ಜ13: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಹಾಗೂ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ

Spread the love

ಜ13: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಹಾಗೂ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ

ಕಲ್ಯಾಣಪುರ: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಹಾಗೂ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ಸಮಾರಂಭ ಜನವರಿ 13 ರಂದು ಜರಗಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ ಜೆರಾಲ್ಡ್ ಪಿಂಟೊ ಹೇಳಿದರು.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ಕಲ್ಯಾಣಪುರ ಪರಿಸರದ ಕೃಷಿಕರ ಮಕ್ಕಳು ತಮ್ಮ ಹೊಲಗದ್ದೆಗಳಿಂದ ನೇರವಾಗಿ ಕಾಲೇಜಿಗೆ ಬರುವಂತಾಗಬೇಕು ಎಂಬ ಉದಾತ್ತ ಧ್ಯೇಯದೊಂದಿಗೆ ರೆ.ಫಾ.ಮೊನ್ಸಿಂಜೊರ್.ಡಿ.ಜೆ.ಡಿಸೋಜ ತನ್ನ 83ನೇ ಇಳಿವಯಸ್ಸಿನಲ್ಲಿ ಅಂದರೆ 1967ರಲ್ಲಿ ಮಿಲಾಗ್ರಿಸ್ ಕಾಲೇಜಿಗೆ ಜನ್ಮ ನೀಡಿದರು. ಆ ಕಾಲದ ಖ್ಯಾತ ಇತಿಹಾಸ ಸಂಶೋಧಕರಾದ ಪಾದೂರು ಗುರುರಾಜ ಭಟ್ಟರು ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿ ಶೈಕ್ಷಣಿಕ ನಾಯಕತ್ವ ನೀಡುವುದರ ಮೂಲಕ ಕಾಲೇಜನ್ನು ಮುನ್ನಡೆಸಿದರು.
ಆರಂಭದಲ್ಲಿ ಪದವಿಪೂರ್ವ ವಿಭಾಗದಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗ ಮತ್ತು ಪದವಿ ವಿಭಾಗದಲ್ಲಿ ಬಿ.ಎ. ಹಾಗೂ ಬಿ.ಕಾಂ. ತರಗತಿ ಹೊಂದಿತ್ತು. 1981ರಲ್ಲಿ ಪಿ.ಯು. ವಿಜ್ಞಾನ ನಂತರ ಬಿ.ಎಸ್ಸಿ. ಪದವಿ ಅನಂತರ ಬಿ.ಬಿ.ಎಂ., ಬಿ.ಸಿ.ಎ., ಎಂ.ಎಸ್.ಡಬ್ಲ್ಯೂ. ಹಾಗೂ ಎಂ.ಕಾಂ. ಸ್ನಾತಕೋತ್ತರ ವಿಭಾಗಗಳನ್ನು ಆರಂಭಿಸಲಾಯಿತು.
ಆರಂಭದ ದಿನಗಳಲ್ಲಿ ಮಿಲಾಗ್ರಿಸ್ ಹೈಸ್ಕೂಲಿನ ಕಟ್ಟಡದಲ್ಲಿ ತರಗತಿಗಳನ್ನು ನಡೆಸಿದರೆ 1967ರಲ್ಲಿ ಎರಡಂತಸ್ತಿನ ಕಾಲೇಜು ಕಟ್ಟಡವನ್ನು ನಿರ್ಮಿಸಲಾಯಿತು. ಯುಜಿಸಿ ಹಾಗೂ ಸಾರ್ವಜನಿಕರ ಸಹಾಯದಿಂದ ಪ್ರತ್ಯೇಕ ವಿಜ್ಞಾನ ವಿಭಾಗ, ಪ್ರಯೋಗಾಲಯ, ಸುಸಜ್ಜಿತ ಗ್ರಂಥಾಲಯ, ಆಟದ ಮೈದಾನ, ವಿದ್ಯಾರ್ಥಿನಿಯರ ವಸತಿಗೃಹ, ಕ್ಯಾಂಟೀನ್, ಮುಂತಾದವುಗಳನ್ನು ನಿರ್ಮಿಸಲಾಯಿತು. 1992ರ ಬೆಳ್ಳಿಹಬ್ಬದ ಸವಿನೆನಪಿಗಾಗಿ ಸಿಲ್ವರ್ ಜುಬಿಲಿ ಹಾಲ್ ನಿರ್ಮಾಣ ನಂತರ ಆಡಿಯೋ ವಿಜುವಲ್ ಹಾಲ್‍ಗಳನ್ನು ನಿರ್ಮಿಸಲಾಯಿತು. 2011ರಲ್ಲಿ ಮೂರಂತಸ್ತಿನ ಸುಸಜ್ಜಿತವಾದ ಇನ್ನೊಂದು ಕಟ್ಟಡವನ್ನು ನಿರ್ಮಿಸಲಾಯಿತು.

231 ವಿದ್ಯಾರ್ಥಿಗಳಿಂದ ಆರಂಭಗೊಂಡ ಈ ಶಿಕ್ಷಣ ಕೇಂದ್ರವು ಇಂದು ಸುಮಾರು 1800 ವಿದ್ಯಾರ್ಥಿಗಳು, 95 ಶಿಕ್ಷಕರು ಹಾಗೂ 30 ಆಡಳಿತ ಸಿಬ್ಬಂದಿಯೊಂದಿಗೆ ಹಲವಾರು ರಾಷ್ಟ್ರ ಮಟ್ಟದ ಹಾಗೂ ಅಂತರಾಷ್ಟ್ರೀಯ ಸಾಧನೆಯೊಂದಿಗೆ ಒಂದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಬೆಳದು ನಿಂತಿದೆ.
ಕಾರ್ಯಕ್ರಮಗಳು:
ದಿನಾಂಕ 12ರಂದು ಬೆಳಿಗ್ಗೆ 9.30ಕ್ಕೆ ಮಿಲಾಗ್ರಿಸ್ ಕೆಥೆದ್ರಲ್‍ನಲ್ಲಿ ಪರಮಪೂಜ್ಯ ಬಿಷಪ್‍ರವರು ಇತರ ಧರ್ಮಗುರುಗಳೊಂದಿಗೆ ಮಿಲಾಗ್ರಿಸ್ ಮಾತೆಗೆ ಕೃತಜ್ಞತಾ ಬಲಿಪೂಜೆಯನ್ನು ಅರ್ಪಿಸಲಿರುವರು. ಜನವರಿ 13ರಂದು ಬೆಳಿಗ್ಗೆ 9.30ಕ್ಕೆ ಉಡುಪಿ ಕ್ಯಾಥೊಲಿಕ್ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಜೆರಾಲ್ಡ್ ಐಸಾಕ್ ಲೋಬೋರವರ ಅಧ್ಯಕ್ಷತೆಯಲ್ಲಿ ಸುವರ್ಣ ಸಮಾರಂಭ ನಡೆಯಲಿದೆ. ಕರ್ನಾಟಕ ಸರಕಾರದ ಯುವ ಸಬಲೀಕರಣ ಕ್ರೀಡೆ ಹಾಗೂ ಮೀನುಗಾರಿಕಾ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್‍ರವರು ಕರ್ನಾಟಕ ಸರಕಾರದ ಮುಖ್ಯ ಸಚೇತಕರಾದ ಶ್ರೀ ಐವನ್ ಡಿ’ಸೋಜಾರವರು ಮುಖ್ಯ ಅತಿಥಿಗಳಾಗಿರುತ್ತಾರೆ. ರಾಜ್ಯಸಭಾ ಸದಸ್ಯರಾದ ಶ್ರೀ ಆಸ್ಕರ್ ಫೆರ್ನಾಂಡಿಸ್‍ರವರು ಸುವರ್ಣ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಜನಾರ್ಧನ್ ತೋನ್ಸೆ, ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಧನಂಜಯ್ ಕುಂದರ್, ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪುಷ್ಪಾ ಕೋಟ್ಯಾನ್, ಹಳೆವಿದ್ಯಾರ್ಥಿ ಶ್ರೀ ಆಲ್ಫ್ರೆಡ್ ಕ್ರಾಸ್ಟೊ, ಉಡುಪಿ ಕೆಥೊಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ರೆ.ಫಾ.ಡಾ. ಲಾರೆನ್ಸ್ ಸಿ ಡಿ’ಸೋಜಾ, ಮೊದಲಾದ ಗಣ್ಯರು ಉಪಸ್ಥಿತರಿರುವರು.
ಸನ್ಮಾನ:
ಸುವರ್ಣ ಸಂಭ್ರಮದ ಸಮಾರಂಭದಲ್ಲಿ ಕಾಲೇಜಿನ ಸ್ಥಾಪನೆಯಲ್ಲಿ ಸಹಕರಿಸಿದ ರೆ. ಫಾ. ವಿಲಿಯಂ ಗೊನ್ಸಾಲ್ವಿಸ್ ಹಾಗೂ ಶ್ರೀ ಶಿರ್ತಾಡಿ ವಿಲಿಯಂ ಪಿಂಟೊ ಅಲ್ಲದೇ ಕಾಲೇಜಿನ ಸಂಚಾಲಕರಾಗಿ ಸೇವೆ ಸಲ್ಲಿಸಿದ ಧರ್ಮಗುರುಗಳನ್ನು, ನಿವೃತ್ತ ಪ್ರಾಂಶುಪಾಲರು, ಶಿಕ್ಷಕರು ಹಾಗೂ ಸಿಬ್ಬಂದಿಯವರನ್ನು ಗೌರವಿಸಲಾಗುವುದು. ಅಲ್ಲದೇ ವಿಶಿಷ್ಟ ಸಾಧನೆಗೈದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಕೂಡ ಗೌರವಿಸಲಾಗುವುದು. ಕಲ್ಯಾಣಪುರ ಸುತ್ತಮುತ್ತಲಿನಲ್ಲಿ ವಿವಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆಗೈದ ಈ ಕೆಳಗಿನ ಸಾರ್ವಜನಿಕರನ್ನು ಕೂಡ ಸನ್ಮಾನಿಸಲಾಗುವುದು. ಚಿತ್ರಕಲೆ – ಶ್ರೀ ಪೀಟರ್ ಎ ಲೂವಿಸ್, ಸಾಹಿತ್ಯ ಹಾಗು ಜನಪದ – ಶ್ರೀಮತಿ ಎಂ ಜಾನಕಿ ಬ್ರಹ್ಮಾವರ, ಅಂಚೆ ಚೀಟಿ ಸಂಗ್ರಹದಲ್ಲಿ ಗಿನ್ನಿಸ್ ದಾಖಲೆಯ ಶ್ರೀ ಡೇನಿಯಲ್ ಮೊಂತೇರೋ ಬ್ರಹ್ಮಾವರ.
ಸಾಂಸ್ಕøತಿಕ ಕಾರ್ಯಕ್ರಮ: ಅಪರಾಹ್ನ 1.30 ಕ್ಕೆ ಪದವಿ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ ಸ್ಟ್ಯಾನಿ ಬಿ ಲೋಬೊ, ಕ್ಯಾಂಪಸ್ ನಿರ್ದೇಶಕರಾದ ವಂ ಡಾ ಪ್ರಕಾಶ್ ಅನಿಲ್ ಕ್ಯಾಸ್ತಲಿನೋ, ಪಿಯು ಕಾಲೇಜಿನ ಪ್ರಾಂಶುಪಾಲೆ ಸವಿತಾ ಕೆ ಉಪಸ್ಥಿತರಿದ್ದರು.


Spread the love