಾಯಿತ ಪ್ರತಿನಿಧಿಗಳು, ಗಣ್ಯವ್ಯಕ್ತಿಗಳು, ವೈದ್ಯಕೀಯ ಸಿಬ್ಬಂದಿಗಳನ್ನು ಭಾಗವಹಿಸಿಕೊಂಡು ಪಾದಯಾತ್ರೆಯ ಮೂಲಕ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳತಕ್ಕದ್ದು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
1, ಜಿಲ್ಲಾ ತಾಲ್ಲೂಕು / ಕಾರ್ಪೋರೇಷನ್ | ಪಂಚಾಯತ್ / ಕಂದಾಯ ವ್ಯಾಪ್ತಿಯ ವಾರ್ಡ್ಗಳಲ್ಲಿ ಜಿಲ್ಲಾಡಳಿತ ಕೋವಿಡ್-19 ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ರಾಷ್ಟ್ರೀಯ ನಿರ್ದೇಶನಗಳನ್ನು ಪಾಲಿಸುವಲ್ಲಿ ಜಾಗೃತಿ ಮೂಡಿಸಲು ಪಾದಯಾತ್ರೆಯನ್ನು ಕೈಗೊಳ್ಳತಕ್ಕದ್ದು.
2. ಜನಜಾಗೃತಿ ಮೂಡಿಸುವ ಈ ಪಾದಯಾತ್ರೆ/ಸೋರುವಿಕೆಯಲ್ಲಿ 50 ಜನರಿಗೆ ಮೀರಿ ಒಂದು ನಿರ್ದಿಷ್ಟ ಪ್ರದೇಶಗಳಲ್ಲಿ ಭಾಗವಹಿಸಬಾರದು. ಪಾದಯಾತ್ರೆಯಲ್ಲಿ ಭಾಗವಹಿಸುವಂತಹವರು ಕಡ್ಡಾಯವಾಗಿ ಮಾಸ್ಕ್ನ್ನು ಧರಿಸುವುದು ಹಾಗೂ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳುವ ಮುಖೇನ ಸಮಾಜಕ್ಕೆ ಮಾದರಿಯಾಗುವುದು,
3. ಜನ ಜಾಗೃತಿ ಪಾದಯಾತ್ರೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವಿಕೆ, ಆಗಿಂದಾಗ್ಗೆ ಸೋಪಿನಿಂದ ಕೈ ತೊಳೆಯುವಿಕೆ ಹಾಗೂ ಸ್ಯಾನಿಟೈಸರ್ ಬಳಸುವಿಕೆಯಿಂದ ಆಗುವ ಉಪಯುಕ್ತತೆಯ ಅರಿವನ್ನು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು, ಪರಿಣಾಮಕಾರಿ ಸಂವಹನಕ್ಕಾಗಿ ಫಲಕಗಳನ್ನು ಬಳಸುವುದು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.