ಜ. 12-13ರಂದು ಮಂಗಳೂರಿನಲ್ಲಿ ‘ರಿವರ್ ಫೆಸ್ಟಿವಲ್’
ಮಂಗಳೂರು: ಜಿಲ್ಲಾಡಳಿತ ಮತ್ತು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಕರಾವಳಿ ಉತ್ಸವದ ಅಂಗವಾಗಿ ‘ರಿವರ್ ಫೆಸ್ಟಿವಲ್’ ಎಂಬ ಕಾರ್ಯಕ್ರಮ ಜನವರಿ 12 ಮತ್ತು 13ರಂದು ಕೂಳೂರು, ಬಂಗ್ರಕೂಳೂರು ಪಡಕೋಡಿ, ಸುಲ್ತಾನ್ ಬತ್ತೇರಿಯಲ್ಲಿ ನಡೆಸಲಿದೆ.
ಇಂದು ಕಾರ್ಯಕ್ರಮ ಆಯೋಜನೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉತ್ಸವ ಆಯೋಜನೆ ಸಂಬಂಧ ವಿವಿಧ ಸಮಿತಿಗಳನ್ನು ರಚಿಸಲಾಯಿತು.
ಕೂಳೂರು ಸೇತುವೆ, ಬಂಗ್ರಕೂಳೂರು ಪಡಕೋಡಿ, ಸುಲ್ತಾನ್ ಬತ್ತೇರಿ ನದಿ ತೀರಗಳಲ್ಲಿ ವಾಟರ್ ಸ್ಪೋಟರ್ಸ್, ರಿವರ್ ಕ್ರ್ಯೂಜ್, ಫ್ಲೋಟಿಂಗ್ ಫುಡ್ ಸ್ಟಾಲ್ಸ್, ಆಹಾರ ಮಳಿಗೆಗಳು, ಪ್ರದರ್ಶನ ಮಳಿಗೆಗಳನ್ನು ಹಮ್ಮಿಕೊಳ್ಳಲಾಗುವುದು.
ನದಿಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶವಿದ್ದು, ಪರಿಸರ ಸ್ನೇಹಿ ಪ್ರವಾಸೋದ್ಯಮ ಬೆಳವಣಿಗೆ ಗಮನದಲ್ಲಿರಿಸಿ ಎರಡು ದಿನಗಳ ಕಾಲ ನದಿಯಲ್ಲಿ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಉತ್ಸವದಲ್ಲಿ ಪಾಲ್ಗೊಳ್ಳಲು ಫೆರ್ರಿಗಳನ್ನು ಸಜ್ಜುಗೊಳಿಸಲಾಗುವುದು; ವಾಹನ ಪ್ರವೇಶಕ್ಕೆ ಅವಕಾಶವಿಲ್ಲ; ಸೈಕಲ್ ಅಥವಾ ಕಾಲ್ದಾರಿಯಲ್ಲಿ ತೀರ ತಲುಪಬಹುದು. ಬಂಗ್ರಕೂಳೂರು ಪಡಕೋಡಿ, ತಣ್ಣೀರುಬಾವಿ, ಸುಲ್ತಾನ ಬತ್ತೇರಿಯಲ್ಲಿ ಫೆರ್ರಿಗಳು ಸಂಚರಿಸಲಿದೆ. ಇದಕ್ಕಾಗಿ ತೀರಗಳಲ್ಲಿ ತಾತ್ಕಾಲಿಕ ಜಟ್ಟಿಗಳನ್ನು ನಿರ್ಮಿಸಲಾಗುವುದು.
ಸ್ಥಳೀಯ ಮೀನುಗಾರರ ನೆರವಿನೊಂದಿಗೆ ಹಾಗೂ ಪರಿಣತರ ತಂಡದ ಸಹಕಾರದಿಂದ ರಕ್ಷಣಾ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಉತ್ಸವ ಸ್ಥಳಗಳಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್ ನಿಷೇಧವಿದೆ ಎಂದೂ ಜಿಲ್ಲಾಧಿಕಾರಿಗಳು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾದ ಉದಯ್ ಶೆಟ್ಟಿ, ಮೂಡಾ ಆಯುಕ್ತ ಶ್ರೀಕಾಂತ್ ರಾವ್ ಅವರನ್ನೊಳಗೊಂಡಂತೆ ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಅಧಿಕಾರೇತರ ಸಮಿತಿ ಸದಸ್ಯರು ಪಾಲ್ಗೊಂಡರು.