ಜೆಪಿ ಹೆಗ್ಡೆ ಮನವಿಗೆ ಸಿಎಂ ಸ್ಪಂದನ: ಕುಂದಾಪ್ರ ಭಾಷೆ ಅಭಿವೃದ್ಧಿಗೆ ಸರ್ಕಾರದಿಂದ 50 ಲಕ್ಷ ರೂ. ಬಿಡುಗಡೆ

Spread the love

ಜೆಪಿ ಹೆಗ್ಡೆ ಮನವಿಗೆ ಸಿಎಂ ಸ್ಪಂದನ: ಕುಂದಾಪ್ರ ಭಾಷೆ ಅಭಿವೃದ್ಧಿಗೆ ಸರ್ಕಾರದಿಂದ 50 ಲಕ್ಷ ರೂ. ಬಿಡುಗಡೆ

ಕುಂದಾಪುರ: ಕುಂದಾಪ್ರ ಭಾಷಾ ಅಧ್ಯಯನ ಪೀಠಕ್ಕೆ 50 ಲಕ್ಷ ರೂ. ಅನುದಾನ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಭಾಷಾ ಅಧ್ಯಯನ ಪೀಠದ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಕಾರ್ಯಚಟುವಟಿಕೆಗಳನ್ನು ವಿಸ್ತರಣೆ ಮಾಡಲು ಅಗತ್ಯವಿರುವ ಅನುದಾನ ನೀಡುವಂತೆ ಮಂಗಳೂರು ವಿಶ್ವವಿದ್ಯಾಲಯ ಈ ಹಿಂದೆ ಸರ್ಕಾರಕ್ಕೆ ಪತ್ರ ಬರೆದಿದ್ದು, ಈ ವಿಚಾರ ಸರ್ಕಾರ ಮಟ್ಟದಲ್ಲಿ ಬಾಕಿ ಉಳಿದಿತ್ತು.

ಕಳೆದ ಫೆಬ್ರವರಿ ತಿಂಗಳಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ, ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ ಅವರು, ಈ ವಿಚಾರದ ಕುರಿತು ಸರ್ಕಾರಕ್ಕೆ ಪತ್ರ ಬರೆದು, ಉಡುಪಿ ಜಿಲ್ಲಾ ವ್ಯಾಪ್ತಿಯ ಕುಂದಾಪುರ, ಬೈಂದೂರು, ಬ್ರಹ್ಮಾವರ ತಾಲ್ಲೂಕುಗಳಲ್ಲಿ ಪೂರ್ಣವಾಗಿ, ಹೆಬ್ರಿ, ಕಾಪು ಉಡುಪಿಯೂ ಸೇರಿದಂತೆ ಕೆಲವು ಭಾಗಗಳಲ್ಲಿ ಮಾತೃ ಭಾಷೆಯಾಗಿ ಬಳಸುತ್ತಿರುವ ಕುಂದಾಪ್ರ ಭಾಷೆಯನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಕುಂದಗನ್ನಡ ಭಾಷೆಯ ಅಧ್ಯಯನ ಪೀಠದ ರಚನಾತ್ಮಕ ಕಾರ್ಯಗಳಿಗಾಗಿ ಕೊಡಲೇ ಒಂದೂವರೆ ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾಡಿದ್ದ ಮನವಿಗೆ, ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದರು.

ಈ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ಮೊದಲ ಹಂತದ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ಮುಂದೆ ಹಂತ ಹಂತವಾಗಿ ಹಣ ಬಿಡುಗಡೆಯಾಗುವ ಭರವಸೆ ಇದೆ.


Spread the love