ಜ್ಞಾನವೆಂಬ ಬೆಳಕಿನೆಡೆಗೆ ಸಾಗೋಣ: ಡಾ. ದಯಾನಂದ ನಾಯ್ಕ್
ಮಂಗಳೂರು : ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಕರ್ನಾಟಕ ಏಡ್ಸ್ ಪ್ರಿವೆನ್ಷನ್ ಸೊಸೈಟಿಯ ಸಹಯೋಗದೊಂದಿಗೆ ‘ಅಂತಾರಾಷ್ಟ್ರೀಯ ಯುವ ದಿನಾಚರಣೆ’ ಮತ್ತು ಪ್ರಸಕ್ತ ಶೈಕ್ಷಣಿಕ ವರ್ಷದ ಎನ್ಎಸ್ಎಸ್ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ರವೀಂದ್ರ ಕಲಾಭವನದಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಸಹಪ್ರಾಧ್ಯಾಪಕ ಡಾ. ದಯಾನಂದ ನಾಯ್ಕ್, ವಿದ್ಯಾರ್ಥಿಗಳು ಅಜ್ಞಾನವೆಂಬ ಕತ್ತಲಿನಿಂದ ಜ್ಞಾನವೆಂಬ ಬೆಳಕಿನೆಡೆಗೆ ಸಾಗಬೇಕು. ಸೇವೆಯಲ್ಲೇ ಸಾರ್ಥಕತೆ ಬೆಳೆಸಿಕೊಳ್ಳುವ ಮನೋಭಾವ ರೂಢಿಸಿಕೊಳ್ಳಬೇಕು, ಎಂದರು. ಮುಖ್ಯ ಅತಿಥಿ ಜಿಲ್ಲಾ ಏಡ್ಸ್ ತಡೆ ಮತ್ತು ನಿಯಂತ್ರಣ ಘಟಕದ (ಡಿಎಪಿಯುಸಿ) ಜಿಲ್ಲಾ ಮೇಲ್ವಿಚಾರಕ ಮಹೇಶ್, ಯುವ ದಿನಾಚರಣೆ ಮತ್ತು ಆರೋಗ್ಯವಂತ ಸಮಾಜದ ಮಹತ್ವವನ್ನು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಉದಯ ಕುಮಾರ್ ಎಂ.ಎ, ದೈಹಿಕ ಶ್ರಮದ ಅನುಕೂಲತೆಗಳನ್ನು ತಿಳಿಹೇಳಿದರು. ಇದೇ ವೇಳೆ ಹೊಸ ಎನ್ಎಸ್ಎಸ್ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರಿಸಲಾಯಿತು. ಶುಕ್ರವಾರ ನಡೆದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಕಾಲೇಜನ್ನು ಪ್ರತಿನಿಧಿಸಿದ ಎನ್ಎಸ್ಎಸ್ ಸ್ವಯಂಸೇವಕರನ್ನು ಅಭಿನಂದಿಸಲಾಯಿತು.
ಎನ್ಎಸ್ಎಸ್ ಘಟಕಾಧಿಕಾರಿ, ಅರ್ಥಶಾಸ್ತ್ರ ಪ್ರಾಧ್ಯಾಪಕ ಸುರೇಶ್, ಉಪನ್ಯಾಸಕ ಧೀರಜ್ ಉಪಸ್ಥಿತರಿದ್ದರು.