ಟಿಪ್ಪು ಜಯಂತಿಗೆ ಬಿಜೆಪಿ ವಿರೋಧ; ಟಿಪ್ಪು ಕೊಂಡಾಡಿದ ರಾಷ್ಟ್ರಪತಿ ಕೋವಿಂದ್
ಬೆಂಗಳೂರು: ಒಂದೆಡೆ ಸಿದ್ದರಾಮಯ್ಯ ಸರ್ಕಾರದ ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಈ ಹಿಂದೆ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮೈಸೂರು ಹುಲಿ ಟಿಪ್ಪು ಸುಲ್ತಾನ್ ರನ್ನು ಕೊಂಡಾಡಿದ್ದಾರೆ.
ರಾಜ್ಯದ ಶಕ್ತಿ ಸೌಧ ವಿಧಾನಸೌಧಕ್ಕೆ 60 ವರ್ಷ ತುಂಬಿರುವ ಹಿನ್ನಲೆಯಲ್ಲಿ ಇಂದು ನಡೆಯುತ್ತಿರುವ ವಿವಿಧ ವಿಶೇಷ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಇಂದು ವಿಧಾನ ಮಂಡಲ ಅಧಿವೇಶನವನ್ನು ಉದ್ದೇಶಿಸಿ ವಿಶೇಷ ಭಾಷಣ ಮಾಡಿದರು. ಈ ವೇಳೆ ರಾಜ್ಯದ ಇತಿಹಾಸವನ್ನು ಮೆಲುಕು ಹಾಕಿದ ಕೋವಿಂದ್, ಟಿಪ್ಪು ಸುಲ್ತಾನ್ ಮತ್ತು ಆ ಕಾಲದ ರಾಜ್ಯಭಾರವನ್ನು ಕೊಂಡಾಡಿದರು.
ಕರ್ನಾಟಕ ವೀರ ಯೋಧರ ಭೂಮಿಯಾಗಿದ್ದು, ರಾಣಿ ಅಬ್ಬಕ್ಕ, ವಿಜಯನಗರದ ಅರಸರು, ಕಿತ್ತೂರು ರಾಣಿ ಚೆನ್ನಮ್ಮ, ಕೇಂಪೇಗೌಡ ಅವರು ಇಲ್ಲಿ ರಾಜ್ಯವನ್ನಾಳಿದ್ದಾರೆ. ಅಂತೆಯೇ ಮೈಸೂರನ್ನು ಆಳಿದ್ದ ಟಿಪ್ಪು ಸುಲ್ತಾನ್ ಅಪ್ರತಿಮ ವೀರ ಯೋಧನಾಗಿದ್ದ. ರಾಕೆಟ್ ತಂತ್ರಜ್ಞಾನದ ಜನಕನಾಗಿದ್ದ ಟಿಪ್ಪು ಎಂದು ಕೋವಿಂದ್ ಕೊಂಡಾಡಿದ್ದಾರೆ.
ಅತ್ತ ಕೋವಿಂದ್ ಅವರ ಬಾಯಲ್ಲಿ ಟಿಪ್ಪು ಸುಲ್ತಾನ್ ಹೆಸರು ಕೇಳುತ್ತಿದ್ದಂತೆಯೇ ಇತ್ತ ಸದನದಲ್ಲಿದ್ದ ಬಿಜೆಪಿ ಸದಸ್ಯರು ಪೇಚು ಮೊರೆ ಹಾಕಿಕೊಂಡಿರುವುದು ಕಂಡುಬಂತು. ಕೋವಿಂದ್ ಅವರ ಈ ಭಾಷಣ ಇದೀಗ ಟಿಪ್ಪು ಜಯಂತಿ ವಿರೋಧಿಸುತ್ತಿರುವ ಬಿಜೆಪಿ ಪಕ್ಷದ ಮುಖಂಡರಿಗೆ ಮುಜುಗರವನ್ನುಂಟು ಮಾಡಿದೆ.
ಭಂಗಿ ದೇವರಿಗೆ ಹೆಂಡಗುಡುಕ ಪೂಜಾರಿ