ಜ್ವರ, ಕೆಮ್ಮು, ಉಸಿರಾಟದ ತೊಂದರೆ – ಫೀವರ್ ಕ್ಲಿನಿಕ್ ಸಂಪರ್ಕಿಸಲು ಸೂಚನೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತವು ಫೆಬ್ರವರಿ 2020 ರಿಂದಲೇ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಕೋವಿಡ್-19 ರ ನಿಯಂತ್ರಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ವಿದೇಶೀ ಪ್ರಯಾಣದ ಇತಿಹಾಸ ಹೊಂದಿರುವ ಪ್ರತಿಯೊಂದು ಮನೆಯ ಮಾಹಿತಿಯನ್ನು ಕಲೆ ಹಾಕಿ ಗೃಹ ನಿಗಾವಣೆಯಲ್ಲಿರುವವರನ್ನು ಸಂಪರ್ಕಿಸಿ, ಅವರ ಆರೋಗ್ಯ ವಿಷಯದ ಬಗ್ಗೆ ಹೆಚ್ಚಿನ ಗಮನವನ್ನು ವಹಿಸಲಾಗುತ್ತಿದೆ.
ಸಾರ್ವಜನಿಕರು ತಮಗೆ ಜ್ವರ, ಕೆಮ್ಮ, ಉಸಿರಾಟದ ತೊಂದರೆ ಇದ್ದಲ್ಲಿ ನೇರವಾಗಿ ಹತ್ತಿರದ ಫೀವರ್ ಕ್ಲಿನಿಕ್ ಸಂಪರ್ಕಿಸಲು ತಿಳಿಸಲಾಗಿದೆ. ಕೋವಿಡ್ ಪರೀಕ್ಷೆಗೊಳಪಡಿಸುವ ಗೃಹ ಅಥವಾ ಸರಕಾರಿ ನಿಗಾವಣೆಯಲ್ಲಿರುವ ಭಯದಿಂದ ಅಥವಾ ಸಂಕೋಚದಿಂದ ತಮ್ಮ ಆರೋಗ್ಯದ ವಿಷಯದ ಬಗ್ಗೆ ಸಾರ್ವಜನಿಕರು ಮುಕ್ತವಾಗಿ ತಮ್ಮ ಆರೋಗ್ಯ ಸಮಸ್ಯೆಗಳ ಮಾಹಿತಿಯನ್ನು ಅಧಿಕಾರಿಗಳೊಂದಿಗೆ ಹಂಚಿಕೊಳ್ಳದಿರುವುದು ತೀರಾ ವಿಷಾದನೀಯ.
ಖಾಸಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳಲ್ಲಿಯೂ ಸಹ ಜ್ವರ, ಉಸಿರಾಟದ ತೊಂದರೆ ಇರುವಂತಹ ರೋಗಿಗಳ ಬಗ್ಗೆ ಮಾಹಿತಿಯನ್ನು ಕಡ್ಡಾಯವಾಗಿ ನೀಡಲು ಈಗಾಗಲೇ ಆದೇಶಿಸಲಾಗಿದೆ. ಅದರಂತೆ ಎಲ್ಲಾ ಖಾಸಗಿ ವೈದ್ಯಾಧಿಕಾರಿಗಳು ಸಹ ಮಾಹಿತಿಯನ್ನು ನೀಡಲು ಸೂಚಿಸಲಾಗಿದೆ. ಇಲ್ಲವಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ, ಈವರೆಗೆ ಪರೀಕ್ಷೆಗೊಳಪಟ್ಟಿರುವಂತಹ ಯಾವೊಬ್ಬ ವ್ಯಕ್ತಿಯ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಿರುವುದಿಲ್ಲ. ಸೋಂಕಿತ ಕೋವಿಡ್ ರೋಗಿಗಳ ಸಂಖ್ಯೆಗಳ ಮಾಹಿತಿಯನ್ನು ಮಾತ್ರ ಸಾರ್ವಜನಿಕರ ಮಾಹಿತಿಗಾಗಿ ನೀಡಲಾಗುತ್ತಿದೆ. ಇದು ಸಹ ಸಾರ್ವಜನಿಕರು ವಹಿಸಬೇಕಾದ ಮುಂಜಾಗರೂಕತಾ ಕ್ರಮಕ್ಕಾಗಿ ನೀಡುವ ಮಾಹಿತಿ ಆಗಿರುತ್ತದೆ.
ಆದ್ದರಿಂದ ಸಾರ್ವಜನಿಕರು ಯಾವುದೇ ಸಂಕೋಚಪಡದೆ, ತಮ್ಮ ಕುಟುಂಬದ ಹಾಗೂ ಇತರರ ರಕ್ಷಣೆಗಾಗಿ ಜನವರಿ ತಿಂಗಳಿನಿಂದ ವಿದೇಶದಿಂದ ಜಿಲ್ಲೆಗೆ ಆಗಮಿಸಿರುವವರ ಮಾಹಿತಿಯನ್ನು ನೀಡುವುದು ಸಾರ್ವಜನಿಕರ ಆದ್ಯ ಕರ್ತವ್ಯವಾಗಿರುತ್ತದೆ.
ತಮ್ಮ ಕುಟುಂಬದಲ್ಲಿ ಯಾರಿಗಾದರೂ ಜ್ವರ, ಕೆಮ್ಮು, ಉಸಿರಾಟದ ತೊಂದರೆ ಇದ್ದಲ್ಲಿ ಕೂಡಲೇ ಸರಕಾರಿ ವೈದ್ಯಾಧಿಕಾರಿಗಳ ಗಮನಕ್ಕೆ ತರಲು ಅಥವಾ 1077 ಸಂಖ್ಯೆಗೆ ಕಾಲ್ ಮಾಡಿ ಮಾಹಿತಿ ನೀಡಲು ತಿಳಿಸಲಾಗಿದೆ.
ಈ ರೀತಿ ತ್ವರಿತವಾಗಿ ಮಾಹಿತಿಯನ್ನು ನೀಡುವುದರಿಂದ ಸಕಾಲದಲ್ಲಿ ಚಿಕಿತ್ಸೆ ದೊರೆತು ಗುಣಪಡಿಸಬಹುದಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.