ಜೆಡಿಎಸ್ ವತಿಯಿಂದ ಜುಲೈ 22 ರಂದು ನಗರದಲ್ಲಿ ಶಾಂತಿ ಯಾತ್ರೆ
ಮಂಗಳೂರು: ರಾಜಕೀಯ ಪ್ರೇರಿತ ಗಲಭೆಗೆ ತುತ್ತಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಶಾಂತಿ ಮರುಸ್ಥಾಪನೆಯಾಗಬೇಕೆಂಬ ಉದ್ದೇಶದಿಂದ ಜಾತ್ಯಾತೀತ ಜನತಾದಳ ಇದರ ನೇತೃತ್ವದಲ್ಲಿ ವಿವಿಧ ರಾಜಕೀಯ ಪಕ್ಷ, ಸಂಘಟನೆಗಳ ಸಹಭಾಗಿತ್ವದಲ್ಲಿ ಜುಲೈ 22 ರಂದು ಶಾಂತಿ ಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮಹಮ್ಮದ್ ಕುಂಞ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮಾಜಿ ಪ್ರಧಾನಿ ದೇವೆಗೌಡ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಸಿಪಿಐಎಂ ರಾಷ್ಟ್ರೀಯ ಮುಖಂಡ ಪ್ರಕಾಶ್ ಕಾರಟ್, ಹೊರ ಜಿಲ್ಲೆಗಳ ಶಾಸಕರು ಶಾಂತಿಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು, ನಗರದ ಬಾವುಟಗುಡ್ಡೆಯಿಂದ ಶಾಂತಿ ಯಾತ್ರೆ ಆರಂಭಗೊಂಡು ಜಿಲ್ಲಾಧಿಕಾರಿ ಕಚೇರಿ ತನಕ ತೆರಳಿ ಪುರಭವನ ಬಳಿ ಸಮಾಪ್ತಿಯಾಗಿ ಬಳಿಕ ಸಭೆ ನಡೆಯಲಿದೆ ಎಂದರು.
ಮೊದಲು ಜುಲೈ 14 ರಂದು ಶಾಂತಿಯಾತ್ರೆಯನ್ನು ಆಯೋಜಿಸಿದ್ದು, ಜಿಲ್ಲಾಡಳಿತ ಪರವಾನಿಗೆ ನೀಡದ ಕಾರಣ ಅದನ್ನು ಕೈಬಿಟ್ಟಿದ್ದೇವೆ. ಅದೇ ಉದ್ದೇಶದಿಂದ ಜಿಲ್ಲಾಡಳಿತ ಆಯೋಜಿಸಿದ ಶಾಂತಿ ಸಭೆಯನ್ನು ಜೆಡಿಎಸ್ ಬಹಿಷ್ಕರಿಸಲಾಗಿತ್ತು.
ಕಾಂಗ್ರೆಸ್ ಅವಧಿಯಲ್ಲಿ ಕರಾವಳಿಯಲ್ಲಿ ಗರೀಷ್ಠ ಸಂಖ್ಯೆ ಕೋಮುಗಲಭೆಗಳು ಸಂಭವಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೆಗೌಡರು ಬಂದರೆ ತನ್ನ ವೋಟುಗಳಿಗೆ ತೊಂದರೆಯಾಗಬಹುದೆಂಬ ಹೆದರಿಕೆಯಲ್ಲಿದ್ದಾರೆ ಎಂದರು.
ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ, ಕಾರ್ಯಾಧ್ಯಕ್ಷ ರಾಂಗಣೇಶ್, ಶ್ರೀನಾಥ್ ರೈ ಹಾಗೂ ಇತರರು ಉಪಸ್ಥಿತರಿದ್ದರು.