ಜ. 17ರಂದು ‘ಬಹು ಸಂಸ್ಕೃತಿ ಉತ್ಸವ’; ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟನೆ: ಮುಲ್ಲೈ ಮುಗಿಲನ್
ಮಂಗಳೂರು: ರಾಜ್ಯಕ್ಕೆ ಕರ್ನಾಟಕ ಎಂಬ ನಾಮಕರಣದ 50 ವರ್ಷಗಳ ಹಿನ್ನೆಲೆಯಲ್ಲಿ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಘೋಷಣೆಯಲ್ಲಿ ನಡೆಯುತ್ತಿರುವ ಸುವರ್ಣ ಕರ್ನಾಟಕ ಸಂಭ್ರಮದ ಭಾಗವಾಗಿ ದ.ಕ., ಉಡುಪಿ ಮತ್ತು ಕೊಡಗು ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ ಜ. 17ರಂದು ಮಂಗಳೂರಿನ ಕುದ್ಮುಲ್ ರಂಗ ರಾವ್ ಪುರಭವನದಲ್ಲಿ ಬಹು ಸಂಸ್ಕೃತಿ ಉತ್ಸವ ಆಯೋಜಿಸಲಾಗಿದೆ.
ತುಳು, ಬ್ಯಾರಿ, ಕೊಂಕಣಿ, ಅರೆಭಾಷೆ, ಯಕ್ಷಗಾನ ಹಾಗೂ ಕೊಡವ ಸಾಹಿತ್ಯ ಅಕಾಡೆಮಿಗಳ ಸಹಭಾಗಿತ್ವದಲ್ಲಿ ನಡೆಯಲಿರುವ ಈ ಬಹು ಸಂಸ್ಕೃತಿ ಉತ್ಸವಕ್ಕೆ ಬೆಳಗ್ಗೆ 10 ಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಬುಧವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪುಸ್ತಕ ಪ್ರದರ್ಶನ ಮಳಿಗೆ ಉದ್ಘಾಟಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ಎಸ್. ತಂಗಡಗಿ ಆಶಯ ಭಾಷಣ ಮಾಡಲಿದ್ದಾರೆ. ಬಹು ಸಂಸ್ಕೃತಿ ಉತ್ಸವದ ಭಾಗವಾಗಿ ಸಂತ ಅಲೋಶಿಯಸ್ ಕಾಲೇಜು ಆವರಣದಿಂದ ವಿವಿಧ ಅಕಾಡೆಮಿಗಳ ಕಲಾ ತಂಡಗಳಿಂದ ಸಂಜೆ 4.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಬಹು ಸಂಸ್ಕೃತಿ ಉತ್ಸವದ ಅಂಗವಾಗಿ ಮೂರು ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದ್ದು, ‘ಕರ್ನಾಟಕಕ್ಕೆ ಒಡನಾಡಿ ಭಾಷಾ ಸಮುದಾಯಗಳ ಕೊಡುಗೆ’ ಎಂಬ ವಿಷಯದಲ್ಲಿ ಆಯ್ದ ವಿದ್ಯಾರ್ಥಿಗಳು ವಿಚಾರ ಮಂಡಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಎಚ್., ಕೊಕಂಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್, ಜಿ.ಪಂ. ಸಿಇಒ ಡಾ. ಆನಂದ್, ಪಾಲಿಕೆ ಆಯುಕ್ತ ಆನಂದ್ ಸಿ.ಎಲ್. ಇನ್ನಿತರರು ಉಪಸ್ಥಿತರಿದ್ದರು.